
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ| ಕಾಂಗ್ರೆಸ್ ಅವಧಿಯಲ್ಲಿ ಕರ್ನಾಟಕದ ದಕ್ಷ ಪೊಲೀಸರಿಗೆ ನಿತ್ರಾಣ: ಪ್ರತಿಪಕ್ಷ ಗರಂ
ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಲು ಮಹಾರಾಷ್ಟ ಪೊಲೀಸರು ಬರಬೇಕಾದರೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಮೂರು ಸ್ಥಳಗಳಲ್ಲಿ ಡ್ರಗ್ಸ್ ತಯಾರಿಕಾ ಘಟಕಗಳು ಪತ್ತೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ(ಡಿ.28) ಸಂದೇಶ ಹಂಚಿಕೊಂಡಿರುವ ಅವರು, ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ "ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ ಇದೆ" ಎಂದು ಗಂಭೀರತೆ ಅರಿಯದೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಉಡಾಫೆ ಉತ್ತರ ಕೊಟ್ಟಿದ್ದರು ಎಂದು ಕಟುವಾಗಿ ಹೇಳಿದ್
ಗುಪ್ತಚರ ಇಲಾಖೆ ವೈಫಲ್ಯ
ಕಳೆದ ಜುಲೈನಲ್ಲಿ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಚ್ಚಿ, ಸುಮಾರು 390 ಕೋಟಿ ರು. ಮೌಲ್ಯದ 192 ಕೆ.ಜಿ. ಮೆಫೆಡ್ರೋನ್ ಡ್ರಗ್ಸ್ ವಶಪಡಿಸಿಕೊಂಡಿದ್ದ ಮಹಾರಾಷ್ಟ್ರ ಪೊಲೀಸರು ಇದೀಗ ಬೆಂಗಳೂರಿನ 3 ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ನಡೆಸಿ 56 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಶೌರ್ಯ, ಸಾಹಸ, ದಕ್ಷತೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದ ನಿತ್ರಾಣವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಪತ್ತೆ ಹಚ್ಚಲು, ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಲು ಮಹಾರಾಷ್ಟ ಪೊಲೀಸರು ಬರಬೇಕಾದರೆ ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ವಿರುದ್ಧ ಹೋರಾಟ
ಯುವ ಜನಾಂಗದ ಭವಿಷ್ಯಕ್ಕೆ ಮಾರವಾಗಿರುವ ಈ ಡ್ರಗ್ಸ್ ದಂಧೆಯನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಲು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ ?
ಬೆಂಗಳೂರು ಪೊಲೀಸರ ಕಣ್ತಪ್ಪಿಸಿ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಸ್ಪಂದನ ಲೇಔಟ್, ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಜಿ. ಗೊಲ್ಲಹಳ್ಳಿಯಲ್ಲಿರುವ 'ಆರ್.ಜೆ. ಇವೆಂಟ್ಸ್' ಹೆಸರಿನ ಘಟಕ ಮತ್ತು ಅವಲಹಳ್ಳಿ ವ್ಯಾಪ್ತಿಯ ಯರಪ್ಪನಹಳ್ಳಿಯ ಜನವಸತಿ ಪ್ರದೇಶದ ಮನೆಯಲ್ಲಿ ಡ್ರಗ್ಸ್ ತಯಾರಿಸಲಾಗುತ್ತಿತ್ತು. ಮುಂಬೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿಗೆ ಆಗಮಿಸಿದ ಮಹಾರಾಷ್ಟ್ರದ ವಿಶೇಷ ತಂಡ, ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಸೆರೆಹಿಡಿದಿತ್ತು. ಈತನೇ ಬೆಂಗಳೂರಿನಲ್ಲಿ ಡ್ರಗ್ ತಯಾರಿಕಾ ಘಟಕಗಳ ಉಸ್ತುವಾರಿ ವಹಿಸಿದ್ದ ಎನ್ನಲಾಗಿದೆ. ಈತನ ಜೊತೆಗೆ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಎಂಬುವವರನ್ನೂ ಪೊಲೀಸರು ಬಂಧಿಸಿದ್ದರು.

