ಬೆಂಗಳೂರು ಪೊಲೀಸರ ಸೂಪರ್ ಕಾರ್ಯಾಚರಣೆ: 20 ನಿಮಿಷದಲ್ಲಿ ಮಗು ಪತ್ತೆ, 9 ನಿಮಿಷದಲ್ಲಿ ಪ್ರಾಣ ರಕ್ಷಣೆ!
x

ಬೆಂಗಳೂರು ಪೊಲೀಸರು  

ಬೆಂಗಳೂರು ಪೊಲೀಸರ 'ಸೂಪರ್' ಕಾರ್ಯಾಚರಣೆ: 20 ನಿಮಿಷದಲ್ಲಿ ಮಗು ಪತ್ತೆ, 9 ನಿಮಿಷದಲ್ಲಿ ಪ್ರಾಣ ರಕ್ಷಣೆ!

ಜನವರಿ 9ರಂದು ಬೆಳಗ್ಗೆ 6. 55ರ ಸುಮಾರಿಗೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೇತಾಜಿ ನಗರದ 3ನೇ ಕ್ರಾಸ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಬಗ್ಗೆ ಸಾರ್ವಜನಿಕರೊಬ್ಬರು ಸಹಾಯವಾಣಿಗೆ ಕರೆ ಮಾಡಿದ್ದರು.


Click the Play button to hear this message in audio format

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 'ನಮ್ಮ 112' ಸಹಾಯವಾಣಿ ಮತ್ತೊಮ್ಮೆ ತನ್ನ ದಕ್ಷತೆಯನ್ನು ಸಾಬೀತುಪಡಿಸಿದೆ. ಕೇವಲ ಒಂದು ಫೋನ್ ಕರೆಯ ಮೇರೆಗೆ ಕ್ಷಣಾರ್ಧದಲ್ಲಿ ಸ್ಥಳಕ್ಕೆ ದೌಡಾಯಿಸಿದ ಬೆಂಗಳೂರು ನಗರ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅತ್ಯಂತ ತ್ವರಿತವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಒಂದೆಡೆ ಕಾಣೆಯಾದ ಮಗುವನ್ನು ಕೇವಲ 20 ನಿಮಿಷಗಳಲ್ಲಿ ಪತ್ತೆಹಚ್ಚಿದ್ದರೆ, ಮತ್ತೊಂದೆಡೆ ಸಿಲಿಂಡರ್ ಸ್ಫೋಟದಂತಹ ಗಂಭೀರ ದುರಂತದಲ್ಲಿ ಕೇವಲ 9 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ ಐವರ ಪ್ರಾಣ ಉಳಿಸಿದ್ದಾರೆ.

20 ನಿಮಿಷದಲ್ಲಿ ಮಗುವನ್ನು ಪತ್ತೆ ಹಚ್ಚಿದ ಕುಂಬಳಗೂಡು ಪೊಲೀಸರು

ಜನವರಿ 8ರಂದು ಸಂಜೆ ಸುಮಾರು 6.22ರ ವೇಳೆಗೆ ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯ ದಾನನಾಯಕನಹಳ್ಳಿಯ ಗಾಯತ್ರಿ ಲೇಔಟ್‌ನಲ್ಲಿ 7 ವರ್ಷದ ಮಗುವೊಂದು ಕಾಣೆಯಾದ ಬಗ್ಗೆ 'ನಮ್ಮ 112'ಗೆ ಕರೆ ಬಂದಿತ್ತು. ವಿಷಯ ತಿಳಿದ ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಹೊಯ್ಸಳ-292 ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಸಿ ಸುಧಾಕರ್ ಅವರಿಗೆ ಮಾಹಿತಿ ರವಾನಿಸಿದ್ದರು. ಮಾಹಿತಿ ಸಿಕ್ಕ ಕೇವಲ 20 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಸುಧಾಕರ್ ಅವರು, ಕಾರ್ಯಾಚರಣೆ ನಡೆಸಿ ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

9 ನಿಮಿಷದಲ್ಲಿ ಸ್ಥಳಕ್ಕೆ ತಲುಪಿ ಐವರ ಪ್ರಾಣ ಉಳಿಸಿದ ಪೀಣ್ಯ ಪೊಲೀಸರು

ಜನವರಿ 9ರಂದು ಬೆಳಗ್ಗೆ 6. 55ರ ಸುಮಾರಿಗೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೇತಾಜಿ ನಗರದ 3ನೇ ಕ್ರಾಸ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಬಗ್ಗೆ ಸಾರ್ವಜನಿಕರೊಬ್ಬರು ಸಹಾಯವಾಣಿಗೆ ಕರೆ ಮಾಡಿದ್ದರು. ಈ ತುರ್ತು ಪರಿಸ್ಥಿತಿಗೆ ತಕ್ಷಣವೇ ಸ್ಪಂದಿಸಿದ 'ನಮ್ಮ 112' ಸಿಬ್ಬಂದಿ, ಹೊಯ್ಸಳ-116ರಲ್ಲಿದ್ದ ಎಎಸ್‌ಐ ಉಮೇಶ್ ಮತ್ತು ಪಿಸಿ ಶರಣಬಸಪ್ಪ ಪಾಟೀಲ್ ಅವರಿಗೆ ಮಾಹಿತಿ ನೀಡಿದ್ದರು. ಈ ಸಿಬ್ಬಂದಿ ಕೇವಲ 9 ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ, ತುರ್ತು ಸೇವೆಗಳೊಂದಿಗೆ ಸಮನ್ವಯ ಸಾಧಿಸಿ ಆಂಬುಲೆನ್ಸ್‌ ವ್ಯವಸ್ಥೆ ಮಾಡುವ ಮೂಲಕ ಗಾಯಗೊಂಡಿದ್ದ ಐವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರ ಈ ಸಮಯ ಪ್ರಜ್ಞೆಯಿಂದಾಗಿ ಐವರ ಅಮೂಲ್ಯ ಜೀವ ಉಳಿದಂತಾಗಿದೆ.

'ಸೇಫ್ ಸಿಟಿ' ಯೋಜನೆಯ ಯಶಸ್ಸು

ಈ ಎರಡೂ ಘಟನೆಗಳು ಬೆಂಗಳೂರು ನಗರದ 'ಸೇಫ್ ಸಿಟಿ' (Safe City) ಯೋಜನೆಯಡಿ ಪೊಲೀಸರ ಬದ್ಧತೆ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕಮಾಂಡ್ ಸೆಂಟರ್ ಮತ್ತು ಗಸ್ತಿನಲ್ಲಿರುವ ಹೊಯ್ಸಳ ಸಿಬ್ಬಂದಿಯ ನಡುವಿನ ಅತ್ಯುತ್ತಮ ಸಮನ್ವಯತೆಯಿಂದಾಗಿ ಇಂತಹ ತ್ವರಿತ ಫಲಿತಾಂಶ ಸಾಧ್ಯವಾಗಿದೆ ಎಂದು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Read More
Next Story