
ಬಟ್ಟೆ ವಿಚಾರಕ್ಕೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ? ಮಹಿಳಾ ಹೋಮ್‌ಗಾರ್ಡ್ ಮೇಲೆ ಯುವತಿಯಿಂದ ಹಲ್ಲೆ
ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಲ್ಲೆ ಮಾಡಿರುವ ಯುವತಿ ಮೋಹಿನಿಯನ್ನು ಬಂಧಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಯುವತಿಯೊಬ್ಬಳು ಕರ್ತವ್ಯನಿರತ ಮಹಿಳಾ ಹೋಮ್‌ಗಾರ್ಡ್ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿರುವ ಘಟನೆ ಕೆಆರ್ ಪುರಂ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಬಟ್ಟೆ ವಿಚಾರವಾಗಿ ಬುದ್ಧಿವಾದ ಹೇಳಲು ಬಂದಿದ್ದಕ್ಕೆ ಆಕ್ರೋಶಗೊಂಡ ಯುವತಿ, ಮಹಿಳಾ ಸಿಬ್ಬಂದಿಯ ಜುಟ್ಟು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಲಕ್ಷ್ಮಿ ನರಸಮ್ಮ ಎಂಬುವವರೇ ಹಲ್ಲೆಗೊಳಗಾದ ದುರ್ದೈವಿ ಮಹಿಳಾ ಹೋಮ್‌ಗಾರ್ಡ್. ಆರೋಪಿ ಯುವತಿಯನ್ನು ಮೋಹಿನಿ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಮೋಹಿನಿ ಶಾರ್ಟ್ ಬಟ್ಟೆ ಧರಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಸ್ಥಳದಲ್ಲಿದ್ದ ಕೆಲವು ಯುವಕರು ಆಕೆಯನ್ನು ಚುಡಾಯಿಸುತ್ತಿದ್ದರು. ಈ ಸನ್ನಿವೇಶವನ್ನು ಗಮನಿಸಿದ ಲಕ್ಷ್ಮಿ ನರಸಮ್ಮ ಅವರು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಯುವತಿಗೆ ವಸ್ತ್ರಧಾರಣೆಯ ಬಗ್ಗೆ ಸಮಾಧಾನದಿಂದ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ.
ಆದರೆ ಹೋಮ್‌ಗಾರ್ಡ್ ಅವರ ಮಾತು ಕೇಳುತ್ತಿದ್ದಂತೆಯೇ ಕೆರಳಿದ ಮೋಹಿನಿ, ಏಕಾಏಕಿ ರಸ್ತೆಯಲ್ಲೇ ರಂಪಾಟ ಶುರು ಮಾಡಿದ್ದಾಳೆ. ಕರ್ತವ್ಯದಲ್ಲಿದ್ದ ಲಕ್ಷ್ಮಿ ನರಸಮ್ಮ ಅವರ ಜುಟ್ಟು ಹಿಡಿದು ಎಳೆದಾಡಿ, ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ಅನಿರೀಕ್ಷಿತ ಹಲ್ಲೆಯಿಂದ ಹೋಮ್‌ಗಾರ್ಡ್ ಕಂಗಾಲಾಗಿದ್ದು, ಸ್ಥಳದಲ್ಲಿದ್ದವರು ಘಟನೆಯನ್ನು ನೋಡಿ ದಂಗಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹಲ್ಲೆಕೋರ ಯುವತಿ ಮೋಹಿನಿಯನ್ನು ಬಂಧಿಸಿದ್ದಾರೆ. ಸರ್ಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

