ಮಹಿಳೆಯರೇ ಎಚ್ಚರ! ಥಿಯೇಟರ್‌ನ ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮರಾ-ಕಾಮುಕ ಅರೆಸ್ಟ್‌
x
AI ರಚಿತ ಚಿತ್ರ

ಮಹಿಳೆಯರೇ ಎಚ್ಚರ! ಥಿಯೇಟರ್‌ನ ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮರಾ-ಕಾಮುಕ ಅರೆಸ್ಟ್‌

ಮಡಿವಾಳದ ಸಂಧ್ಯಾ ಥಿಯೇಟರ್ ಲೇಡೀಸ್ ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮರಾ ಪತ್ತೆ. ಮಹಿಳೆಯರು ಜಾಗರೂಕರಾಗಿರಿ! ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


Click the Play button to hear this message in audio format

ಬೆಂಗಳೂರಿನ ಮಡಿವಾಳದಲ್ಲಿರುವ ಜನಪ್ರಿಯ ಸಂಧ್ಯಾ ಚಿತ್ರಮಂದಿರದಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚಿತ್ರಮಂದಿರದ ಮಹಿಳಾ ಶೌಚಾಲಯದಲ್ಲಿ ಗುಪ್ತವಾಗಿ ಕ್ಯಾಮರಾ ಇರಿಸಿದ್ದ ಪ್ರಕರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣ ಸಾರ್ವಜನಿಕರು ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯ ವಿವರ

ಸದ್ಯ ಚಿತ್ರಮಂದಿರದಲ್ಲಿ 'ನುವ್ವು ನಾಕು ನಚ್ಚಾವ್' ಎಂಬ ತೆಲುಗು ಸಿನಿಮಾ ಮರುಬಿಡುಗಡೆಯಾಗಿದ್ದು, ಚಿತ್ರ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವತಿಯರು ಆಗಮಿಸಿದ್ದರು. ಈ ವೇಳೆ ಶೌಚಾಲಯಕ್ಕೆ ಹೋದ ಮಹಿಳೆಯರಿಗೆ ಅಲ್ಲಿ ರಹಸ್ಯವಾಗಿ ಕ್ಯಾಮರಾ ಇಟ್ಟಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಮಹಿಳೆಯರು ತಕ್ಷಣ ಆತಂಕಕ್ಕೊಳಗಾಗಿ ಹೊರಬಂದು ವಿಷಯ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಆರೋಪಿಗೆ ಧರ್ಮದೇಟು

ವಿಷಯ ತಿಳಿಯುತ್ತಿದ್ದಂತೆ ಚಿತ್ರಮಂದಿರದಲ್ಲಿದ್ದ ಸಾರ್ವಜನಿಕರು ಮತ್ತು ಯುವಕರು ಒಟ್ಟಾಗಿ ಶೌಚಾಲಯದ ಬಳಿ ಕ್ಯಾಮರಾ ಇಟ್ಟಿದ್ದ ಆರೋಪಿಯನ್ನು ಹಿಡಿದಿದ್ದಾರೆ. ಆಕ್ರೋಶಗೊಂಡ ಜನರು ಸ್ಥಳದಲ್ಲೇ ಆತನಿಗೆ ಸರಿಯಾಗಿ ಧರ್ಮದೇಟು ನೀಡಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಕ್ರಮ

ಮಾಹಿತಿ ಪಡೆದ ಮಡಿವಾಳ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಪೊಲೀಸರು ಆತ ಈ ಕ್ಯಾಮರಾವನ್ನು ಯಾವಾಗ ಇಟ್ಟಿದ್ದ? ಇದರ ಹಿಂದೆ ಯಾರಿದ್ದಾರೆ? ಮತ್ತು ಈವರೆಗೆ ಯಾವೆಲ್ಲಾ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ನಗರದ ಚಿತ್ರಮಂದಿರದಂತಹ ಸಾರ್ವಜನಿಕ ಸ್ಥಳದಲ್ಲಿ ಇಂತಹ ನೀಚ ಕೃತ್ಯ ನಡೆದಿರುವುದು ಮಹಿಳಾ ಪ್ರೇಕ್ಷಕರಲ್ಲಿ ಭೀತಿ ಮೂಡಿಸಿದೆ.

ಇತ್ತೀಚೆಗಷ್ಟೇ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಪ್ರಸಿದ್ಧ ಕೆಫೆಯೊಂದರ ಲೇಡೀಸ್ ಟಾಯ್ಲೆಟ್‌ನಲ್ಲಿ ಗುಪ್ತವಾಗಿ ಮೊಬೈಲ್ ಇರಿಸಿದ್ದ ಘಟನೆ ನಡೆದಿತ್ತು. ಕಸದ ಬುಟ್ಟಿಯೊಳಗೆ ಫೋನ್ ಇಟ್ಟು ದೃಶ್ಯಗಳನ್ನು ರೆಕಾರ್ಡ್ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಮಹಿಳೆಯೊಬ್ಬರು ದೂರು ನೀಡಿದಾಗ ಸಿಬ್ಬಂದಿಯೊಬ್ಬನ ಕೃತ್ಯ ಬಯಲಿಗೆ ಬಂದಿತ್ತು.

2023ರಲ್ಲಿ ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ಸಹಪಾಠಿಗಳೇ ಮೊಬೈಲ್ ಕ್ಯಾಮರಾ ಇಟ್ಟು ವಿಡಿಯೋ ಮಾಡಿರುವ ಆರೋಪ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿತ್ತು.

Read More
Next Story