ಬೆಂಗಳೂರು ರಸ್ತೆ ಗುಂಡಿ; ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ, ದುರಸ್ತಿಗೆ ಒಂದು ತಿಂಗಳ ಡೆಡ್‌ಲೈನ್!
x

ಬೆಂಗಳೂರು ರಸ್ತೆ ಗುಂಡಿ; ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ, ದುರಸ್ತಿಗೆ ಒಂದು ತಿಂಗಳ ಡೆಡ್‌ಲೈನ್!

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ ಸಿದ್ದರಾಮಯ್ಯ, 15 ದಿನಗಳ ನಂತರ ಮತ್ತೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.


ನಿಮಗೆ ನಾಚಿಕೆ ಆಗುವುದಿಲ್ಲವೇ? ಜನರ ಕಷ್ಟ ನಿಮಗೆ ಗೊತ್ತಾಗುವುದಿಲ್ಲವೇ? ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ್ಟ? ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ!" - ಇದು ಬೆಂಗಳೂರು ನಗರದ ರಸ್ತೆಗಳ ದುಸ್ಥಿತಿಯ ಬಗ್ಗೆ ಆಕ್ರೋಶಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ.

ಶನಿವಾರ ತಮ್ಮ ಸರ್ಕಾರಿ ನಿವಾಸ 'ಕಾವೇರಿ'ಯಲ್ಲಿ, ಬೆಂಗಳೂರು ನಗರದ ರಸ್ತೆ ಸುಧಾರಣೆ ಮತ್ತು ಸಂಚಾರ ದಟ್ಟಣೆ ವಿಷಯಗಳ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

"ಗುಂಡಿ ಮುಚ್ಚುವುದಕ್ಕೂ ಗುಣಮಟ್ಟವಿಲ್ಲ, ವೈಜ್ಞಾನಿಕವಾಗಿಯೂ ಇಲ್ಲ. ನೀವು ಇಂಜಿನಿಯರಿಂಗ್ ಓದಿರುವುದಾದರೂ ಏಕೆ? ಗುಂಡಿ ಮುಚ್ಚಿ ಎಂದು ನಾನು ನಿಮ್ಮನ್ನು ಕರೆದು ಹೇಳಬೇಕೇ?" ಎಂದು ಇಂಜಿನಿಯರ್‌ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. "ಇನ್ನು ಮುಂದೆ ಗುಂಡಿ ಮುಚ್ಚದಿದ್ದರೆ, ಎಲ್ಲಾ ಚೀಫ್ ಇಂಜಿನಿಯರ್‌ಗಳನ್ನು ಅಮಾನತು ಮಾಡಲಾಗುವುದು. ನಾನು ಯಾರ ಮುಖವನ್ನೂ ನೋಡುವುದಿಲ್ಲ, ಹಿರಿಯ ಅಧಿಕಾರಿಗಳ ತಲೆದಂಡ ಖಚಿತ. ಇದರಲ್ಲಿ ಯಾವುದೇ ಮುಲಾಜಿಲ್ಲ," ಎಂದು ಕೆಂಡಾಮಂಡಲರಾದರು.

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ ಸಿದ್ದರಾಮಯ್ಯ, 15 ದಿನಗಳ ನಂತರ ಮತ್ತೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಸಚಿವರಾದ ಜಮೀರ್ ಅಹಮ್ಮದ್, ಕೆ.ಜೆ. ಜಾರ್ಜ್, ಭೈರತಿ ಸುರೇಶ್, ಬೆಂಗಳೂರು ಪೊಲೀಸ್ ಆಯುಕ್ತರು, ಬಿಡಿಎ ಅಧ್ಯಕ್ಷರು, ಹಾಗೂ ಬಿಎಂಆರ್‌ಸಿಎಲ್, ಬೆಸ್ಕಾಂ, ಜಲಮಂಡಳಿ ಮತ್ತು ಐದು ಮಹಾನಗರ ಪಾಲಿಕೆಗಳ ಆಯುಕ್ತರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೆಟ್ರೋ, ಜಿಬಿಎ, ಜಲಮಂಡಳಿ, ಬೆಸ್ಕಾಂ, ಮತ್ತು ಬಿಡಿಎ ನಡುವೆ ಉತ್ತಮ ಸಮನ್ವಯದ ಅಗತ್ಯವಿದೆ ಎಂದು ಒತ್ತಿ ಹೇಳಿದ ಸಿಎಂ, ಜಿಬಿಎ ಮುಖ್ಯ ಆಯುಕ್ತರು ಈ ಕುರಿತು ವಾರಕ್ಕೊಮ್ಮೆ ಸಭೆ ನಡೆಸಿ, ಕಾಮಗಾರಿಗಳ ಪ್ರಗತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

Read More
Next Story