
Real Estate| ಫಾಕ್ಸ್‌ಕಾನ್ ಸುತ್ತ ಭೂಮಿಗೆ ಚಿನ್ನದ ಬೆಲೆ; ಹೂಡಿಕೆದಾರರೇ ಇತ್ತ ನೋಡಿ...
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ವ್ಯಾಪ್ತಿ ಆಂಧ್ರಪ್ರದೇಶ ಮೂಲದ ಬಲಾಢ್ಯರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದರಿಂದ ಭೂಮಿಯ ಮೌಲ್ಯ ಹೆಚ್ಚಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದೀಗ ಹೂಡಿಕೆ ಸ್ನೇಹಿ ಜಿಲ್ಲೆಯಾಗಿ ಬದಲಾಗಿದೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಫಾಕ್ಸ್‌ಕಾನ್ ಕಂಪೆನಿ, ಹೊಸಕೋಟೆ, ದಾಬಸ್‌ಪೇಟೆ ಹೊರ ವರ್ತುಲ ರಸ್ತೆ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾರಣದಿಂದ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಗಗನಮುಖಿಯಾಗಿದೆ.
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯಲ್ಲಿ ಕಾರ್ಯಾರಂಭ ಮಾಡಿರುವ ಫಾಕ್ಸ್ ಕಾನ್ ಕಂಪನಿಯಿಂದಾಗಿ ದೊಡ್ಡಬಳ್ಳಾಪುರ-ದೇವನಹಳ್ಳಿ ಗಡಿ ಭಾಗದ ಗ್ರಾಮಗಳಲ್ಲಿ ಆಸ್ತಿಯ ಮೌಲ್ಯ ಎರಡು ವರ್ಷಗಳಲ್ಲಿ ಶೇ 35 ರಷ್ಟು ಏರಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶ ಮೂಲದ ಬಲಾಢ್ಯರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಮಿಯ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದರಿಂದ ಭೂಮಿಯ ಮೌಲ್ಯ ಹೆಚ್ಚಾಗಿದೆ. ಆಂಧ್ರ ಹಾಗೂ ತೆಲಂಗಾಣ ಮೂಲದ ಹಣವಂತರು ಹೆಚ್ಚು ಹೂಡಿಕೆಯನ್ನು ಭೂಮಿಯ ಮೇಲೆ ಮಾಡುತ್ತಿದ್ದಾರೆ. ರೈತರಿಂದ ಜಮೀನು ಖರೀದಿಸಿ, ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಗದೇನಹಳ್ಳಿ, ಕೊನಘಟ್ಟ, ಆದಿನಾರಾಯಣ ಹೊಸಹಳ್ಳಿ ಸೇರಿದಂತೆ ಫಾಕ್ಸ್‌ಕಾನ್ ವ್ಯಾಪ್ತಿಯಲ್ಲಿರುವ 13 ಗ್ರಾಮಗಳ ರೈತರು ಭೂಮಿಗೆ ಹೆಚ್ಚಿನ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೂ, ಯೋಜನೆ ನಿರಾತಂಕವಾಗಿ ಮುಂದುವರಿದಿದ್ದು, ಭೂಮಿ ಖರೀದಿ ಹಾಗೂ ಮಾರಾಟ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಬಹುತೇಕ ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ.
ಪ್ರಸ್ತುತ, ಐಫೋನ್ ತಯಾರಿಕೆಯ ʼಪ್ರಾಜೆಕ್ಟ್ ಎಲಿಫೆಂಟಾʼ ಮತ್ತು ಫಾಕ್ಸ್‌ಕಾನ್ ಎಲೆಕ್ಟ್ರಿಕ್ ವಾಹನ ತಯಾರಿಕೆಯ ʼಪ್ರಾಜೆಕ್ಟ್ ಚೀತಾʼ ಕಾರ್ಖಾನೆಯು ಸಾವಿರಾರು ನೌಕರರಿಗೆ ಉದ್ಯೋಗ ಒದಗಿಸಿದೆ. ಉತ್ತರ ಭಾರತದ ಕಾರ್ಮಿಕರ ಸಂಖ್ಯೆಯೂ ಹೆಚ್ಚಿದೆ. ಆದ್ದರಿಂದ ಫಾಕ್ಸ್ ಕಾನ್ ವ್ಯಾಪ್ತಿಯ 10 ಕಿ.ಮೀ ಸುತ್ತಳತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ವೇಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಹೇಗಿದೆ ಫಾಕ್ಸ್‌ಕಾನ್ ಕೈಗಾರಿಕಾ ಸಮುಚ್ಚಯ?
ಐಟಿ ಸಿಟಿ ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನಲ್ಲಿ ತಲೆ ಎತ್ತಿರುವ ಫಾಕ್ಸ್‌ಕಾನ್ ಕಂಪೆನಿಯು ಸುಮಾರು 13 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ಕಾರ್ಯಾರಂಭಿಸುತ್ತಿದೆ. ಅಂದರೆ ಸುಮಾರು 220 ಫುಟ್‌ಬಾಲ್ ಮೈದಾನಗಳಷ್ಟು ವಿಸ್ತೀರ್ಣ ಹೊಂದಿದೆ.
ಒಟ್ಟು ೩೦೦ ಎಕರೆ ಪ್ರದೇಶದಲ್ಲಿ ಫಾಕ್ಸ್‌ಕಾನ್ ಕೈಗಾರಿಕಾ ಸಮುಚ್ಚಯ ನಿರ್ಮಾಣವಾಗುತ್ತಿದೆ. ಅಂದಾಜು 2.5 ಬಿಲಿಯನ್ ಬಂಡವಾಳ ಹೂಡಿಕೆ ಮಾಡಿರುವ ಫಾಕ್ಸ್ ಕಾನ್ ಘಟಕವು ಚೀನಾದ ಹೊರಗಿನ ಎರಡನೇ ಅತಿದೊಡ್ಡ ಕಾರ್ಖಾನೆಯಾಗಿದೆ.
40 ಸಾವಿರ ಉದ್ಯೋಗ ಸೃಷ್ಟಿ
ಫಾಕ್ಸ್ ಕಾನ್ ಕಂಪೆನಿಯು ಒಟ್ಟು 40 ಸಾವಿರ ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮೀಣ ಹಾಗೂ ಕೌಶಲ್ಯಭರಿತ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುತ್ತಿದೆ.
ಅಮೆರಿಕದ ಎಚ್ಚರಿಕೆಯ ನಡುವೆಯೂ ಐಫೋನ್ ಕಂಪನಿಯು ಭಾರತದಲ್ಲಿ ತನ್ನ ಉತ್ಪಾದನೆ ದ್ವಿಗುಣಗೊಳಿಸಲು ಉದ್ದೇಶಿಸಿರುವುದು ಉದ್ಯಮ ಸ್ನೇಹಿ ವಾತಾವರಣಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಐಫೋನ್ 16 ಮತ್ತು 17 Pro Max ಮಾದರಿಗೆ ಬಿಡಿಭಾಗಗಳನ್ನು ಉತ್ಪಾದಿಸಲಾಗುತ್ತಿದೆ. 2023 ರಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದು, ಇದೀಗ ಉತ್ಪಾದನೆಯನ್ನೂ ಆರಂಭಿಸಿದೆ.
ಆಸ್ತಿ ಸಲಹಾ ಸಂಸ್ಥೆ ಅನರಾಕ್ ದತ್ತಾಂಶದ ಪ್ರಕಾರ, ಫಾಕ್ಸ್‌ಕಾನ್ ಆರಂಭದ ನಂತರ ಈ ಪ್ರದೇಶದಲ್ಲಿ ಆಸ್ತಿಯ ಮೌಲ್ಯ ಶೇ 35 ರಷ್ಟು ಏರಿಕೆಯಾಗಿದೆ. ಕೇವಲ ಎರಡೇ ವರ್ಷಗಳಲ್ಲಿ ದೇವನಹಳ್ಳಿ- ದೊಡ್ಡಬಳ್ಳಾಪುರ ಗಡಿಭಾಗದ ಚಹರೆಯನ್ನೇ ಬದಲಿಸಿದೆ.
ಬಾಡಿಗೆಗಾಗಿ ಮನೆಗಳ ನಿರ್ಮಾಣ ಶರವೇಗದಲ್ಲಿ ನಡೆಯುತ್ತಿದೆ. ಜಮೀನು ಮಾರಾಟದಿಂದ ಬಂದ ಹಣದಲ್ಲಿ ಹಲವು ಗ್ರಾಮಗಳ ರೈತರು ಪೂರಕ ಆದಾಯಕ್ಕಾಗಿ ಬಾಡಿಗೆ ಮನೆ, ಮಳಿಗೆಗಳನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಉದ್ಯಮಿಗಳು ಫಾಕ್ಸ್ ಕಾನ್ ಸುತ್ತಮುತ್ತ ಜಮೀನು ಖರೀದಿಗೆ ಮುಗಿಬಿದ್ದಿದ್ದಾರೆ. ಈ ಕಾರಣದಿಂದಲೂ ಭೂಮಿ ಬೆಲೆ ಹೆಚ್ಚುತ್ತಿದೆ.
ವಿಲ್ಲಾ, ಅಪಾರ್ಟ್‌ಮೆಂಟ್‌ಗಳ ನಿರ್ಮಾಣ
ಫಾಕ್ಸ್ ಕಾನ್ ಕಂಪೆನಿ ಆರಂಭದ ನಂತರ ಸುತ್ತಲಿನ ಗ್ರಾಮಗಳಲ್ಲಿ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ಬಾಡಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಸುಗಮ ರಸ್ತೆ ಸಂಚಾರ, ಪೂರಕ ಉದ್ದಿಮೆಗಳು ಕೂಡ ತಲೆ ಎತ್ತುತ್ತಿರುವುದರಿಂದ ಆಸ್ತಿ ಮೌಲ್ಯ ಹೆಚ್ಚಾಗಿದೆ.
ಫಾಕ್ಸ್‌ಕಾನ್ ಕಂಪೆನಿ ಸಮೀಪವೇ ಆಂಧ್ರಪ್ರದೇಶದ ಗೀತಂ ವಿಶ್ವವಿದ್ಯಾಲಯ, ಜಿಲ್ಲಾಧಿಕಾರಿ ಕಚೇರಿ, ಅಮೇಟಿ ವಿಶ್ವವಿದ್ಯಾಲಯ, ಹ್ಯಾರೋ ಇಂಟರ್‌ನ್ಯಾಷನಲ್ ಶಾಲೆ, ಖಾಸಗಿ ಎಂಜಿನಿಯರಿಂಗ್ ಕಾಲೇಜು, ರೆಸಾರ್ಟ್‌ಗಳು ತಲೆ ಎತ್ತಿವೆ. ಐಟಿಐಆರ್ ಕಾರಿಡಾರ್ ಸಹ ನಿರ್ಮಾಣವಾಗುತ್ತಿದೆ.
ಇನ್ನು ಚೀನಾ, ಫಿಲಿಪೈನ್ಸ್ ಮತ್ತು ತೈವಾನ್‌ನಂತಹ ಆಗ್ನೇಯ ಏಷ್ಯಾದ ದೇಶಗಳಿಂದ ಬರುವ ತನ್ನ ಉದ್ಯೋಗಿಗಳಿಗೆ ವಸತಿ ಕಲ್ಪಿಸಲು ಫಾಕ್ಸ್‌ಕಾನ್ ಕಂಪೆನಿಯು ಸ್ಥಳೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ಗಗನಚುಂಬಿ ಕಟ್ಟಡಗಳನ್ನು ಬಿಲ್ಡರ್‌ಗಳು ನಿರ್ಮಿಸುತ್ತಿದ್ದಾರೆ.
ಪ್ರಾಪ್ ಪಲ್ಸ್ ಪ್ರಕಾರ, ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು ಮತ್ತು ಪ್ಲಾಟ್‌ಗಳು ಸೇರಿದಂತೆ ಸುಮಾರು 60 ವಸತಿ ಯೋಜನೆಗಳು ಫಾಕ್ಸ್ ಕಾನ್ ಕಂಪೆನಿಯ 20 ಕಿ.ಮೀ ವ್ಯಾಪ್ತಿಯೊಳಗೆ ಆರಂಭವಾಗುತ್ತಿವೆ. ಇದರಿಂದ ಆಸ್ತಿ ಖರೀದಿದಾರರ ಸಂಖ್ಯೆಯೂ ಹೆಚ್ಚುತ್ತಿದೆ.
"ಫಾಕ್ಸ್ ಕಾನ್ ಕಾರ್ಖಾನೆ ಸಮೀಪವೇ ಸುಸಜ್ಜಿತ ಹೊರವರ್ತುಲ ರಸ್ತೆ ನಿರ್ಮಾಣವಾಗಿದೆ. ವಿಮಾನ ನಿಲ್ದಾಣ, ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ವೇ ಸೇರಿದಂತೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಗೆ ಸುಲಭ ಸಂಪರ್ಕ ವ್ಯವಸ್ಥೆ ಇರುವುದರಿಂದ ಭೂಮಿ ಖರೀದಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ದೊಡ್ಡಬಳ್ಳಾಪುರ ಸಮೀಪವೇ ಕ್ವಿನ್ ಸಿಟಿ ಕೂಡ ನಿರ್ಮಾಣವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಭೂಮಿಗೆ ಚಿನ್ನದ ಬೆಲೆ ಬಂದಿದೆ ಎಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ನಾರಾಯಣಪ್ಪ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ದೇವನಹಳ್ಳಿಯಲ್ಲಿ ಕೈಗಾರಿಕಾ ಕ್ರಾಂತಿ
ಫಾಕ್ಸ್‌ಕಾನ್ ಆರಂಭಕ್ಕೂ ಮುನ್ನವೇ ದೇವನಹಳ್ಳಿಯಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಗಿತ್ತು. 2008 ರಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭದೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಹೆಚ್ಚಿತು. ಕೈಗಾರಿಕೆಗಳ ಆಗಮನದಿಂದ ಇದು ಇನ್ನಷ್ಟು ಎತ್ತರಕ್ಕೆ ಏರಿದೆ.
ರಾಜ್ಯ ಸರ್ಕಾರ ರೈತರಿಂದ ಭೂಸ್ವಾಧೀನ ಮಾಡಿಕೊಂಡು ಐಟಿ, ಏರೋಸ್ಪೇಸ್ ಮತ್ತು ವಿಜ್ಞಾನ-ತಂತ್ರಜ್ಞಾನ ಆಧರಿತ ಕೈಗಾರಿಕೆಗಳಿಗೆ ಹಂಚಿಕೆ ಮಾಡಿದೆ. ವಿಮಾನ ನಿಲ್ದಾಣ, ಕೈಗಾರಿಕೆಗಳ ಸ್ಥಾಪನೆ ಬಳಿಕ ಸುಧಾರಿತ ರಸ್ತೆ ಸಂಪರ್ಕ ಸಾಧ್ಯವಾಗಿದೆ. ದೇವನಹಳ್ಳಿಯು ದೊಡ್ಡ ಪ್ರಮಾಣದ ಹೂಡಿಕೆ ತಾಣವಾಗಿ ಪರಿವರ್ತನೆಯಾಗಿದೆ.
ಫಾಕ್ಸ್‌ಕಾನ್ ಬಳಿ ಇನ್ನಷ್ಟು ಉದ್ಯಮಗಳು
ಫಾಕ್ಸ್ ಕಾನ್ ಜೊತೆಗೆ ಐಫೋನ್ ಪೂರೈಕೆದಾರ ವಿಸ್ಟ್ರಾನ್ ಕಂಪೆನಿಯು 1.4 ಮಿಲಿಯನ್ ಚದರ ಅಡಿ ವ್ಯಾಪ್ತಿಯಲ್ಲಿ ಘಟಕ ಆರಂಭಿಸುತ್ತಿದೆ. ಇದ 3,000 ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ. ಅದೇ ರೀತಿ ಜರ್ಮನ್ ಸಾಫ್ಟ್‌ವೇರ್ ದೈತ್ಯ SAP ಕೂಡ ಇಲ್ಲಿ ಐಟಿ ಕಚೇರಿ ತೆರೆಯುತ್ತಿದೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮವು ಜೋರಾಗಿ ಬೆಳೆಯುತ್ತಿದೆ.

