
ವಂಚನೆ ಕೇಸ್ ಮುಚ್ಚಿಹಾಕಲು ಲೈಂಗಿಕ ಕಿರುಕುಳದ ಆರೋಪ? ಬೆಂಗಳೂರಿನ ಮಹಿಳೆ ಮೇಲೆ ಕೇಸ್
ಈ ವಂಚನೆ ಕುರಿತು ಸಂತೋಷ್ ರೆಡ್ಡಿ ಅವರು 2025ರ ಸೆಪ್ಟೆಂಬರ್ 17 ರಂದು ಚೆನ್ನೈನ ನಸರತ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು
'ಬಿಗ್ ಬಾಸ್' ತಮಿಳು ಖ್ಯಾತಿಯ ಇವಿಪಿ ಫಿಲ್ಮ್ ಸಿಟಿಯ ಮಾಲೀಕ ಸಂತೋಷ್ ರೆಡ್ಡಿ ಮತ್ತು ಬೆಂಗಳೂರಿನ ಫ್ಯಾಶನ್ ಡಿಸೈನರ್ ಪಾರ್ವತಿ ನಡುವಿನ ವಿವಾದವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಪ್ರಕರಣದ ಹಿಂದೆ ಕೋಟ್ಯಂತರ ರೂಪಾಯಿ ವಂಚನೆಯ ಜಾಲವಿರುವುದು ಬಯಲಾಗಿದೆ. ತಮ್ಮ ಮೇಲೆ ದಾಖಲಾಗಿರುವ ಲೈಂಗಿಕ ಕಿರುಕುಳದ ಆರೋಪವು, ತಾವು ಈ ಹಿಂದೆ ದಾಖಲಿಸಿದ್ದ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ರೂಪಿಸಿದ ಸಂಚು ಎಂದು ಸಂತೋಷ್ ರೆಡ್ಡಿ ಆರೋಪಿಸಿದ್ದು, ಸ್ಫೋಟಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಸಂತೋಷ್ ರೆಡ್ಡಿ ಅವರ ಪ್ರಕಾರ, ತಮ್ಮ ಮನೆಯ ಶುಭ ಸಮಾರಂಭಕ್ಕಾಗಿ ಕಡಿಮೆ ಬೆಲೆಯಲ್ಲಿ ದುಬಾರಿ ವಸ್ತುಗಳನ್ನು ತಂದುಕೊಡುವುದಾಗಿ ಪಾರ್ವತಿ ನಂಬಿಸಿದ್ದರು. ಇದನ್ನು ನಂಬಿದ ರೆಡ್ಡಿ, ಬೆಂಗಳೂರಿಗೆ ತೆರಳಿ 1.5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು. ಆದರೆ, ಪಾರ್ವತಿ ಅವರು ಹಣ ಪಡೆದು ವಸ್ತುಗಳನ್ನು ನೀಡದೆ ವಂಚಿಸಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಪಾರ್ವತಿ ಉಡಾಫೆಯಿಂದ ಉತ್ತರಿಸಿ, ಸಂಪರ್ಕ ಕಡಿತಗೊಳಿಸಿದ್ದರು ಎನ್ನಲಾಗಿದೆ.
ದೂರಿನ ಮೇಲೆ ದೂರು
ಈ ವಂಚನೆ ಕುರಿತು ಸಂತೋಷ್ ರೆಡ್ಡಿ ಅವರು 2025ರ ಸೆಪ್ಟೆಂಬರ್ 17 ರಂದು ಚೆನ್ನೈನ ನಸರತ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ, ಪೊಲೀಸರು ಎಫ್‌ಐಆರ್ ದಾಖಲಿಸಿ, ಪಾರ್ವತಿ ಅವರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ ತನಿಖೆ ಆರಂಭಿಸಿದ್ದರು.
ಇಲ್ಲಿಂದ ಪ್ರಕರಣಕ್ಕೆ ನಾಟಕೀಯ ತಿರುವು ಸಿಕ್ಕಿದೆ. ಚೆನ್ನೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದಾಗ, ಪಾರ್ವತಿ ಅವರು ತನಿಖೆಗೆ ಸಹಕರಿಸಲಿಲ್ಲ. ಬದಲಿಗೆ, ಮದ್ರಾಸ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆ ಅರ್ಜಿ ವಜಾಗೊಂಡ ಕೇವಲ 8 ದಿನಗಳ ನಂತರ, ಅಂದರೆ ಸೆಪ್ಟೆಂಬರ್ 25 ರಂದು, ಪಾರ್ವತಿ ಅವರು ಬೆಂಗಳೂರಿನಲ್ಲಿ ಸಂತೋಷ್ ರೆಡ್ಡಿ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ವಂಚನೆ ಪ್ರಕರಣ ದಾಖಲಾದ ನಂತರವೇ ಲೈಂಗಿಕ ಕಿರುಕುಳದ ದೂರು ದಾಖಲಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಮ್ಮ ಮೇಲಿನ ವಂಚನೆ ಪ್ರಕರಣದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಕಾನೂನಿನ ಕುಣಿಕೆಯಿಂದ ಪಾರಾಗಲು ಪಾರ್ವತಿ ಅವರು ಈ ಸುಳ್ಳು ದೂರನ್ನು ಸೃಷ್ಟಿಸಿದ್ದಾರೆ ಎಂದು ಸಂತೋಷ್ ರೆಡ್ಡಿ ಆರೋಪಿಸಿದ್ದಾರೆ.
ತಮ್ಮ ವಾದವನ್ನು ಸಮರ್ಥಿಸಲು, ಸಂತೋಷ್ ರೆಡ್ಡಿ ಅವರು ಚೆನ್ನೈನಲ್ಲಿ ದಾಖಲಾದ ವಂಚನೆ ಪ್ರಕರಣದ ಎಫ್‌ಐಆರ್, ಪಾರ್ವತಿ ಮತ್ತು ಅವರ ಪತಿಯ ಕಂಪನಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಹಾಗೂ ಮದ್ರಾಸ್ ಹೈಕೋರ್ಟ್‌ನಲ್ಲಿ ಪಾರ್ವತಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಆದೇಶದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

