Loksabha Election 2024 | ನಾಮಪತ್ರ ಸಲ್ಲಿಕೆ ಕೇಂದ್ರಗಳ 100 ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ
x

Loksabha Election 2024 | ನಾಮಪತ್ರ ಸಲ್ಲಿಕೆ ಕೇಂದ್ರಗಳ 100 ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದ ನಾಮಪತ್ರ ಸಲ್ಲಿಕೆ ಕೇಂದ್ರಗಳ ಪ್ರದೇಶದಲ್ಲಿ ಮಾ.28 ರಿಂದ ಎ.8 ರವರೆಗೆ ನಿಷೇಧಾಜ್ಞೆ ಹೇರಲಾಗಿದೆ


ಬೆಂಗಳೂರು: 2024ರ ಲೋಕಸಭಾ ಚುನಾವಣೆಯ ಅಧಿಕೃತ ಪ್ರಕ್ರಿಯೆಗಳು ರಾಜ್ಯದಲ್ಲಿ ಗುರುವಾರದಿಂದ (ಮಾ.28) ಆರಂಭವಾಗುತ್ತಿವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ನಾಮಪತ್ರ ಸಲ್ಲಿಕೆ ಕೇಂದ್ರಗಳ ಪ್ರದೇಶದಲ್ಲಿ ಪೊಲೀಸ್ ಇಲಾಖೆ ನಿಷೇಧಾಜ್ಞೆ ವಿಧಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು, ನಾಮಪತ್ರ ಸ್ವೀಕರಿಸುವ ಎಲ್ಲಾ ಚುನಾವಣಾಧಿಕಾರಿಗಳ ಕಚೇರಿಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಮಾರ್ಚ್ 28 ರ ಬೆಳಗ್ಗೆ 10 ಗಂಟೆಯಿಂದ ಎಪ್ರಿಲ್ 08 ರ ಸಂಜೆ 6 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

144 ಸೆಕ್ಷನ್ ಜಾರಿಯಲ್ಲಿರುವುದರಿಂದ, ಕೇಂದ್ರಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ಕಾನೂನು ಭಂಗವುಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರು ಸೇರಬಾರದು. ಮೆರವಣಿಗೆ, ಸಭೆ, ಮತ್ತು ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಇಲಾಖೆ ಪ್ರಕಟಿಸಿದೆ..

ಶಸ್ತ್ರಾಸ್ತ್ರಗಳನ್ನು, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಮೊದಲಾದ ಮಾರಕಾಯುಧಗಳನ್ನು ಹಾಗೂ ದೈಹಿಕ ಹಿಂಸೆ ಉಂಟು ಮಾಡುವ ವಸ್ತುಗಳನ್ನು ಒಯ್ಯಬಾರದು, ಯಾವುದೇ ಸ್ಪೋಟಕ ವಸ್ತುಗಳನ್ನು ಸಿಡಿಸುವುದು ಕಲ್ಲುಗಳನ್ನು, ಕ್ಷಿಪಣಿಗಳ ಎಸೆಯುವ ಸಾಧನಗಳು ಅಥವಾ ಉಪಕರಣಗಳನ್ನು ಒಯ್ಯಬಾರದು ಮತ್ತು ಶೇಖರಿಸಬಾರದು. ಹಾಗೂ ವ್ಯಕ್ತಿಗಳ ಅಥವಾ ಅವರ ಪ್ರತಿಕೃತಿ ಪ್ರದರ್ಶನ, ಪ್ರಚೋದಾನತ್ಮಕ ಘೋಷಣೆ, ಸಂಜ್ಞೆ, ಹಾಡು, ಸಂಗೀತ ನುಡಿಸುವುದು ಸೇರಿದಂತೆ, ಚಿತ್ರ-ಸಂಕೇತ-ಭಿತ್ತಿಪತ್ರಗಳ ಪ್ರದರ್ಶನವನ್ನು ಕೂಡಾ ಮಾಡಬಾರದೆಂದು ನಿಷೇಧಾಜ್ಞೆಯಲ್ಲಿ ತಿಳಿಸಲಾಗಿದೆ.

Read More
Next Story