ಬೆಂಗಳೂರಿಗರು ಕುಡಿಯುವ ನೀರು ಎಷ್ಟು ಸುರಕ್ಷಿತ; ಜೀವಕ್ಕೆ ಎರವಾಗುವ ಬೋರ್‌ವೆಲ್‌ ನೀರು ?
x

ಬೆಂಗಳೂರಿಗರು ಕುಡಿಯುವ ನೀರು ಎಷ್ಟು ಸುರಕ್ಷಿತ; ಜೀವಕ್ಕೆ ಎರವಾಗುವ ಬೋರ್‌ವೆಲ್‌ ನೀರು ?

ಕರ್ನಾಟಕದ ಗ್ರಾಮೀಣ ಹಾಗೂ ನಗರದ ಕೆಲ ಭಾಗಗಳಲ್ಲಿ ಬೋರ್‌ವೆಲ್‌ ನೀರನ್ನೇ ಹೆಚ್ಚು ಆಶ್ರಯಿಸಲಾಗಿದೆ. 1500 ರಿಂದ 1800 ಅಡಿಗಳ ಆಳದವರೆಗೆ ಕೊಳವೆಬಾವಿ ಕೊರೆಸುತ್ತಿದ್ದು, ನೈಟ್ರೇಟ್, ಫ್ಲೋರೈಡ್ ಮತ್ತು ಭಾರ ಲೋಹಗಳು ಮಿತಿಗಿಂತ ಹೆಚ್ಚಾಗಿವೆ.


ಬೆಂಗಳೂರಿನಲ್ಲಿ ಜಲಮೂಲಗಳ ಕಲುಷಿತ, ಅಂತರ್ಜಲದ ಅತಿಯಾದ ಶೋಷಣೆಯಿಂದಾಗಿ ಕುಡಿಯುವ ನೀರು ದಿನ ಕಳೆದಂತೆ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ.

ನೀರು ಪೂರೈಕೆಯಲ್ಲಿ ಆಗುತ್ತಿರುವ ಲೋಪಗಳು, ಅವೈಜ್ಞಾನಿಕ ಪೈಪ್‌ಲೈನ್‌ ಪರಿಣಾಮ ಕುಡಿಯುವ ನೀರಿನ ಜತೆ ಚರಂಡಿ ನೀರು ಸೇರುತ್ತಿರುವ ಪ್ರಕರಣಗಳಿಂದಾಗಿ ಕುಡಿಯುವ ನೀರಿನ ಸುರಕ್ಷತೆ ಆತಂಕ ಸೃಷ್ಟಿಸಿದೆ.

ಪ್ರಸ್ತುತ, ಬೆಂಗಳೂರಿನ ಹಲವೆಡೆ ಕುಡಿಯುವ ನೀರಿಗಾಗಿ ಕಾವೇರಿ ನದಿ ಹಾಗೂ ಕೊಳವೆಬಾವಿಗಳನ್ನೇ ಹೆಚ್ಚು ಆಶ್ರಯಿಸಲಾಗಿದೆ. ಬಹುತೇಕ ಕೆರೆ-ಕುಂಟೆಗಳು ಕೈಗಾರಿಕಾ ತ್ಯಾಜ್ಯ, ಒಳಚರಂಡಿ ನೀರಿನಿಂದ ಕಲುಷಿತವಾಗಿದ್ದು, ಇದರಿಂದ ಅಂತರ್ಜಲ ಸಂಪೂರ್ಣ ಹಾಳಾಗಿದೆ. ಹೀಗೆ ಕಲುಷಿತವಾದ ಅಂತರ್ಜಲವನ್ನೇ ಕೊಳವೆಬಾವಿ ಮೂಲಕ ಹೊರತೆಗೆದು ಬಳಸುತ್ತಿರುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಬೆಂಗಳೂರಿನ ನೀರು ಸರಬರಾಜು, ವಿತರಣಾ ಜಾಲದ ನಿರ್ವಹಣೆ ಹಾಗೂ ಲಿಂಗರಾಜಪುರಂ ಕಲುಷಿತ ಪ್ರಕರಣವು ತೀವ್ರ ಕಳವಳ ಮೂಡಿಸಿದೆ.

'ದ ಫೆಡರಲ್ ಕರ್ನಾಟಕ' ಜೊತೆ ಮಾತನಾಡಿದ ಬೆಂಗಳೂರು ನಿವಾಸಿ ರೋಜಾ, “ಜಲಮಂಡಳಿಯವರು ಬಿಡುವ ನೀರನ್ನೇ ಮಕ್ಕಳಿಗೆ ಕುಡಿಸುತ್ತಿದ್ದೆವು. ಈಗ ನೀರು ಕಲುಷಿತವಾಗಿರುವುದರಿಂದ ಅನಾರೋಗ್ಯದ ಭೀತಿ ಎದುರಾಗಿದೆ. ಇಂದೋರ್‌ನಲ್ಲಿ ಸಂಭವಿಸಿದ ದುರಂತವೇ ಕಣ್ಣ ಮುಂದೆ ಬರುತ್ತಿದೆ. ನನಗೆ ಹೊಟ್ಟೆ ತೊಳೆಸುವುದು, ಅತಿಸಾರವಾಗುತ್ತಿತ್ತು. ನಾನು ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದೇನೆ., 15 ದಿನಗಳಿಂದ ಈ ಸಮಸ್ಯೆಯಿಂದ ಹೈರಾಣಾಗಿದ್ದೇವೆ.” ಎಂದ ಅವರು ಬಾಟಲಿಯಲ್ಲಿ ಕಪ್ಪು ಬಣ್ಣದ ನೀರನ್ನು ತೋರಿಸಿ ಇಂದು ಜಲಮಂಡಳಿಯ ನಲ್ಲಿಯಲ್ಲಿ ಬರುತ್ತಿರುವ ನೀರು ಎಂದರು.

ಲಿಂಗರಾಜಪುರಂ ನಿವಾಸಿ ಮೋಸೆಸ್ ಎಂಬುವರು ಮಾತನಾಡಿ “35 ವರ್ಷದಿಂದ ಜಲ ಮಂಡಳಿ ಹಳೆಯ ಪೈಪ್ ಬದಲಾಯಿಸಿಲ್ಲ. ಕುಡಿಯುವ ನೀರಿನ ಪೈಪ್‌ನಲ್ಲಿ ಕೊಳಚೆ ನೀರು ಬರುತ್ತಿದೆ. ನನ್ನ ಸೊಸೆ ಗರ್ಭಿಣಿ, ಅವಳಿಗೆ ನಿತ್ಯ ಅತಿಸಾರವಾಗುತ್ತಿತ್ತು. ನನ್ನ ತಾಯಿಗೆ ಹೊಟ್ಟೆನೋವು ಇತ್ತು. ಇನ್ನು ವೃತ್ತಿಯಲ್ಲಿ ವೈದ್ಯೆಯಾಗಿರುವ ನನ್ನ ಮಗಳಿಗೂ ಹೊಟ್ಟೆನೋವು ಕಾಣಿಸಿಕೊಂಡ ನಂತರ ಇದು ನೀರಿನ ಸಮಸ್ಯೆ ಎಂಬುದು ಮನವರಿಕೆಯಾಯಿತು. ಬಡಾವಣೆ ನಿವಾಸಿಗಳ ವಾಟ್ಸ್​ಆ್ಯಪ್​ ಗುಂಪಿನಲ್ಲಿ ನೀರು ಕಲುಷಿತದ ಬಗ್ಗೆ ಪ್ರಸ್ತಾವವಾದ ಮೇಲೆಯೇ ಏನಾಗಿದೆ ಎಂಬುದು ಗೊತ್ತಾಯಿತು.” ಎಂದು ಆತಂಕ ತೋಡಿಕೊಂಡರು.

ಇನ್ನು ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಸಂಸ್ಕರಿಸಿದ ನಂತರವೂ ನೀರಿನಲ್ಲಿ ಅಪಾಯಕಾರಿ ಖನಿಜಾಂಶಗಳು ಪತ್ತೆಯಾಗುತ್ತಿರುವುದು ನಾವು ಕುಡಿಯುತ್ತಿರುವ ನೀರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಜಲಮೂಲಗಳು ಕಲುಷಿತ

ಬೆಂಗಳೂರಿನ ಜಲಮೂಲಗಳಿಗೆ ಕೈಗಾರಿಕಾ ಬಿಡುತ್ತಿರುವ ತ್ಯಾಜ್ಯ ಹಾಗೂ ರಾಜಕಾಲುವೆಗಳ ಮೂಲಕ ಸೇರುತ್ತಿರುವ ತ್ಯಾಜ್ಯದಿಂದಾಗಿ ಕಲುಷಿತವಾಗುತ್ತಿವೆ. ಈ ಹಿಂದೆ ಬೆಂಗಳೂರಿಗೆ ಅರ್ಕಾವತಿ ನದಿ ಪಾತ್ರದ ಜಲಮೂಲಗಳೇ ನೀರಿನ ಆಧಾರವಾಗಿದ್ದವು. ಆದರೆ, ಈಗ ಅರ್ಕಾವತಿ ನದಿ ಪಾತ್ರದ ಕೆರೆಗಳು ಕಲುಷಿತ ಆಗಿರುವುದರಿಂದ ಸದ್ಯ ಬೆಂಗಳೂರಿಗೆ ನೀರು ಪೂರೈಸುತ್ತಿಲ್ಲ. ವಿಪರ್ಯಾಸವೆಂದರೆ, ಕೆರೆಗಳ ನೀರು ಅಂತರ್ಜಲ ಸೇರಿ ಬೋರ್‌ವೆಲ್‌ಗಳ ಮೂಲಕ ಕುಡಿಯಲು ಬಳಕೆಯಾಗುತ್ತಿದೆ.

ಕಾವೇರಿ ನದಿಯಿಂದ ಪೈಪ್‌ಲೈನ್‌ ಮೂಲಕ ತರುವ ನೀರನ್ನು ಬೆಂಗಳೂರು ಹಾಗೂ ಹೊರವಲಯದ ಹಲವೆಡೆ ಸಂಗ್ರಹಿಸಿ, ಸಂಸ್ಕರಿಸಿದ ಬಳಿಕ ಸರಬರಾಜು ಮಾಡಲಾಗುತ್ತಿದೆ. ಸುಮಾರು 100 ಕಿ.ಮೀ ದೂರದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿತ್ಯ 1450 ಎಂಎಲ್‌ಡಿ ನೀರನ್ನು ಬೆಂಗಳೂರಿಗೆ ಪೂರೈಸುತ್ತಿದೆ.

ಬೆಂಗಳೂರಿಗೆ ನೀರು ಸರಬರಾಜು ಮಾಡಲು ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ), ಕನಕಪುರ ತಾಲೂಕಿನ ಹಾರೋಹಳ್ಳಿ, ತಾತಗುಣಿ ಸಮೀಪ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ, ಅಲ್ಲಿಂದ ವಿತರಣಾ ಜಾಲಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಈ ವಿತರಣಾ ಜಾಲವು ಅತ್ಯಂತ ಹಳೆಯದಾಗಿದ್ದು, ಹಲವೆಡೆ ಚರಂಡಿಗಳಲ್ಲಿ ಹಾದು ಹೋಗಿದೆ. ಹಲವು ಸಂದರ್ಭಗಳಲ್ಲಿ ನೀರಿನ ಪೈಪ್‌ಲೈನ್‌ ಒಡೆದು ಅಥವಾ ಹಾಳಾಗಿ ಚರಂಡಿ ನೀರು ಕುಡಿಯುವ ನೀರಿಗೆ ಸೇರುತ್ತಿದೆ.

ಬೆಂಗಳೂರಿನ ಗೃಹಿಣಿ ಅನ್ನಪೂರ್ಣ ಮಾತನಾಡಿ, ಮನೆಯ ಸಂಪ್‌ಗೆ ಬರುವ ನೀರು ಸ್ವಲ್ಪ ವಾಸನೆ ಇದ್ದ ಕಾರಣ ಕೊಳಾಯಿ ಪರಿಶೀಲಿಸಿದೆ. ಕಪ್ಪು ನೀರು ಬರುತ್ತಿತ್ತು. ಕೂಡಲೇ ಕೊಳಾಯಿ ಬಂದ್ ಮಾಡಿದ್ದು, ಅಂಗಡಿಯಿಂದ ಕ್ಯಾನ್​ ನೀರು ತರಿಸಿಕೊಳ್ಳುತ್ತಿದ್ದೇವೆ. ಕುಡಿಯುವ ನೀರಿನ ಪೈಪ್ ಹಾಕಿ 30 ವರ್ಷಗಳಾಗಿದೆ. ಅದರಲ್ಲಿ ಕಸ ತುಂಬಿಕೊಂಡಿದೆ. ಹೊಸ ಪೈಪ್‌ಗಳನ್ನು ಹಾಕಬೇಕು. ಇಂತಹ ನೀರನ್ನು ಬಳಸುವುದು ಹೇಗೆ? ಎಂದು ಪ್ರಶ್ನಿಸಿದರು.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಸಂಭವಿಸಿದ ದುರಂತ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪೂರೈಕೆಯಾಗುತ್ತಿರುವ ನೀರಿನ ಸುರಕ್ಷತೆ ಬಗ್ಗೆ ಕಳವಳ ಸೃಷ್ಟಿಸಿದೆ.

ಅಂತರ್ಜಲದಲ್ಲಿ ನೈಟ್ರೇಟ್, ಫ್ಲೋರೈಡ್ ಹೆಚ್ಚು

ಕೇಂದ್ರ ಭೂಜಲ ಮಂಡಳಿ 2025 ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿರುವ ಕರ್ನಾಟಕದ ವಾರ್ಷಿಕ ಅಂತರ್ಜಲ ಗುಣಮಟ್ಟ ವರದಿ ಪ್ರಕಾರ, ಅಂತರ್ಜಲದಲ್ಲಿ ನೈಟ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಬಹಿರಂಗಪಡಿಸಿದೆ. ಕಳೆದ ವರ್ಷ ಪರೀಕ್ಷೆಗೆ ಒಳಪಡಿಸಿದ ಶೇ 40-48 ರಷ್ಟು ನೀರಿನ ಮಾದರಿಗಳಲ್ಲಿ ನೈಟ್ರೇಟ್ ಮಟ್ಟ ನಿಗದಿತ ಮಿತಿಗಿಂತ (45 ಎಂ.ಜಿ/ ಲೀಟರ್) ಹೆಚ್ಚಾಗಿದೆ. ರಾಜಸ್ಥಾನದ ನಂತರ ಕರ್ನಾಟಕದಲ್ಲೇ ಅಂತರ್ಜಲ ಕಲುಷಿತ ಹೆಚ್ಚಿದೆ.

ಅಂತರ್ಜಲದಲ್ಲಿ ಫ್ಲೋರೈಡ್ ಮಾಲಿನ್ಯವೂ ಗಂಭೀರ ಪ್ರಮಾಣದಲ್ಲಿದೆ. ಶೇ 15 ರಷ್ಟು ಮಾದರಿಗಳಲ್ಲಿ ಸಾಮಾನ್ಯ ಮಿತಿ(1.5 ಎಂ.ಜಿ./ ಲೀಟರ್) ಗಿಂತ ಹೆಚ್ಚು ಫ್ಲೊರೈಡ್ ಅಂಶವಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಿದೆ.

ಯುರೇನಿಯಂ ಮತ್ತು ಇತರ ಭಾರ ಲೋಹಗಳು ಸಹ ಕೆಲ ಪ್ರದೇಶಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಾಗಿವೆ. ಬೆಂಗಳೂರು ಮತ್ತು ಇತರ ನಗರ ಪ್ರದೇಶಗಳಲ್ಲಿ ಬೋರ್‌ವೆಲ್‌ ನೀರಿನಲ್ಲಿ ನೈಟ್ರೇಟ್, ಫ್ಲೋರೈಡ್, ಯುರೇನಿಯಂ ಹೆಚ್ಚಾಗಿದ್ದು, ಇದು ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆ, ಥೈರಾಯ್ಡ್, ಮಕ್ಕಳಲ್ಲಿ ಬ್ಲೂ ಬೇಬಿ ಸಿಂಡ್ರೋಮ್ ಅಪಾಯಕ್ಕೆ ಕಾರಣವಾಗಲಿದೆ.

ಕಲುಷಿತ ನೀರು ಸೇವನೆ ಎಷ್ಟು ಯೋಗ್ಯ?

ಕರ್ನಾಟಕದ ಗ್ರಾಮೀಣ ಹಾಗೂ ನಗರದ ಕೆಲ ಭಾಗಗಳಲ್ಲಿ ಬೋರ್‌ವೆಲ್‌ ನೀರನ್ನೇ ಹೆಚ್ಚು ಆಶ್ರಯಿಸಲಾಗಿದೆ. 1500 ರಿಂದ 1800 ಅಡಿಗಳ ಆಳದವರೆಗೆ ಕೊಳವೆಬಾವಿ ಕೊರೆಸುತ್ತಿದ್ದು, ನೈಟ್ರೇಟ್, ಫ್ಲೋರೈಡ್ ಮತ್ತು ಭಾರ ಲೋಹಗಳು ಮಿತಿಗಿಂತ ಹೆಚ್ಚಾಗಿವೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಗಿಂದಾಗ್ಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಜಲಮೂಲಗಳ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುತ್ತಿರುತ್ತದೆ. ಕೆಲ ಪರೀಕ್ಷೆಗಳಲ್ಲಿ ಹಲವು ಜಲಮೂಲಗಳು ಕಲುಷಿತ ಎಂಬುದು ಪತ್ತೆಯಾಗಿವೆ. ಕೆರೆಗಳು ಕಲುಷಿತಗೊಂಡಿರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಕೊಳೆವೆಬಾವಿಗಳ ನೀರನ್ನು ಶುದ್ದೀಕರಿಸಿದರೂ ಕುಡಿಯಲು ಯೋಗ್ಯವಾಗಿಲ್ಲ ಎಂಬುದು ನೀರಿನ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಅತ್ಯಂತ ಸಮಸ್ಯಾತ್ಮಕ ಬೋರ್‌ವೆಲ್‌ಗಳ ನೀರಿನಲ್ಲಿ ನೈಟ್ರೇಟ್, ಫ್ಲೋರೈಡ್, ಕಬ್ಬಿಣ, ಸತು ಹಾಗೂ ಹೆಚ್ಚಿನ ಟಿಡಿಎಸ್ ಇದೆ. ಕೇಂದ್ರ ಅಂತರ್ಜಲ ಮಂಡಳಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗಳ ವರದಿಯಂತೆ ಬೆಂಗಳೂರಿನಲ್ಲಿ ಅಂತರ್ಜಲದ ಅತಿಯಾದ ಶೋಷಣೆಯಿಂದಾಗಿ ರಾಸಾಯನಿಕಗಳ ಕಲುಷಿತ ಹೆಚ್ಚಾಗಿದೆ. ಹಲವು ಪ್ರದೇಶಗಳಲ್ಲಿ ಟಿಡಿಎಸ್ ಪ್ರಮಾಣ 500 ಪಿಪಿಎಂಗಿಂತ ಹೆಚ್ಚಿರುವುದು ಬೆಳಕಿಗೆ ಬಂದಿದೆ. ಇಂತಹ ಕಡೆಗಳಲ್ಲಿ ಕೊಳವೆಬಾವಿ ಹಾಗೂ ಟ್ಯಾಂಕರ್ ನೀರನ್ನು ನೇರವಾಗಿ ಕುಡಿಯುವುದು ಆರೋಗ್ಯವನ್ನು ಅಪಾಯಕ್ಕೆ ದೂಡಲಿದೆ.

ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟ್ಯಾಂಕರ್ ಮಾಫಿಯಾ

ಐಟಿ ಹಬ್ಗಳಾದ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್ಫೀಲ್ಡ್ನಲ್ಲಿ ಅಂತರ್ಜಲವು ಅಪಾಯಕ್ಕೆ ಒಳಗಾಗಿದೆ. ಕಾರ್ಖಾನೆಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಟ್ಯಾಂಕರ್ ನೀರಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಟ್ಯಾಂಕರ್ಗಳ ನೀರು ಪೂರೈಕೆ ಜಾಲ ಮಾಫಿಯಾವಾಗಿ ಬದಲಾಗಿದೆ.

ರಾಜ್ಯ ಸರ್ಕಾರ ʼಸಂಚಾರಿ ಕಾವೇರಿʼ ಅಪ್ ಮೂಲಕ ಕಾವೇರಿ ನೀರನ್ನು ರಿಯಾಯಿತಿ ದರದಲ್ಲಿ ಪೂರೈಸುತ್ತಿದೆ. ಆದಾಗ್ಯೂ, ಖಾಸಗಿ ಟ್ಯಾಂಕರ್ ಮಾಫಿಯಾ ಮಾತ್ರ ಸಕ್ರಿಯವಾಗಿದೆ. ಅನಧಿಕೃತವಾಗಿ ಬೋರ್ವೆಲ್ ತೆಗೆದು, ದುಬಾರಿ ದರಕ್ಕೆ ನೀರು ಮಾರಾಟ ಮಾಡಲಾಗುತ್ತಿದೆ ಎಂಬುದು ವೈಟ್‌ಫೀಲ್ಡ್‌ ನಿವಾಸಿಗಳ ಆರೋಪವಾಗಿದೆ.

ಖಾಸಗಿ ಟ್ಯಾಂಕರ್‌ಗಳು 12 ಸಾವಿರ ಲೀಟರ್ ಸಂಗ್ರಹದ ಪ್ರತಿ ಟ್ಯಾಂಕರ್ ನೀರಿಗೆ 1,200 ರಿಂದ 3,000 ಪಡೆಯುತ್ತಿವೆ. ವೈಟ್ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಎಚ್ಎಸ್ಆರ್ ಲೇಔಟ್ ಹಾಗೂ ಕೋರಮಂಗಲದ ಸೇರಿದಂತೆ ಬಹುತೇಕ ಕಡೆಗಳಲ್ಲಿ ಟ್ಯಾಂಕರ್ ನೀರಿನ ಅವಲಂಬನೆ ಹೆಚ್ಚಾಗಿದೆ.

2025ರಲ್ಲಿ ರಾಜ್ಯ ಸರ್ಕಾರ ನೀರಿನ ಟ್ಯಾಂಕರ್ ನೋಂದಣಿಯನ್ನು ಕಡ್ಡಾಯ ಮಾಡಿದ್ದು, ದರ ನಿಯಂತ್ರಣವನ್ನೂ ಹೇರಿದೆ. ಆದರೆ, ಇಂದಿಗೂ ಪೂರ್ಣ ಪ್ರಮಾಣದಲ್ಲಿ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಿಲ್ಲ. 2025 ರಲ್ಲಿ ಈವರೆಗೆ 24 ಸಾವಿರಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಇದರಿಂದಲೇ ಜಲಮಂಡಳಿಗೆ 2.5 ಕೋಟಿ ಆದಾಯ ಬಂದಿದೆ ಎಂದು ಮೂಲಗಳು ತಿಳಿಸಿವೆ.

Read More
Next Story