
ಲಿವ್-ಇನ್ ಸಂಗಾತಿಗೆ ವಂಚಿಸಿ ಆಕೆಯ ತಂಗಿ ಮೇಲೆ ಅತ್ಯಾಚಾರ; ಹರಿಯಾಣ ಮೂಲದ ಯುವಕ ಅರೆಸ್ಟ್
ಆರೋಪಿಯು ಮೊದಲು ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ, ನಂತರ ಆಕೆಯ ಕುಟುಂಬಕ್ಕೆ ಪರಿಚಯವಾಗಿದ್ದ. ಇದೇ ಸಲುಗೆಯನ್ನು ಬಳಸಿಕೊಂಡು ಬಾಲಕಿಯ ಅಕ್ಕನನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದ.
ಪ್ರೀತಿಯ ನಾಟಕವಾಡಿ ಲಿವ್-ಇನ್ ಸಂಗಾತಿಗೆ ಲಕ್ಷಾಂತರ ರೂಪಾಯಿ ವಂಚಿಸಿ, ಆಕೆಯ ಅಪ್ರಾಪ್ತ ವಯಸ್ಸಿನ ಸಹೋದರಿಯ ಮೇಲೂ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಶುಭಾಂಶು ಶುಕ್ಲಾ (27) ಬಂಧಿತ ಆರೋಪಿಯಾಗಿದ್ದು, ಈತ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ದಾಸರಹಳ್ಳಿಯಲ್ಲಿ ನೆಲೆಸಿದ್ದ.
ಆರೋಪಿಯು ಮೊದಲು ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ, ನಂತರ ಆಕೆಯ ಕುಟುಂಬಕ್ಕೆ ಪರಿಚಯವಾಗಿದ್ದ. ಇದೇ ಸಲುಗೆಯನ್ನು ಬಳಸಿಕೊಂಡು ಬಾಲಕಿಯ ಅಕ್ಕನನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ, ಆಕೆಯೊಂದಿಗೆ ಫ್ಲ್ಯಾಟ್ ಒಂದರಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಂಚನೆ ಮತ್ತು ಲೈಂಗಿಕ ದೌರ್ಜನ್ಯ
ಶುಭಾಂಶುಗೆ ಮೊದಲೇ ಮದುವೆಯಾಗಿದ್ದ ವಿಷಯ ತಿಳಿದು ಸಂತ್ರಸ್ತೆ ಪ್ರಶ್ನಿಸಿದಾಗ, ಆತ ವಿಚ್ಛೇದನ ಪಡೆಯುವುದಾಗಿ ನಂಬಿಸಿ ಸಂಬಂಧ ಮುಂದುವರಿಸಿದ್ದ. ಇದೇ ವೇಳೆ ಸಂತ್ರಸ್ತೆಯಿಂದ ಹಂತಹಂತವಾಗಿ ಒಟ್ಟು 37 ಲಕ್ಷ ರೂಪಾಯಿ ಹಣ ಮತ್ತು 559 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದ. ಆರೋಪಿಯ ಅಸಲಿ ಬಣ್ಣ ಬಯಲಾದಾಗ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದ ಎನ್ನಲಾಗಿದೆ.
ಇನ್ನೊಂದೆಡೆ, ಈ ಹಿಂದೆಯೇ ಅಪ್ರಾಪ್ತ ಬಾಲಕಿಯನ್ನು (ಸಂತ್ರಸ್ತೆಯ ತಂಗಿ) ಬೆದರಿಸಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ ಸಂಗತಿಯೂ ಬೆಳಕಿಗೆ ಬಂದಿದೆ. "ಗ್ರೂಪ್ ಸ್ಟಡಿ"ಗೆ ತೆರಳುತ್ತಿದ್ದಾಗ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಈತ, ಮನೆಯವರನ್ನು ಪರಿಚಯಿಸುವಂತೆ ಒತ್ತಾಯಿಸಿ ಈ ಕೃತ್ಯ ಎಸಗಿದ್ದ ಎಂದು ಬಾಲಕಿ ಆರೋಪಿಸಿದ್ದಾಳೆ.
ಆರೋಪಿಯ ಕಿರುಕುಳ ತಾಳಲಾರದೆ ಸಂತ್ರಸ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶುಭಾಂಶುನನ್ನು ಬಂಧಿಸಿದ್ದಾರೆ. ಆರೋಪಿಯು ಐಷಾರಾಮಿ ಜೀವನಕ್ಕಾಗಿ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

