ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಶಾಲೆಗೆ ಹುಸಿ ಬಾಂಬ್ ಬೆದರಿಕೆ
ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ದಿ ಇಂಡಿಯನ್ ಪಬ್ಲಿಕ್ ಸ್ಕೂಲ್ಗೆ ಗುರುವಾರ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಪೊಲೀಸರು ಸಂಪೂರ್ಣ ತಪಾಸಣೆ ನಡೆಸಿದ್ದಾರೆ.
ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ದಿ ಇಂಡಿಯನ್ ಪಬ್ಲಿಕ್ ಶಾಲೆಗೆ ಗುರುವಾರ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಇದರಿಂದ ಶಾಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಸಂಪೂರ್ಣ ತಪಾಸಣೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ತಿಳಿದುಬಂದಿದೆ.
ಶಾಲಾ ಆಡಳಿತಾಧಿಕಾರಿ ಪದ್ಮನಿ ರಾಘವೇಂದ್ರ ಅವರು ಎಂದಿನಂತೆ ಗುರುವಾರ ಬೆಳಗ್ಗೆ ಶಾಲೆಗೆ ಬಂದಿದ್ದರು. ಇ-ಮೇಲ್ ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಫಾದರ್ ಕೊಡಾಚಿ ಹೆಸರಿನ coldghost456@gmail.com ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಶಾಲೆಯ ಸುತ್ತಲೂ ಐದು ಬಾಂಬ್‌ಗಳನ್ನು ಇರಿಸಲಾಗಿದೆ. ಮಧ್ಯಾಹ್ನ 1.30ರ ವೇಳೆಗೆ ಎಲ್ಲ ಬಾಂಬ್‌ಗಳು ಸ್ಫೋಟವಾಗಲಿವೆ ಎಂದು ತಿಳಿಸಲಾಗಿತ್ತು. ಇದನ್ನು ಓದಿದ ನಂತರ ಗಾಬರಿಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಪೊಲೀಸರು ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ತಕ್ಷಣವೇ ಶಾಲಾ ಆವರಣಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ವಸ್ತುಗಳು ಪತ್ತೆಯಾಗದ ಹಿನ್ನಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಸೆಕ್ಷನ್ 66 (f) (ಸೈಬರ್ ಭಯೋತ್ಪಾದನೆ) ಮತ್ತು ಸೆಕ್ಷನ್ 351 (4) (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ,) ಮತ್ತು ನ್ಯಾಯ ಸಂಹಿತಾ (BNS) 353 (1) (ಬಿ) (ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಳೆದ ವರ್ಷ ಡಿಸೆಂಬರ್ 1 ರಂದು ಬೆಂಗಳೂರಿನ 68 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಎರಡೂ ಪ್ರಕರಣಗಳಲ್ಲಿ, 'beeble.com' ಡೊಮೇನ್‌ನಿಂದ ಇಮೇಲ್‌ಗಳು ಬಂದಿವೆ ಎಂದು ಪೊಲೀಸರು ಕಂಡುಹಿಡಿದಿದ್ದಾರೆ.