Seven crore robbery, stampede, police failure in Dharmasthala case: R. Ashok alleges
x

ಸಾಂದರ್ಭಿಕ ಚಿತ್ರ

ಏಳು ಕೋಟಿ ದರೋಡೆ, ಕಾಲ್ತುಳಿತ, ಧರ್ಮಸ್ಥಳ ಪ್ರಕರಣದಲ್ಲಿ ಪೊಲೀಸ್‌ ವೈಫಲ್ಯ: ಬಿಜೆಪಿ ಆರೋಪ

ಧರ್ಮಸ್ಥಳ ಪ್ರಕರಣ ನಗರ ನಕ್ಸಲರು ಮಾಡಿರುವ ದೊಡ್ಡ ನಾಟಕ. ತಿಮರೋಡಿ ಗ್ಯಾಂಗ್‌ ವಿರುದ್ಧ ಸರ್ಕಾರ ಕ್ರಮವಹಿಸಿಲ್ಲ. ಸರ್ಕಾರದ ಪರ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ ಎಂದು ಆರ್‌. ಅಶೋಕ್‌ ಟೀಕಿಸಿದ್ದಾರೆ.


Click the Play button to hear this message in audio format

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಗಲಿನಲ್ಲಿಯೇ ಜನ ನಿಬಿಡ ಪ್ರದೇಶದಲ್ಲಿ ಕೇವಲ ಏಳು ನಿಮಿಷದಲ್ಲಿ ಏಳು ಕೋಟಿ ರೂ. ದರೋಡೆಯಾಗಿದ್ದು, ಜನರು ಬ್ಯಾಂಕ್‌ಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಸತ್ತುಹೋಗಿದೆ. ಪೊಲೀಸರ ಬಗ್ಗೆ ದರೋಡೆಕೋರರಿಗೆ, ಕಳ್ಳರಿಗೆ ಭಯವಿಲ್ಲವಾಗಿದೆ. ಬೆಂಗಳೂರಿನ ಬ್ಯಾಂಕುಗಳು ಎಷ್ಟು ಸುರಕ್ಷಿತ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಹಾಡಹಗಲೇ ದುಷ್ಕರ್ಮಿಗಳು ರಾಬರಿ ನಡೆಸಿ ಪರಾರಿಯಾಗುತ್ತಾರೆ ಎಂದರೆ ಪರಿಸ್ಥಿತಿ ಯಾವ ಸ್ಥಿತಿ ತಲುಪಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು.

ಅನೇಕ ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆ ವಿಫಲ

ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ, ಧರ್ಮಸ್ಥಳ ಘಟನೆ ಹೀಗೆ ಅನೇಕ ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ. ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗಿರುವುದರಿಂದ ಪೊಲೀಸ್‌ ಇಲಾಖೆಯ ಮೇಲೆ ಯಾರಿಗೂ ನಿಯಂತ್ರಣವಿಲ್ಲದಂತಾಗಿದೆ. ಪ್ರತಿಯೊಂದು ಇಲಾಖೆಯಲ್ಲಿ ಕಮಿಷನ್‌ ವ್ಯವಸ್ಥೆ ಇರುವುದರಿಂದ ಎಲ್ಲೂ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ನಾಯಕರು ವಚನಭ್ರಷ್ಟರಾಗಿದ್ದಾರೆ. ಸಿದ್ದರಾಮಯ್ಯ ಓಸಿ ಮುಖ್ಯಮಂತ್ರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಪರೋಕ್ಷವಾಗಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಡುವುದಿಲ್ಲ ಎಂದು ದಿಟ್ಟತನದಿಂದ ಹೇಳಿದ್ದಾರೆ. ಅಗತ್ಯ ಇಲ್ಲದೆಯೇ ನಾನೇ ಸಿಎಂ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇನ್ನು ಒಂದು ತಿಂಗಳೊಳಗೆ ಈ ಪ್ರಹಸನದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದರು.

ಅಮಾಯಕರ ಸಾವಿಗೆ ಸರ್ಕಾರ ಕಾರಣ

ಆರ್‌ಸಿಬಿ ಕಾಲ್ತುಳಿತ ಘಟನೆ ವರದಿಯಲ್ಲಿ ಯಾವುದೇ ಹುರುಳಿಲ್ಲ. 11 ಮಂದಿ ಅಮಾಯಕರ ಸಾವಿಗೆ ಸರ್ಕಾರವೇ ನೇರ ಕಾರಣ. ಘಟನೆಯಿಂದಾಗಿ ಯಾವುದೇ ಕ್ರಿಕೆಟ್‌ ಪಂದ್ಯಗಳು ಇಲ್ಲಿ ನಡೆಯುತ್ತಿಲ್ಲ. ಆರ್‌ಸಿಬಿ ಹಾಗೂ ಕೆಎಸ್‌ಸಿಎ ಮೇಲೆ ಗೂಬೆ ಕೂರಿಸಲು ತನಿಖಾ ವರದಿ ಸಿದ್ಧಪಡಿಸಲಾಗಿದೆ ಎಂದರು.

ನಗರ ನಕ್ಸಲರ ವಿರುದ್ಧ ಕ್ರಮಕ್ಕೆ ಆಗ್ರಹ

ಧರ್ಮಸ್ಥಳ ಪ್ರಕರಣ ನಗರ ನಕ್ಸಲರು ಮಾಡಿರುವ ದೊಡ್ಡ ನಾಟಕ. ತಿಮರೋಡಿ ಗ್ಯಾಂಗ್‌ ವಿರುದ್ಧ ಸರ್ಕಾರ ಕ್ರಮವಹಿಸಿಲ್ಲ. ಸರ್ಕಾರದ ಪರ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ. ಇದರ ತನಿಖೆ ಕೂಡ ಸರಿಯಾಗಿ ನಡೆದಿಲ್ಲ. ಕ್ಷೇತ್ರದ ಹೆಸರು ಕೆಡಿಸಿದವರ ವಿರುದ್ಧ ಯಾವುದೇ ಕ್ರಮವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ಮೂಲ ಸೌಲಭ್ಯಗಳ ಕೊರತೆ, ಕೊಠಡಿಗಳಿಲ್ಲ, ಶಿಕ್ಷಕರ ನೇಮಕವಾಗಿಲ್ಲ. ಇಂತಹ ಸ್ಥಿತಿಯಲ್ಲಿ ಶಾಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಉತ್ತೀರ್ಣದ ಗರಿಷ್ಠ ಅಂಕವನ್ನು ಇಳಿಸಲಾಗಿದೆ. ಈ ಮೂಲಕ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರೆಂದು ತೋರಿಸಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಒಳಿತಾಗುವುದಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕೆಂದು ಸ್ಪೀಕರ್‌ ಬಳಿ ಮನವಿ ಮಾಡುತ್ತೇನೆ ಎಂದರು.

Read More
Next Story