
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮನೆ ಮುಂದೆ ಕಸ ಸುರಿದು ಎಚ್ಚರಿಕೆ ನೀಡಿದರು.
ʼಮನೆ ಮುಂದೆ ಕಸ ಸುರಿಯುವುದು ಸರಿಯಲ್ಲ, ಸರ್ಕಾರ ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಿಸಲಿʼ
ಮುಖ್ಯಮಂತ್ರಿಗಳೇ ಸಭೆ ಮಾಡಿ ಗುಂಡಿ ಮುಚ್ಚಲು ಡೆಡ್ ಲೈನ್ ಕೊಟ್ಟಿದ್ದರೂ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ಸಿಎಂ ಮಾತಿಗೆ ಅಧಿಕಾರಿಗಳು ಎಷ್ಟು ಬೆಲೆ ಕೊಡುತ್ತಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಹೆಚ್‌ಡಿಕೆ ತಿಳಿಸಿದರು.
ʼಜನರು ಕಸವನ್ನು ಬೀದಿಯಲ್ಲಿ ಹಾಕಿದರು ಎಂದು ಬೀದಿಯಲ್ಲಿರೋ ಕಸ ತಂದು ಜನರ ಮನೆ ಮುಂದೆ ಹಾಕುವುದಕ್ಕೆ ಯಾವುದೇ ಅರ್ಥ ಇಲ್ಲ. ಸರ್ಕಾರ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು. ಅದನ್ನು ಬಿಟ್ಟು ಲಾರಿಯಲ್ಲಿ ಕಸ ತುಂಬಿಕೊಂಡು ಬಂದು ಮನೆ ಮುಂದೆ ಹಾಕುವುದು ಎಷ್ಟು ಸರಿ?"
ಹೀಗೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕೆ ಸರ್ಕಾರದ ಬಳಿ ಜಾಗವಿಲ್ಲ. ಅದಕ್ಕೆ ಮನೆಗಳ ಮುಂದೆ ತಂದು ಹಾಕಿದರೆ ಜನರೇ ಕಸ ವಿಲೇವಾರಿ ಮಾಡಿಕೊಳ್ಳುತ್ತಾರೆ ಎನ್ನುವ ಭಾವನೆ ಇರಬಹುದು. ಆ ಉದ್ದೇಶದಿಂದ ಸರ್ಕಾರ ಮನೆಗಳ ಮುಂದೆ ಕಸ ಸುರಿಯುವ ಹೊಸ ವಿನೂತನ ಕಾರ್ಯಕ್ರಮ ಮಾಡಿದೆ," ಎಂದು ಕಿಡಿಕಾರಿದರು.
"ನಗರದಲ್ಲಿ ಗುಂಡಿ ಮುಚ್ಚಲು ವಿಧಿಸಿರುವ ಡೆಡ್ ಲೈನ್ ಮುಗಿದಿದ್ದರೂ ಇನ್ನೂ ಗುಂಡಿಗಳು ಹಾಗೆಯೇ ಇವೆ. ಆ ಬಗ್ಗೆ ಪ್ರಶ್ನಿಸಿದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಿ ಎಂದಿರುವುದು ಸಿಎಂ ಸಿದ್ದರಾಮಯ್ಯನವರ ಬೇಜವಾಬ್ದಾರಿತನದ ಪರಮಾವಧಿ. ಅವರ ಹೇಳಿಕೆ ಈ ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಣೆ ಮಾಡಲು ಅಸಮರ್ಥನಾಗಿದ್ದೇನೆ ಎಂಬಂತಿದೆ," ಎಂದರು.
ಡೆಡ್‌ಲೈನ್ ಮುಗಿದರೂ ಗುಂಡಿಗಳಿಗಿಲ್ಲ ಮುಕ್ತಿ
"ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು? ಸಿದ್ದರಾಮಯ್ಯನವರಾ ಅಥವಾ ಡಿ.ಕೆ. ಶಿವಕುಮಾರ್ ಅವರಾ?. ಮುಖ್ಯಮಂತ್ರಿಗಳೇ ಸಭೆ ಮಾಡಿ ಗುಂಡಿ ಮುಚ್ಚಲು ಡೆಡ್ ಲೈನ್ ಕೊಟ್ಟಿದ್ದರೂ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ಸಿಎಂ ಮಾತಿಗೆ ಅಧಿಕಾರಿಗಳು ಎಷ್ಟು ಬೆಲೆ ಕೊಡುತ್ತಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ," ಎಂದು ಹೇಳಿದರು.
ನವೆಂಬರ್ ಕ್ರಾಂತಿ ಕಾಂಗ್ರೆಸ್‌ಗೆ ಬಿಟ್ಟದ್ದು
ನವೆಂಬರ್ 21ಕ್ಕೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡುತ್ತಾರೆ ಎಂಬ ಚರ್ಚೆ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, "ಅದು ಅವರ ಪಕ್ಷದಲ್ಲಿನ ತೀರ್ಮಾನ. ಅವರಿಗೆ ಬಿಟ್ಟಿರೋದು, ನಾನು ಈ ವಿಷಯದಲ್ಲಿ ಮಾತಮಾಡುವುದು ಸಣ್ಣತನವಾಗುತ್ತದೆ. ಅವರ ಪಕ್ಷದಲ್ಲಿ ಏನು ತೀರ್ಮಾನ ಮಾಡುತ್ತಾರೋ ಮಾಡಿಕೊಳ್ಳಲಿ. ಸರ್ಕಾರದ ಅವಧಿ ಇನ್ನು ಎರಡೂವರೆ ವರ್ಷ ಇದೆ. ಆದರೆ ಕಾಂಗ್ರೆಸ್‌ನವರೇ ಪ್ರತಿನಿತ್ಯ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ವಿರೋಧ ಪಕ್ಷಗಳು ಮಾತಾಡುವ ಅವಶ್ಯಕತೆ ಇಲ್ಲ. ಮಂತ್ರಿಗಳು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅವರವರೇ ಮಾತನಾಡುತ್ತಿರುವಾಗ ನಾವು ಯಾವ ದೃಷ್ಟಿಯಿಂದ ನೋಡುವುದು?," ಎಂದು ವ್ಯಂಗ್ಯವಾಡಿದರು.
ಸುರಂಗ ರಸ್ತೆ ಸರ್ಕಾರಕ್ಕೆ ಬಿಟ್ಟದ್ದು
"ತಜ್ಞರ ಅಭಿಪ್ರಾಯ ಪಡೆದು ಕೆಲಸ ಆರಂಭ ಮಾಡುತ್ತಾರೋ ಅಥವಾ ಹಾಗೆಯೇ ಸುರಂಗ ರಸ್ತೆ ಕಾಮಗಾರಿ ಆರಂಭ ಮಾಡುತ್ತಾರೋ ನೋಡೋಣ. ಬೆಂಗಳೂರು ಜನರ ಟ್ರಾಫಿಕ್ ಸಮಸ್ಯೆ ಬಗೆಹರಿಯಬೇಕು. ಟನಲ್ ರಸ್ತೆ ಮಾಡುತ್ತಾರೋ, ಎಲಿವೆಟೆಡ್ ರಸ್ತೆ ಮಾಡುತ್ತಾರೋ ಅದು ಸರ್ಕಾರಕ್ಕೆ ಬಿಟ್ಟಿದ್ದು. ಜನರು ಪ್ರತಿನಿತ್ಯ ಜನಪ್ರತಿನಿಧಿಗಳು ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಜನರ ಬದುಕಿನಲ್ಲಿ ಸರ್ಕಾರ ಚಲ್ಲಾಟ ಆಡಬಾರದು," ಎಂದು ಕಿವಿಮಾತು ಹೇಳಿದರು.
ರೌಡಿಗಳನ್ನು ಬಿಟ್ಟು ಆಸ್ತಿ ವಶ
ರಾಜ್ಯದಲ್ಲಿ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕರು ಸುಮಾರು 80 ವರ್ಷಗಳ ಕಾಲ ಕಷ್ಟಪಟ್ಟು ಸಂಪಾದನೆ ಮಾಡಿದ ಆಸ್ತಿಯನ್ನ ರೌಡಿಗಳು, ಗೂಂಡಾಗಳನ್ನು ಬಿಟ್ಟು ಲಪಟಾಯಿಸುತ್ತಿದ್ದಾರೆ. ಇದಕ್ಕೆಲ್ಲ ಅಂತ್ಯ ಹಾಡುವ ಕಾಲ ಬರುತ್ತದೆ ಎಂದರು.

