Bengaluru Karaga: Financial Crisis Hits Festival as Government Withholds Grant, Priest Voices Anguish
x

ಬೆಂಗಳೂರು ಕರಗದ ಸಂಗ್ರಹ ಚಿತ್ರ (ಚಿತ್ರ ಕೃಪೆ- ಬೆಂಗಳೂರು ಎಕ್ಸ್​ ಖಾತೆಯಿಂದ)

Bengaluru Karaga : ಅನುದಾನ ಕೊಡದ ಸರ್ಕಾರ, ಬೆಂಗಳೂರು ಕರಗಕ್ಕೆ ಆರ್ಥಿಕ ಸಂಕಷ್ಟ! ಅಳಲು ತೋಡಿಕೊಂಡ ಪೂಜಾರಿ

Bengaluru Karaga: ಕರಗದ ಪೂಜಾರಿ ಜ್ಞಾನೇಂದ್ರ ಅವರು, ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರಗೋತ್ಸವಕ್ಕೆ ಸರ್ಕಾರದಿಂದ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದ್ದಾರೆ.


ಶತಮಾನಗಳ ಇತಿಹಾಸವಿರುವ ಹಾಗೂ ಸಾಂಸ್ಕೃತಿಕ ವೈಭವ ಹೊಂದಿರುವ ಬೆಂಗಳೂರು ಕರಗೋತ್ಸವವು ಈ ಬಾರಿ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದೆ. ಧರ್ಮರಾಯಸ್ವಾಮಿ ದೇವಾಲಯದ ಕರಗದ ಪೂಜಾರಿ ಜ್ಞಾನೇಂದ್ರ ಅವರು ಇತಿಹಾಸದಲ್ಲಿ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ, ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಸತೀಶ್ ಅವರೂ ಸಹ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಬಾರದಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಗದ ಪೂಜಾರಿ ಜ್ಞಾನೇಂದ್ರ ಅವರು, ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರಗೋತ್ಸವಕ್ಕೆ ಸರ್ಕಾರದಿಂದ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದ್ದಾರೆ. "ನಾನೇ ಸ್ವಂತ ಹಣವನ್ನು ಖರ್ಚು ಮಾಡಿ ಕರಗದ ಅಲಂಕಾರ ಮತ್ತು ಇತರ ವ್ಯವಸ್ಥೆಗಳನ್ನು ಮಾಡುತ್ತಿದ್ದೇನೆ. ಈಗಾಗಲೇ ನಾನು 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ," ಎಂದು ಅವರು ಹೇಳಿದ್ದಾರೆ.

"ಬಿಬಿಎಂಪಿಯ ಕಚೇರಿಯೇ ಕರಗದ ಜಾಗದಲ್ಲಿದ್ದರೂ, ಯಾವುದೇ ರೀತಿಯ ನೆರವು ಒದಗಿಸದಿರುವುದಕ್ಕೆ ಅವರು ಕಿಡಿಕಾರಿದ್ದಾರೆ. ಬಿಬಿಎಂಪಿ ಸೇವೆಯ ರೂಪದಲ್ಲಿ ಕರಗದ ಜಾಗ ಬಳಸಿಕೊಂಡಿದೆ, ಆದರೆ ಕರಗಕ್ಕೆ ಯಾವುದೇ ಸಹಾಯ ಮಾಡಿಲ್ಲ," ಎಂದು ಆಕ್ಷೇಪಿಸಿದರು.

ಪೂಜಾರಿ ಜ್ಞಾನೇಂದ್ರ ಅವರು ಆಡಳಿತಾಧಿಕಾರಿಗಳ (ಇಓ) ನಡವಳಿಕೆಯನ್ನೂ ಪ್ರಶ್ನಿಸಿದ್ದಾರೆ. "ಅವರು ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ. ಕಾಣದ ಕೈಗಳು ಕರಗಕ್ಕೆ ಕೆಟ್ಟ ಹೆಸರು ತರುವಂತೆ ಮಾಡುತ್ತಿವೆ. ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ," ಎಂದು ಅವರು ಭಾವುಕರಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ (ಡಿಸಿ) ಕುರಿತಾಗಿಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, "ಡಿಸಿ ಈವರೆಗೆ ದೇವಸ್ಥಾನಕ್ಕೆ ಭೇಟಿ ನೀಡಿಲ್ಲ, ಸ್ಥಳ ಪರಿಶೀಲನೆ ಮಾಡಿಲ್ಲ, ತಾಯಿಯ ದರ್ಶನವನ್ನೂ ಪಡೆದಿಲ್ಲ," ಎಂದು ದೂರಿದ್ದಾರೆ.

ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಸತೀಶ್ ಆರೋಪವೇನು?

ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಸತೀಶ್ ಅವರು ಕಳೆದ ಆರು ವರ್ಷಗಳಿಂದ ಕರಗೋತ್ಸವ ನಡೆಸಿಕೊಂಡು ಬಂದಿದ್ದಾರೆ. ಈ ಬಾರಿಯ ಕರಗ ಶುರುವಾಗಿ ಎಂಟು ದಿನಗಳಾಗಿವೆ, ಆದರೆ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ. "ಈಗಾಗಲೇ ಕರಗಕ್ಕೆ 60 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಇದರಲ್ಲಿ ಪೂಜಾರಿ ಜ್ಞಾನೇಂದ್ರ ಅವರು 20 ಲಕ್ಷ, ನಾನು 20 ಲಕ್ಷ, ಮತ್ತು ಬಾಲಕೃಷ್ಣ ಅವರು 20 ಲಕ್ಷ ರೂಪಾಯಿಗಳನ್ನು ತಮ್ಮ ಸ್ವಂತ ಹಣದಿಂದ ಖರ್ಚು ಮಾಡಿದ್ದಾರೆ," ಎಂದು ಸತೀಶ್ ತಿಳಿಸಿದ್ದಾರೆ.

ಸತೀಶ್ ಅವರು, ಮಾಜಿ ಮೇಯರ್ ಪಿ.ಆರ್. ರಮೇಶ್ ಅವರ ಕುತಂತ್ರದಿಂದಲೇ ಹಣ ಬಿಡುಗಡೆಯಾಗಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. "40 ಲಕ್ಷ ರೂಪಾಯಿಗಳು ಯಾರ ಖಾತೆಗೆ ಹೋಗಿವೆ ಎಂಬುದು ಗೊತ್ತಿಲ್ಲ. ಕರಗಕ್ಕೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ," ಎಂದು ಅವರು ಆಕ್ಷೇಪಿಸಿದ್ದಾರೆ. ಗುತ್ತಿಗೆದಾರರಾದ ರಾಜು ಎಂಬವರನ್ನೂ ಸತೀಶ್ ಟೀಕಿಸಿದ್ದು, "ಗುತ್ತಿಗೆದಾರರಿಗೆ ಫೋನ್ ಮಾಡಿದರೆ, ಬೆಳಗಾವಿಯಲ್ಲಿದ್ದೇನೆ ಎಂದು ಹೇಳುತ್ತಾರೆ. ಅವರಿಗೂ ಒಂದು ರೂಪಾಯಿ ಕೊಟ್ಟಿಲ್ಲ," ಎಂದು ತಿಳಿಸಿದ್ದಾರೆ.

ಕೋರ್ಟ್ ಆದೇಶ ಉಲ್ಲಂಘನೆ?

"ಕೋರ್ಟ್ ಆದೇಶದ ಪ್ರಕಾರ, ದೇವಸ್ಥಾನದ ಆಡಳಿತಾಧಿಕಾರಿ (ಇಓ) ಮತ್ತು ಸಮಿತಿಯೇ ಕರಗ ನಡೆಸಬೇಕು. ಆದರೆ, ಡಿಸಿಯ ಖಾತೆಗೆ ಹಣವನ್ನು ಜಮೆ ಮಾಡಲಾಗಿದೆ, ಇದು ಕಾನೂನು ಉಲ್ಲಂಘನೆ ," ಎಂದು ಸತೀಶ್​ ಆರೋಪಿಸಿದ್ದಾರೆ. ಮುಜರಾಯಿ ಇಲಾಖೆಯನ್ನೂ ಟೀಕಿಸಿದ ಅವರು, "ನಿಮಗೆ ಕರಗ ನಡೆಸಲು ಯೋಗ್ಯತೆ ಇಲ್ಲದಿದ್ದರೆ, ದೇವಸ್ಥಾನವನ್ನು ನಮಗೆ ಹಸ್ತಾಂತರಿಸಿ. 10 ಕುಟುಂಬಗಳು ಹಣ ಹಾಕಿ ಕರಗವನ್ನು ನಡೆಸುತ್ತೇವೆ," ಎಂದು ಸವಾಲು ಹಾಕಿದ್ದಾರೆ.

ಮಾಜಿ ಮೇಯರ್ ಪಿ.ಆರ್. ರಮೇಶ್ ಅವರ ಸ್ಪಷ್ಟನೆ

ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮೇಯರ್ ಪಿ.ಆರ್. ರಮೇಶ್ ಅವರು, ಹಣ ಬಿಡುಗಡೆಯಾಗದಿರುವುದಕ್ಕೆ ತಾವು ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ನಾನು ಇತ್ತೀಚೆಗೆ ಮುಖ್ಯ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಎರಡು ದಿನಗಳ ಹಿಂದೆ 40 ಲಕ್ಷ ರೂಪಾಯಿಗಳ ಮೊದಲ ಕಂತು ಬಿಡುಗಡೆ ಮಾಡಲಾಗಿದೆ. ಎರಡನೇ ಕಂತನ್ನು ಬಿಡುಗಡೆ ಮಾಡಲು, ಸರಿಯಾದ ಉಪಯೋಗ ಪ್ರಮಾಣಪತ್ರ (ಯುಟಿಲೈಸ್ ಸರ್ಟಿಫಿಕೇಟ್) ಸಲ್ಲಿಸಬೇಕು," ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷದ ಬಿಲ್‌ಗಳನ್ನು ಸರಿಯಾಗಿ ಸಲ್ಲಿಸದಿರುವುದೇ ಈ ಗೊಂದಲಕ್ಕೆ ಕಾರಣ ಎಂದು ರಮೇಶ್ ಆರೋಪಿಸಿದ್ದಾರೆ.

Read More
Next Story