
ಬೆಂಗಳೂರು: ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ
ಎರಡು ಅಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿರುವ ಯುಪಿಎಸ್ ಸ್ಫೋಟಗೊಂಡಿದ್ದೇ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ.
ನಗರದ ಬನಶಂಕರಿ ಬ್ಯಾಂಕ್ ಕಾಲೋನಿಯಲ್ಲಿರುವ ದಿನಸಿ ಅಂಗಡಿಯೊಂದರಲ್ಲಿ ಶನಿವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಂಭುಶೆಟ್ಟಿ ಎಂಬುವವರಿಗೆ ಸೇರಿದ ಧನಲಕ್ಷ್ಮಿ ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿ ಈ ದುರಂತ ಸಂಭವಿಸಿದೆ. ಮಾಲೀಕರು ರಾತ್ರಿ 10.30ಕ್ಕೆ ಅಂಗಡಿ ಮುಚ್ಚಿದ್ದರು. ಸುಮಾರು 11 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಯುಪಿಎಸ್ ಸ್ಫೋಟ ಶಂಕೆ
ಎರಡು ಅಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿರುವ ಯುಪಿಎಸ್ ಸ್ಫೋಟಗೊಂಡಿದ್ದೇ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ. ಅಂಗಡಿಯಲ್ಲಿದ್ದ ಅಡುಗೆ ಎಣ್ಣೆ ಮತ್ತು ತುಪ್ಪದಂತಹ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳಿಂದಾಗಿ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ, ಮೊದಲ ಮಹಡಿಯವರೆಗೂ ಹಬ್ಬಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.
Next Story

