ಬೆಂಗಳೂರು ಪಿಜಿ ಯುವತಿ ಹತ್ಯೆ | ಹೊರ ರಾಜ್ಯದಲ್ಲಿ ಆರೋಪಿ ಬಂಧನ
x

ಬೆಂಗಳೂರು ಪಿಜಿ ಯುವತಿ ಹತ್ಯೆ | ಹೊರ ರಾಜ್ಯದಲ್ಲಿ ಆರೋಪಿ ಬಂಧನ


ಬೆಂಗಳೂರಿನ ವಸತಿಗೃಹದಲ್ಲಿ ಹತ್ಯೆಯಾದ ಕೃತಿ ಕುಮಾರಿ(24) ಪ್ರಕರಣದ ಶಂಕಿತ ಆರೋಪಿಯನ್ನು ಕರ್ನಾಟಕ ಪೊಲೀಸರು ಶುಕ್ರವಾರ (ಜು. 26) ಬಂಧಿಸಿದ್ದಾರೆ.

ಅಭಿಷೇಕ್ ಎಂದು ಗುರುತಿಸಲಾದ ಶಂಕಿತನನ್ನು ಹೊರ ರಾಜ್ಯದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಆ ನಂತರ ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ತನಿಖಾಧಿಕಾರಿಗಳು ಅಪರಾಧದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪಡೆದ ನಂತರ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡುಬಂದಿತು. ಶಂಕಿತ ಮಂಗಳವಾರ (ಜುಲೈ 23) ರಾತ್ರಿ 11.14 ರ ಸುಮಾರಿಗೆ ಕಟ್ಟಡದ ಮೂರನೇ ಮಹಡಿಗೆ ಬಂದಿದ್ದು, ಪ್ಲಾಸ್ಟಿಕ್ ಚೀಲದಲ್ಲಿ ಚಾಕು ಬಚ್ಚಿಟ್ಟು ಕೊಂಡಿರುವುದು ಕಂಡುಬಂದಿದೆ. ಆತ ಕೃತಿ ಅವರ ಕೋಣೆಯ ಬಾಗಿಲು ಬಡಿದಿದ್ದು, ತೆರೆದ ನಂತರ ಒಳಗೆ ಹೋಗಿದ್ದಾನೆ. ಕ್ಯಾಮೆರಾ ದೃಶ್ಯಾವಳಿಯಲ್ಲಿ ಕೃತಿ ಮತ್ತು ಆರೋಪಿ ಕಾರಿಡಾರ್‌ಗೆ ಹೋಗುತ್ತಿರುವುದು ಮತ್ತು ಕೃತಿ ತಮ್ಮನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿರುವ ದೃಶ್ಯಗಳಿವೆ. ಆರೋಪಿ ಮೇಲುಗೈ ಸಾಧಿಸಿ, ಕೃತಿ ಅವರಿಗೆ ಹಲವು ಬಾರಿ ಇರಿದು, ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಕಟ್ಟಡದ ನಾಲ್ಕನೇ ಮಹಡಿಯ ಮೂವರು ಘಟನೆಯನ್ನು ನೋಡಿದ್ದು, ಒಂದೆರಡು ನಿಮಿಷಗಳ ನಂತರ ಕೃತಿ ಕುಸಿದುಬಿದ್ದಿದ್ದಾರೆ.

ಆರೋಪಿಯನ್ನು ಹುಡುಕಲು ಪೊಲೀಸರು ಮಧ್ಯಪ್ರದೇಶಕ್ಕೆ ಹಲವು ತಂಡಗಳನ್ನು ಕಳುಹಿಸಿದ್ದಾರೆ. ಆದರೆ ಅಭಿಷೇಕ್‌ನನ್ನು ಮಧ್ಯಪ್ರದೇಶದಿಂದ ಬಂಧಿಸಲಾಯಿತೇ ಎಂಬುದನ್ನು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿಲ್ಲ.

ಕೃತಿ ಅವರು ತಮ್ಮಕೊಠಡಿ ಸಹವಾಸಿ ಹಾಗೂ ಆರೋಪಿಗೆ ಸಂಬಂಧಿಸಿದ ವಿಚಾರದಲ್ಲಿ ಮಧ್ಯಪ್ರವೇಶಿಸಿದ್ದರಿಂದ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿತ್ತು. ಆದರೆ, ಕೊಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Read More
Next Story