
ಪೊಲೀಸರು ವಶಪಡಿಸಿಕೊಂಡಿರುವ ಮಾದಕದ್ರವ್ಯ
ಬೆಂಗಳೂರಿಗೆ ಹಬ್ಬಿದ್ದ 'ಡ್ರಗ್ ಫ್ಯಾಕ್ಟರಿ' ಜಾಲ 55 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಮುಂಬೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿಗೆ ಆಗಮಿಸಿದ ಮಹಾರಾಷ್ಟ್ರದ ವಿಶೇಷ ತಂಡ, ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಸೆರೆಹಿಡಿದಿದೆ.
ಹೊಸ ವರ್ಷಾಚರಣೆಯ ಹೊಸ್ತಿಲಲ್ಲಿರುವ ಸಿಲಿಕಾನ್ ಸಿಟಿಯಲ್ಲಿ ಮಹಾರಾಷ್ಟ್ರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಗುಪ್ತವಾಗಿ ಕಾರ್ಯಾಚರಿಸುತ್ತಿದ್ದ ಮೂರು ಬೃಹತ್ ಡ್ರಗ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಅಂದಾಜು 55.88 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ 21ರಂದು ಮುಂಬೈನ ವಾಶಿ ಪ್ರದೇಶದಲ್ಲಿ ದಾಳಿ ನಡೆಸಿದ್ದ ಮಹಾರಾಷ್ಟ್ರದ ಮಾದಕ ದ್ರವ್ಯ ನಿಗ್ರಹ ದಳ (ANTF), ಅಬ್ದುಲ್ ಖಾದಿರ್ ಶೇಕ್ ಎಂಬಾತನನ್ನು ಬಂಧಿಸಿ 1.5 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿತ್ತು. ಈತನ ವಿಚಾರಣೆ ನಡೆಸಿದಾಗ ದಂಧೆಯ ಬೇರು ಬೆಂಗಳೂರಿನಲ್ಲಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿತ್ತು.
ಬೆಂಗಳೂರಿನಲ್ಲಿ ಬೆಳಗಾವಿ ಕಿಂಗ್‌ಪಿನ್ ಅರೆಸ್ಟ್
ಮುಂಬೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿಗೆ ಆಗಮಿಸಿದ ಮಹಾರಾಷ್ಟ್ರದ ವಿಶೇಷ ತಂಡ, ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಸೆರೆಹಿಡಿದಿದೆ. ಈತನೇ ಬೆಂಗಳೂರಿನಲ್ಲಿ ಡ್ರಗ್ ತಯಾರಿಕಾ ಘಟಕಗಳ ಉಸ್ತುವಾರಿ ವಹಿಸಿದ್ದ ಎನ್ನಲಾಗಿದೆ. ಈತನ ಜೊತೆಗೆ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಎಂಬುವವರನ್ನೂ ಬಂಧಿಸಲಾಗಿದೆ.
ಎಲ್ಲೆಲ್ಲಿತ್ತು ಫ್ಯಾಕ್ಟರಿ?
ಬೆಂಗಳೂರು ಪೊಲೀಸರ ಕಣ್ತಪ್ಪಿಸಿ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಸ್ಪಂದನ ಲೇಔಟ್, ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಜಿ. ಗೊಲ್ಲಹಳ್ಳಿಯಲ್ಲಿರುವ 'ಆರ್.ಜೆ. ಇವೆಂಟ್ಸ್' ಹೆಸರಿನ ಘಟಕ ಮತ್ತು ಅವಲಹಳ್ಳಿ ವ್ಯಾಪ್ತಿಯ ಯರಪ್ಪನಹಳ್ಳಿಯ ಜನವಸತಿ ಪ್ರದೇಶದ ಮನೆಯಲ್ಲಿ ಡ್ರಗ್ಸ್ ತಯಾರಿಸಲಾಗುತ್ತಿತ್ತು.
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ!
ಆರೋಪಿಗಳು ಡ್ರಗ್ ಮಾರಾಟದಿಂದ ಬಂದ ಕೋಟ್ಯಂತರ ರೂಪಾಯಿ ಹಣವನ್ನು ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಗಂಭೀರ ಅಂಶ ತನಿಖೆಯಲ್ಲಿ ತಿಳಿದುಬಂದಿದೆ. ದಾಳಿ ವೇಳೆ 4.1 ಕೆಜಿ ಘನ ರೂಪದ ಹಾಗೂ 17 ಕೆಜಿ ದ್ರವ ರೂಪದ ಮೆಫೆಡ್ರೋನ್ ಮಾದಕ ದ್ರವ್ಯ ಪತ್ತೆಯಾಗಿದೆ.
ಸದ್ಯ ಬೆಂಗಳೂರು ಪೊಲೀಸರೂ ಕೂಡ ಈ ಬಗ್ಗೆ ಎಚ್ಚೆತ್ತುಕೊಂಡಿದ್ದು, ಮಹಾರಾಷ್ಟ್ರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹೊಸ ವರ್ಷದ ಪಾರ್ಟಿಗಳಿಗೆ ಈ ಡ್ರಗ್ ಸರಬರಾಜು ಮಾಡುವ ಯೋಜನೆ ಇದಾಗಿತ್ತು ಎಂದು ಶಂಕಿಸಲಾಗಿದೆ.
ಈ ಹಿಂದೆಯೂ ನಡೆದಿತ್ತು ದಾಳಿ
ಮಾದಕ ದ್ರವ್ಯದ ಜಾಡು ಹಿಡಿದು ಈ ಹಿಂದೆಯೂ ಮಹಾರಾಷ್ಟ್ರ ಪೊಲೀಸರು ಕಲಬುರಗಿ ಹಾಗೂ ಮೈಸೂರಿನಲ್ಲಿ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿತ್ತು. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿದ್ದವು.

