
Water Contamination|ಅಪಾರ್ಟ್‌ಮೆಂಟ್‌ಗಳಿಗೆ ಜಲಮಂಡಳಿ ಶಾಕ್; ನೋಂದಣಿಗೆ ಬ್ರೇಕ್?
ಹೊಸ ನಿಯಮಾವಳಿ ಅಂತಿಮಗೊಳಿಸಿದ ಬಳಿಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು. ಸರ್ಕಾರದ ಒಪ್ಪಿಗೆ ದೊರೆತ ನಂತರ ನಿಯಮವನ್ನು ಜಾರಿಗೆ ತರಲಾಗುವುದು.
ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರು ಕಡ್ಡಾಯವಾಗಿ ನೀರಿನ ಸಂಪರ್ಕ ಪಡೆಯುವುದನ್ನು ಖಾತರಿಪಡಿಸಲು ಹಾಗೂ ನಿರ್ಲಕ್ಷ್ಯಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೆ ನಿರ್ಧರಿಸಿದೆ.
ಬೆಂಗಳೂರಿನ ಲಿಂಗರಾಜಪುರಂನಲ್ಲಿ ಕಲುಷಿತ ನೀರು ಪೂರೈಕೆ ಪ್ರಕರಣದ ಬಳಿಕ ಕುಡಿಯುವ ನೀರಿನ ಸುರಕ್ಷತೆ ಬಗ್ಗೆ ಎದ್ದಿದ್ದ ಆತಂಕಗಳಿಗೆ ತೆರೆ ಎಳೆದಿರುವ ಜಲಮಂಡಳಿಯು, ಕುಡಿಯುವ ನೀರಿನ ಪೂರೈಕೆ ಜಾಲದ ಪುನಶ್ಚೇತನಕ್ಕೂ ತೀರ್ಮಾನಿಸಿದೆ.
ಪ್ರಸ್ತುತ, ನೀರಿನ ಸಂಪರ್ಕ ಜಾಲ ಬದಲಿಸುವ ಜತೆಗೆ ಅಪಾರ್ಟ್‌ಮೆಂಟ್‌ಗಳೂ ಕೂಡ ಕಡ್ಡಾಯವಾಗಿ ನೀರಿನ ಸಂಪರ್ಕ ಪಡೆಯುವಂತೆ ಕ್ರಮ ಜರುಗಿಸಲು ಮುಂದಾಗಿದೆ. ನಿಗದಿತ ಅವಧಿಯೊಳಗೆ ನೀರಿನ ಸಂಪರ್ಕ ಪಡೆಯದ ಅಪಾರ್ಟ್‌ಮೆಂಟ್‌ಗಳ ಮೇಲೆ ದಂಡ ಹಾಕುವುದಕ್ಕೂ ಜಲಮಂಡಳಿ ಮುಂದಾಗಿರುವುದು ಅಪಾರ್ಟ್‌ಮೆಂಟ್ ಮಾಲೀಕರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರಿನ ಎಲ್ಲಾ ಅಪಾರ್ಟ್ಮೆಂಟ್ಗಳಲ್ಲಿ ಫ್ಲ್ಯಾಟ್ ಖರೀದಿಸುವವರು ಕಡ್ಡಾಯವಾಗಿ ಕುಡಿಯುವ ನೀರಿನ ಸಂಪರ್ಕ ಪಡೆಯಲೇ ಬೇಕು. ಕಳೆದ ವರ್ಷ ನೀರಿನ ಸಂಪರ್ಕ ಪಡೆಯಲು ಸೂಚನೆ ನೀಡಿದ್ದರೂ ಅಪಾರ್ಟ್‌ಮೆಂಟ್‌ಗಳು ಪಾಲಿಸಿಲ್ಲ. ಈ ನಿಟ್ಟಿನಲ್ಲಿ ಕಠಿಣ ನಿಯಮ ರೂಪಿಸಲು ಜಲಮಂಡಳಿ ತಯಾರಿ ನಡೆಸಿದೆ.
ಹೊಸ ನಿಯಮಾವಳಿಗಳನ್ನು ರೂಪಿಸಿ ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಸರ್ಕಾರದ ಅನುಮೋದನೆ ದೊರೆತ ಬಳಿಕ ಕಡ್ಡಾಯವಾಗಿ ಅಪಾರ್ಟ್‌ಮೆಂಟ್ ಮಾಲೀಕರು ನೀರಿನ ಸಂಪರ್ಕ ಪಡೆದುಕೊಳ್ಳಬೇಕು.
ಪ್ರಸ್ತುತ, ಬೆಂಗಳೂರಿನಲ್ಲಿ ಒಟ್ಟು 12 ಸಾವಿರ ಅಪಾರ್ಟ್‌ಮೆಂಟ್‌ಗಳಿವೆ. ಆದರೆ, ಸುಮಾರು 4 ಸಾವಿರ ಅಪಾರ್ಟ್‌ಮೆಂಟ್‌ಗಳಲ್ಲಿ ಈವರೆಗೂ ಜಲಮಂಡಳಿಯಿಂದ ನೀರಿನ ಸಂಪರ್ಕ ತೆಗೆದುಕೊಂಡಿಲ್ಲ. ಈಗಾಗಲೇ ಸಾಕಷ್ಟು ಬಾರಿ ಸೂಚನೆ ನೀಡಿದರೂ ಗಮನ ಹರಿಸುತ್ತಿಲ್ಲ. ಮನೆ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್ ಮಾಲೀಕರಿಗೆ ಅಥವಾ ಸಂಸ್ಥೆಗೆ ಕಡ್ಡಾಯವಾಗಿ ನೀರಿನ ಸಂಪರ್ಕ ತಗೆದುಕೊಳ್ಳುವಂತೆ ಹೇಳಬೇಕು. ಇದಕ್ಕಾಗಿ ಪ್ರತಿ ಚದರ ಮೀಟರ್ 400 ರೂ. ಶುಲ್ಕ ವಿಧಿಸಲಾಗುತ್ತದೆ. ಗುಣಮಟ್ಟದ ನೀರು ಪೂರೈಸುವ ಸಲುವಾಗಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಜಲಮಂಡಳಿ ಅದ್ಯಕ್ಷ ಡಾ. ರಾಮಪ್ರಸಾತ್ ವಿ. ಮನೋಹರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬೆಂಗಳೂರಿನಲ್ಲಿ ಬುಧವಾರ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಗರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ದುರ್ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಜಲಮಂಡಳಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಎಲ್ಲಾ ಅಪಾರ್ಟ್ಮೆಂಟ್ಗಳಲ್ಲಿ ಫ್ಲ್ಯಾಟ್ ಹೊಂದಿರುವವರು ಕಡ್ಡಾಯವಾಗಿ ಕುಡಿಯುವ ನೀರಿನ ಸಂಪರ್ಕ ಪಡೆಯಬೇಕು ಎಂಬ ನಿಯಮ ರೂಪಿಸಲಾಗುವುದು ಎಂದು ಹೇಳಿದರು.
ಸರ್ಕಾರದ ಸೂಚನೆ ಪಾಲಿಸದ ಬಹುತೇಕ ಅಪಾರ್ಟ್‌ಮೆಂಟ್‌ಗಳು ಇನ್ನೂ ಕೊಳವೆಬಾವಿ ಹಾಗೂ ಖಾಸಗಿ ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿವೆ. ಈ ಹಿನ್ನೆಲೆಯಲ್ಲಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ನೀರಿನ ಸಂಪರ್ಕ ಪಡೆಯದಿದ್ದರೆ ದಂಡ
ಹೊಸದಾಗಿ ನಿರ್ಮಾಣವಾಗುವ ಅಪಾರ್ಟ್‌ಮೆಂಟ್‌ಗಳು ಜಲಮಂಡಳಿ ವತಿಯಿಂದ ನೀರಿನ ಸಂಪರ್ಕ ಪಡೆಯದೆ ಇದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊಸ ನಿಯಮದಡಿ ಕಾವೇರಿ ನೀರಿನ ಸಂಪರ್ಕ ಪಡೆಯದ ಅಪಾರ್ಟ್‌ಮೆಂಟ್‌ಗಳಿಗೆ ದಂಡ ಅಥವಾ ಇತರೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಗರದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ನೀರಿನ ಅವಲಂಬನೆ ಕಡಿಮೆ ಮಾಡಿ, ಶುದ್ಧ ಕುಡಿಯುವ ನೀರು ಒದಗಿಸುವುದು ಇದರ ಉದ್ದೇಶವಾಗಿದೆ. ಸರ್ಕಾರ ಕಾವೇರಿ ನೀರು ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿರುವುದರಿಂದ ಆ ನೀರನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಅಗತ್ಯವಿದೆ ಎಂದು ಸೂಚಿಸಿದೆ.
ಜಲಮಂಡಳಿಯ ಹೊಸ ನಿಯಮಾವಳಿ ಅಂತಿಮಗೊಳಿಸಿದ ಬಳಿಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು. ಸರ್ಕಾರದ ಒಪ್ಪಿಗೆ ದೊರೆತ ನಂತರ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಡಾ. ರಾಮಪ್ರಸಾತ್ ಮನೋಹರ್ ತಿಳಿಸಿದರು.
ನೋಂದಣಿಗೆ ಬ್ರೇಕ್?
ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆಯದ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್ ಮಾಲೀಕರಿಗೆ ನೋಂದಣಿ ನಿರಾಕರಿಸುವ ಪ್ರಸ್ತಾವವೂ ಇದೆ ಎಂದು ಮೂಲಗಳು ತಿಳಿಸಿವೆ.
ಜಲಮಂಡಳಿಯು ಅಪಾರ್ಟ್‌ಮೆಂಟ್‌ಗಳಿಗೆ ಪೂರೈಸುವಷ್ಟು ನೀರು ಹೊಂದಿದೆ. ಹಾಗಾಗಿ ಪ್ರತಿಯೊಂದು ವಸತಿ ಸಮುಚ್ಛಯವೂ ನೀರಿನ ಸಂಪರ್ಕ ಪಡೆಯಬೇಕು. ಇಲ್ಲವಾದಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ಫ್ಲ್ಯಾಟ್ ನೋಂದಣಿ ನಿರಾಕರಿಸುವಂತೆ ನಿಯಮ ರೂಪಿಸಲಾಗುತ್ತಿದೆ ಎಂದು ಹೇಳಿವೆ.

