Groundnut Fair| ಬಸವನಗುಡಿಯಲ್ಲಿ ಕಡಲೆಕಾಯಿ ಘಮ; ಹಳ್ಳಿ ಸೊಗಡಿನ ಪರಿಷೆಗೆ ಬೆಂಗಳೂರಿಗರ ಹರುಷ

ಸಾಂಪ್ರದಾಯಿಕವಾಗಿ ಹಿಂದೂ ಕ್ಯಾಲೆಂಡರ್‌ನ ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಕಡಲೆಕಾಯಿ ಪರಿಷೆ‌ ಆರಂಭವಾಗಿದೆ. ನವೆಂಬರ್ 21ರವರೆಗೆ ಪರಿಷೆ ನಡೆಯುತ್ತದೆ.


Groundnut Fair| ಬಸವನಗುಡಿಯಲ್ಲಿ ಕಡಲೆಕಾಯಿ ಘಮ;  ಹಳ್ಳಿ ಸೊಗಡಿನ ಪರಿಷೆಗೆ ಬೆಂಗಳೂರಿಗರ ಹರುಷ
x

ಕಡಲೆಕಾಯಿ ಪರಿಷೆ 

ಐತಿಹಾಸಿಕ ಕಡಲೆಕಾಯಿ ಪರಿಷೆ ಕೇವಲ ಮೇಳವಷ್ಟೇ ಅಲ್ಲ, ಅದೊಂದು ಪುರಾತನ ಪರಂಪರೆ, ಜನರ ಉತ್ಸವ. ಸಂಸ್ಕೃತಿ ಮತ್ತು ಸಂಭ್ರಮವನ್ನು ಒಂದೇ ತಂತಿಯಲ್ಲಿ ಒಗ್ಗೂಡಿಸುವ ಸಿಲಿಕಾನ್ ಸಿಟಿ ಬೆಂಗಳೂರಿನ ಮೇರು ಹಬ್ಬ.

ಅಡಿಗೊಂಡು ಅಂಗಡಿ, ರಾಶಿ ರಾಶಿ ಕಡಲೆಕಾಯಿ, ಬಾಯಲ್ಲಿ ನೀರೂರಿಸುವ ಕಡಲೆಕಾಯಿಯಿಂದಲೇ ಮಾಡಿದ ವೈವಿದ್ಯ ತಿನಿಸು, ಬಿಸಿ ಬಾಣಲೆಯಿಂದ ಬರುವ ಘಮ, ಜನರ ನಗು-ನಲಿವಿನ ಗದ್ದಲಗಳ ಪುನರ್ಮಿಲನ ಪರಿಷೆ ಜನರಲ್ಲಿ ಹರುಷದ ಹೊನಲು ಹರಿಸುತ್ತಿದೆ.

ಹೌದು, ಬೆಂಗಳೂರಿನ ಬಸವನಗುಡಿಯಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಆರಂಭವಾಗುವ ಕಡಲೆಕಾಯಿ ಪರಿಷೆಯು ದಂತಕಥೆಗಳಲ್ಲಿ ಬೇರೂರಿರುವ ಹಳೆಯ ಆಚರಣೆ.

ನ. 17 ರಿಂದ ಪ್ರಾರಂಭವಾಗಿರುವ ಮೇಳಕ್ಕೆ ಭೇಟಿ ನೀಡುವವರು ಕಡಲೆಕಾಯಿಯ ಪರಿಮಳವನ್ನು ಆಸ್ವಾದಿಸಿ, ಆನಂದಿಸುತ್ತಿದ್ದಾರೆ. ಪ್ರಮುಖವಾಗಿ ಐಟಿ ಉದ್ಯೋಗಿಗಳಿಗೆ ಪರಿಷೆಯು ಹಳ್ಳಿ ಸೊಗಡನ್ನು ಪರಿಚಯಿಸುತ್ತಿದೆ.

ಕರ್ನಾಟಕವು ಅತಿ ಹೆಚ್ಚು ದ್ವಿದಳ ಧಾನ್ಯಗಳನ್ನು ಬೆಳೆಯುವ ಪ್ರಮುಖ ರಾಜ್ಯವಾಗಿದೆ. ಇದು 2019-20ರಲ್ಲಿ ಭಾರತದ ಒಟ್ಟು ನೆಲಗಡಲೆ ಅಥವಾ ಶೇಂಗಾ ಉತ್ಪಾದನೆಯ ಸರಿಸುಮಾರು ಐದು ಪ್ರತಿಶತದಷ್ಟು ಪಾಲು ಹೊಂದಿದೆ.

34 ವರ್ಷದ ಪ್ರೇಮ್ ಸಿಂಘಾನಿಯಾ ಅವರು ಕಳೆದ ಕೆಲ ವರ್ಷಗಳಿಂದ ಈ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ.

"ನಾನು, ನನ್ನ ಕುಟುಂಬ ಉತ್ತರ ಪ್ರದೇಶದವರು. ಆದರೆ, ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಪ್ರತಿ ವರ್ಷ ಕಡಲೆಕಾಯಿ ಪರಿಷೆಗೆ ಬಂದು ತಾಜಾ ಕಡಲೆಕಾಯಿಯ ರುಚಿಯನ್ನು ಆನಂದಿಸುತ್ತೇನೆ, ಅದು ನನ್ನನ್ನು ಮತ್ತೆ ಮತ್ತೆ ಆಕರ್ಷಿಸುತ್ತದೆ. ನಾನು ನನ್ನ ಮಗು,ಪತ್ನಿಯೊಂದಿಗೆ ಜಾತ್ರೆಗೆ ಬಂದಿದ್ದೇನೆ. ಮಗೂ ಕೂಡ ಈ ಮೇಳದಲ್ಲಿ ಸಂಭ್ರಮಿಸುತ್ತಿದೆ ಎಂದು ʻದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

"ಕಳೆದ ವರ್ಷ ನಡೆದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಜನರು ಭೇಟಿ ನೀಡುವ ಸಾಧ್ಯತೆಯಿದೆ. ಆದ್ದರಿಂದ, ಅಗತ್ಯ ಭದ್ರತಾ ಸಿಬ್ಬಂದಿ, ಮಾರ್ಷಲ್‌ಗಳ ನಿಯೋಜನೆ, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ತುರ್ತು ವೈದ್ಯಕೀಯ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮತ್ತು ಇತರ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ" ಎಂದು ಸಚಿವ ರಾಮಲಿಂಗ ರೆಡ್ಡಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಹೆಚ್ಚು ಜನ ಸೇರುವ ನಿಟ್ಟಿನಲ್ಲಿ ಈ ಹಿಂದೆ ಸಾಂಪ್ರದಾಯಿಕವಾಗಿ ಮೂರು ದಿನಗಳ ಜಾತ್ರೆಯನ್ನು ಈ ವರ್ಷ ಐದು ದಿನಗಳವರೆಗೆ ವಿಸ್ತರಿಸಲಾಗಿದೆ. ನವೆಂಬರ್ 21ವರೆಗೆ ಈ ಜಾತ್ರೆ ನಡೆಯಲಿದೆ. ಈ ಪರಿಷೆಯನ್ನು ಈಗ ಮುಜರಾಯಿ ಇಲಾಖೆ ಆಯೋಜಿಸುತ್ತಿದೆ.

ಪರಿಷೆಯ ಐತಿಹ್ಯ ಏನು?

ಕಡಲೆಕಾಯಿ ಪರಿಷೆಗೆ ತನ್ನದೇ ಆದ ಇತಿಹಾಸವಿದೆ. ಅಂದಹಾಗೆ ಬೆಂಗಳೂರು ಮಹಾನಗರವಾಗುವ ಮೊದಲು ಬಸವನಗುಡಿಯು ಸುಂಕೇನಹಳ್ಳಿಯಾಗಿತ್ತು. ಸುಂಕೇನಹಳ್ಳಿಯ ಮಣ್ಣು ಫಲವತ್ತಾಗಿತ್ತು. ಆ ದಿನಗಳಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲ ಪ್ರದೇಶದ ರೈತರ ಪ್ರಮುಖ ಬೆಳೆಯೇ ಕಡಲೆಕಾಯಿ. ಸುಂಕೇನಹಳ್ಳಿಯ ( ಬಸವನಗುಡಿ) ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ ಬೆಳೆಯುತ್ತಿದ್ದರು. ಆದರೆ ಇದು ರೈತರಿಗೆ ಸರಿಯಾಗಿ ಕಟಾವಿಗೆ ಸಿಗುತ್ತಿರಲಿಲ್ಲ. ಏಕೆಂದರೆ, ಬಸವವೊಂದು ರೈತರು ಬೆಳೆದ ನೆಲಗಡಲೆಗಳನೆಲ್ಲ ತಿಂದು ನಾಶಪಡಿಸುತ್ತಿತ್ತು. ಒಂದು ದಿನ ರಾತ್ರಿ ರೈತನೊಬ್ಬ ಬೆಳೆ ತಿನ್ನುತ್ತಿದ್ದ ಬಸವನಿಗೆ ಕೋಲಿನಿಂದ ಹೊಡೆಯುತ್ತಾನೆ. ಆಗ ಆ ಬಸವ ಕಲ್ಲಿನ ರೂಪದಲ್ಲಿ ಅಲ್ಲೇ ನೆಲೆಗೊಳ್ಳುತ್ತದೆ. ಪಶ್ಚಾತ್ತಾಪದಿಂದ ರೈತ ಶಿವನನ್ನು ಪ್ರಾರ್ಥಿಸಲು ಪ್ರಾರಂಭಿಸಿದನು. ಶಿವನು ರೈತನ ಕನಸಿನಲ್ಲಿ ಕಾಣಿಸಿಕೊಂಡು ಆ ಪ್ರದೇಶದಲ್ಲಿ ನೆಲದಲ್ಲಿ ಹೂತುಹೋಗಿರುವ ತ್ರಿಶೂಲವನ್ನು ಹುಡುಕಲು ಹೇಳಿದನು. ಕಲ್ಲಿನ ಗೂಳಿ ದಿನೇ ದಿನೇ ಬೆಳೆಯಲು ಆರಂಭಿಸಿತ್ತು. ಅವನ ಕನಸಿನಲ್ಲಿ, ತ್ರಿಶೂಲವನ್ನು ಗೂಳಿಯ ತಲೆಯ ಮೇಲೆ ಇರಿಸಿದ ನಂತರ, ಬೆಳವಣಿಗೆ ನಿಲ್ಲುತ್ತದೆ ಎಂದು ಶಿವ ಹೇಳುವುದನ್ನು ರೈತ ಕೇಳಿದ್ದಾನೆ. ಇದನ್ನು ಮಾಡಲಾಯಿತು. ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಯಿತು. ಗೂಳಿಯನ್ನು ಸಮಾಧಾನಪಡಿಸಲು, ರೈತರು ಪ್ರತಿ ವರ್ಷ ಅದಕ್ಕೆ ಮೊದಲ ಕಟಾವು ಮಾಡಿದ ನೆಲಗಡಲೆಯನ್ನು ಅರ್ಪಿಸುವುದಾಗಿ ಪ್ರತಿಜ್ಞೆ ಮಾಡಿದರು ಎಂದು ಹಿರಿಯ ಅಂಕಣಕಾರ ಮತ್ತು ಬೆಂಗಳೂರಿನ ಇತಿಹಾಸಕಾರ ಸುರೇಶ್ ಮೂನಾ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಇದು ಜಾನಪದ ಕಥೆಯಾದರೆ, ಇನ್ನೊಂದೆಡೆ ಈ ದೇವಾಲಯವನ್ನು 16 ನೇ ಶತಮಾನದಲ್ಲಿ ಬೆಂಗಳೂರು ನಗರದ ನಿರ್ಮಾತೃ ಒಂದನೇ ಕೆಂಪೇಗೌಡರ ಅವಧಿಯಲ್ಲಿ ನಿರ್ಮಿಸಲಾಯಿತು ಎಂದು ಇತಿಹಾಸದಿಂದ ತಿಳಿದುಬರಲಿದೆ

ಕೆಂಪೇಗೌಡರು ನಗರದಲ್ಲಿ ನಂದಿ, ಹನುಮ ಮತ್ತು ದೇವತೆ (ಶಕ್ತಿ) ವಿಗ್ರಹಗಳನ್ನು ಸ್ಥಾಪಿಸಲು ಸೂಕ್ತವಾದ ಎತ್ತರದ ಸ್ಥಳವನ್ನು ಹುಡುಕುತ್ತಿದ್ದರು ಎಂದು ಹೇಳಲಾಗುತ್ತದೆ. ಇದು ಹಿಂದೆ ಒಂದು ಸ್ಥಳದ ಜನರಿಗೆ ದೈವಿಕ ರಕ್ಷಣೆ ಪಡೆಯಲು ಸಾಮಾನ್ಯ ಪದ್ಧತಿಯಾಗಿತ್ತು, ಮತ್ತು ಬುಲ್ ಟೆಂಪಲ್ ಸುತ್ತಮುತ್ತಲಿನ ಪ್ರದೇಶವನ್ನು ಆರಿಸಿಕೊಂಡರು. ನಂದಿ ಮತ್ತು ಹಿಂದೂ ದೇವತೆಗಳಾದ ಗಣೇಶ ಮತ್ತು ಆಂಜನೇಯ (ಹನುಮಾನ್) ಗಾಗಿ ದೇವಾಲಯಗಳನ್ನು ನಿರ್ಮಿಸಿದರು. ಬುಲ್ ಟೆಂಪಲ್ ಅವರ ಕಾಲದಿಂದಲೂ ಇದೆ ಎಂದು ನಂಬಲಾಗಿದೆ ಎಂದು ಸುರೇಶ್ ಮೂನಾ ತಿಳಿಸಿದರು.

ಈ ಬಾರಿಯು ಪರಿಷೆಗಾಗಿ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಹೂವಿನಿಂದ, ದೀಪಾಲಂಕಾರದಿಂದ ಅಲಂಕೃತಗೊಳಿಸಲಾಗಿದೆ. ಈ ದೇವಾಲಯದ ರಸ್ತೆಗಳ ಎರಡೂ ಬದಿಗಳಲ್ಲಿ ವ್ಯಾಪಾರಿಗಳು ಹಸಿ, ಹುರಿದ, ಬೇಯಿಸಿದ, ಅರೆ ಬೇಯಿಸಿದ ಕಡಲೆಕಾಯಿಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬರುತ್ತದೆ.

" ನನ್ನ ತಾಯಿ‌ ಮೊದಲಿನಿಂದಲೂ ಕಡಲೆಕಾಯಿ ಮಾರಾಟ ಮಾಡಲು ಬರುವುದನ್ನು ನೋಡಿದ್ದೇನೆ. ಈಗ ನಾನು ವ್ಯವಹಾರವನ್ನು ವಹಿಸಿಕೊಂಡಿರುವುದರಿಂದ, ನಾನು ಇಲ್ಲಿಗೆ ಬಂದಿದ್ದೇನೆ" ಎಂದು 32 ವರ್ಷದ ಮಾರಾಟಗಾರ ಕಾರ್ತಿಕ್ ಹೇಳಿದರು.

ನಾವು ಈ ಮೇಳಕ್ಕಾಗಿ ಕರ್ನಾಟಕದ ಬೆಳಗಾವಿಯ ಆರ್‌ಎಂಸಿ ಮಾರುಕಟ್ಟೆಯಿಂದ ನಮ್ಮ ಕಡಲೆಕಾಯಿಯನ್ನು ತರುತ್ತೇವೆ. ವ್ಯಾಪಾರವು ಮಧ್ಯರಾತ್ರಿಯವರೆಗೆ ನಡೆಯುತ್ತದೆ. ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂದು ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕಚ್ಚಾ ಮತ್ತು ಹುರಿದ ಕಡಲೆಕಾಯಿ ಒಂದು ಸೇರಿಗೆ 40-50 ರೂ.ಗಳಿಂದ ಮಾರಾಟ ಮಾಡಲಾಗುತ್ತದೆ. ವ್ಯಾಪಾರಿಗಳು ತಮಿಳುನಾಡಿನ ಸೇಲಂ, ತಿರುವಣ್ಣಾಮಲೈ ಮತ್ತು ಧರ್ಮಪುರಿಯಿಂದ ಈ ಪರಿಷೆಗೆ ಬಂದಿದ್ದಾರೆ. ಬೆಂಗಳೂರಿನ ನಿವಾಸಿ 29 ವರ್ಷದ ಸೌಂದರ್ಯ ಬಿ.ಎಸ್. ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ಮೇಳದಲ್ಲಿ ಕಚ್ಚಾ, ಹುರಿದ ಮತ್ತು ಒಣಗಿದ ಕಡಲೆಕಾಯಿಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದು ʼದ ಫೆಡರಲ್‌ ಕರ್ನಾಟಕ'ಕ್ಕೆ ತಿಳಿಸಿದರು.

ಈ ಬಾರಿಯ ಕಡಲೆಕಾಯಿ ಪರಿಷೆ ಪ್ಲಾಸ್ಟಿಕ್‌ ಮುಕ್ತ ಪರಿಷೆಯಾಗಿದೆ. ಮಾರಾಟಗಾರರು ಕಡಲೆಕಾಯಿ ಮಾರಾಟ ಮಾಡಲು ಕಾಗದ ಅಥವಾ ಬಟ್ಟೆಯ ಚೀಲವನ್ನು ಬಳಸುತ್ತಿರುವುದು ಕಂಡು ಬಂತು. ಯಾರಾದರೂ ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡುಬಂದರೆ ವ್ಯಾಪಾರ ನಿರ್ಬಂಧಿಸಲಾಗುತ್ತದೆ. ಸಾರ್ವಜನಿಕರಿಗೆ ಕಸ ಹಾಕುವುದರ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ಬಳಸುವವರಿಗೆ 2,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಎಂಜಿನಿಯರ್ ದಿಲೀಪ್ ಎ.ಪಿ. ಮಾತನಾಡಿ, ನಾನು ಬಾಲ್ಯದಿಂದಲೂ ಕಡಲೆ ಪರಿಷೆಗೆ ಬರುತ್ತಿದ್ದೇನೆ. ಇದು ತಾಜಾ ಕಡಲೆಕಾಯಿಗಳ ಕಾಲ, ಮತ್ತು ನೀವು ಇಲ್ಲಿ ವಿವಿಧ ಬಗೆಯ ಕಡಲೆಕಾಯಿ ರುಚಿಯನು ಸವಿಯಬಹುದು ಎಂದು ಅವರು ತಿಳಿಸಿದರು.

73 ವರ್ಷದ ಶೋಭಾ ಮಾತನಾಡಿ, ನಾನು ಬಾಲ್ಯದಲ್ಲಿ ಭೇಟಿ ನೀಡಿದಾಗ ಇದ್ದಂತೆಯೇ ಪರಿಷೆ ಭಾಸವಾಗುತ್ತಿದೆ. ನಾನು ಅದೇ ಉತ್ಸಾಹದಿಂದ ಹಾಜರಾಗುತ್ತೇನೆ. ಆದರೆ ಈಗ, ಈ ಹೊಸ ಫನ್‌ರೈಡ್‌ಗಳಿವೆ. ನಾವು ಬಸವನ ಪ್ರಸಾದ ಎಂದು ಕರೆಯುವ ಕಡಲೆಕಾಯಿಗಾಗಿ ಇಲ್ಲಿ ಬಂದಿದ್ದೇವೆ ಎಂದು ತಿಳಿಸಿದರು.

ಈ ಜಾತ್ರೆ ಹಳ್ಳಿಹಬ್ಬದಂತೆ ಎಂದು ಕಳೆದ 35 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕ ಆನಂದ ರಾವ್ ಮಧ್ಯಸ್ಥ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕಡಲೆಕಾಯಿ ಪರಿಷೆಗೆ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಅದರ ಪರಿಣಾಮವಾಗಿ ಬದಲಾಗುತ್ತಿರುವ ಪಾತ್ರವು ಎಲ್ಲರಿಗೂ ಇಷ್ಟವಾಗುವುದಿಲ್ಲ. ಏಕೆಂದರೆ ಇದು ಪರಿಷೆಯ ಮೂಲ ಉದ್ದೇಶವನ್ನು ದುರ್ಬಲಗೊಳಿಸಿದೆ ಎಂದು ಕೆಲವು ಕಡಲೆಕಾಯಿ ಮಾರಾಟಗಾರರು ತಿಳಿಸುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಮೇಳಕ್ಕೆ ಬರಲು ಪ್ರಾರಂಭಿಸಿರುವವರಲ್ಲಿ ಹೆಚ್ಚಿನವರು ಕಡಲೆಕಾಯಿಗಿಂತ ಇತರ ತಿಂಡಿಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮೇಳದ ಮಹತ್ವವನ್ನು ತಿಳಿದಿರುವವರು ಮಾತ್ರ ಕಡಲೆಕಾಯಿ ಖರೀದಿಸುತ್ತಾರೆ ಎಂದು ಸೌಂದರ್ಯ ವಿಷಾದಿಸುತ್ತಾ, ವ್ಯಾಪಾರ ಚೆನ್ನಾಗಿಲ್ಲ ಎಂದು ಹೇಳಿದರು.

ಕಳೆದ 30 ವರ್ಷಗಳಿಂದ ಮೇಳಕ್ಕೆ ಬರುತ್ತಿರುವುದಾಗಿ ಹೇಳಿದ ಮತ್ತೊಬ್ಬ ಮಾರಾಟಗಾರ್ತಿ 47 ವರ್ಷದ ಜಯಮ್ಮ ಅವರು, ಕಳೆದ19 ವರ್ಷಗಳ ಕಾಲ, ಮೇಳದಲ್ಲಿ ವ್ಯಾಪಾರ ಚೆನ್ನಾಗಿರುತ್ತಿತ್ತು. ಈ ವರ್ಷ, ಯಾವುದೇ ವ್ಯಾಪಾರ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನಾ ತಳಿಯ ಕಡಲೆಕಾಯಿಗಳು

ಇಲ್ಲಿ ನಾನಾ ತಳಿಯ ಹಾಗೂ ನಾನಾ ಗಾತ್ರದ ಕಡಲೆಕಾಯಿಗಳನ್ನು ಕಾಣಬಹುದು. ಹಸಿ ,ಉರಿದ ,ಬೇಯಿಸಿದ ,ಅರೆ ಬೆಂದ ಕಡಲೆ ಕಾಯಿಗಳು ಇಲ್ಲಿ ಮಾರಾಟವಾಗುತ್ತವೆ. ಸುಮಾರು ಒಂದು ಸೇರು ಕಡಲೆಕಾಯಿಗಳು 40 ರಿಂದ 70 ರೂಗಳ ವರೆಗೆ ಮಾರಾಟವಾಗುತ್ತದೆ . ಇಲ್ಲಿ ಕಡಲೆ ಕಾಯಿ ಪ್ರಮುಖ ಆಕರ್ಷಣೆಯಾದರೂ, ಬಗೆ ಬಗೆಯ ಆಹಾರಗಳನ್ನು ಕಾಣಬಹುದು .

ಬೆಂಗಳೂರಿನ ಚಳಿಗೆ ಬಿಸಿಬಿಸಿ ಜೋಳ, ಬೇಯಿಸಿದ ಕಡಲೆ ಕಾಯಿ, ಬೇಲ್ ಪುರಿ, ಪಾನಿ ಪುರಿ ,ಕಡ್ಲೆಪುರಿ ಆಹಾರಪ್ರಿಯರನ್ನು ತಮ್ಮತ್ತ ಸೆಳೆಯುತ್ತದೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವವರಿಗೆ ಮತ್ತು ಹಳ್ಳಿಯ ಜಾತ್ರೆಗಳನ್ನು ಕಣ್ತುಂಬಿಕೊಳ್ಳಬೇಕೆನ್ನುವವರಿಗೆ ಬೆಂಗಳೂರಿನಲ್ಲಿಯೇ ಹಳ್ಳಿ ಸೊಗಡಿನ ಅನುಭವ ಇಲ್ಲಿ ಸಿಗುತ್ತದೆ.

Next Story