ಬೆಂಗಳೂರಿನಲ್ಲಿ ಅಕ್ರಮ ಟ್ರೇಡ್ ಲೈಸೆನ್ಸ್ ದಂಧೆ: 38 ಟ್ರೇಡ್ ವಾರೆಂಟ್‌ ಜಾರಿ
x

ಬೆಂಗಳೂರಿನಲ್ಲಿ ಅಕ್ರಮ ಟ್ರೇಡ್ ಲೈಸೆನ್ಸ್ ದಂಧೆ: 38 ಟ್ರೇಡ್ ವಾರೆಂಟ್‌ ಜಾರಿ

ಈ ಅಂಗಡಿಗಳು ಕೂಡ ಹಲವು ಬಾರಿ ನೋಟಿಸ್ ನೀಡಿದರೂ ಲೈಸೆನ್ಸ್ ಪಡೆಯದೆ ವ್ಯಾಪಾರ ಮುಂದುವರಿಸಿದ್ದವು. ಇಲ್ಲಿ ಎಲೆಕ್ಟ್ರಾನಿಕ್, ಪೀಠೋಪಕರಣ, ಮತ್ತು ಗಾರ್ಮೆಂಟ್ಸ್ ಅಂಗಡಿಗಳು ಪ್ರಮುಖವಾಗಿದ್ದವು.


Click the Play button to hear this message in audio format

ನಗರದಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ, ಲೈಸೆನ್ಸ್ ಇಲ್ಲದೆ ವ್ಯಾಪಾರ ನಡೆಸುತ್ತಿದ್ದ ಒಟ್ಟು 38 ಅಂಗಡಿಗಳಿಗೆ ಟ್ರೇಡ್ ವಾರೆಂಟ್ ಜಾರಿಗೊಳಿಸಿ, ಸುಮಾರು 59 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಹದೇವಪುರ ವಲಯದ ಕಾರ್ಯಾಚರಣೆ

ನವೆಂಬರ್ 18ರಂದು ಮಹದೇವಪುರ ವಲಯದಲ್ಲಿ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ, 20 ಅಂಗಡಿಗಳ ಮೇಲೆ ದಾಳಿ ನಡೆಸಿ ಟ್ರೇಡ್ ವಾರೆಂಟ್ ಜಾರಿಗೊಳಿಸಲಾಗಿದೆ. ಈ ಅಂಗಡಿಗಳು ಸುಮಾರು 37.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಹೊಂದಿದ್ದವು. ಈ ಹಿಂದೆ ಅಕ್ಟೋಬರ್ 17,ರಂದು ನೀಡಲಾಗಿದ್ದ ನೋಟಿಸ್‌ಗೆ ಅಂಗಡಿ ಮಾಲೀಕರು ಸ್ಪಂದಿಸದ ಕಾರಣ, ಬಿಬಿಎಂಪಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ದಾಳಿಗೊಳಗಾದ ಅಂಗಡಿಗಳಲ್ಲಿ ಹಾರ್ಡ್‌ವೇರ್, ಹೋಟೆಲ್, ದಿನಸಿ, ಮತ್ತು ಸ್ಕ್ರ್ಯಾಪ್ ಡೀಲರ್‌ಗಳ ಮಳಿಗೆಗಳು ಸೇರಿವೆ. ಜಪ್ತಿ ಮಾಡಿದ ವಸ್ತುಗಳನ್ನು ಹರಾಜು ಹಾಕುವ ಮೂಲಕ ಬಾಕಿ ಇರುವ ಶುಲ್ಕವನ್ನು ವಸೂಲಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದಂತೆ, ಜಂಟಿ ಆಯುಕ್ತರಾದ ಡಾ. ಪೂರ್ಣಿಮಾ ಮತ್ತು ಇತರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು.

ಬೊಮ್ಮನಹಳ್ಳಿ ವಲಯದ ಕಾರ್ಯಾಚರಣೆ

ಇದೇ ರೀತಿ, ಬೊಮ್ಮನಹಳ್ಳಿ ವಲಯದಲ್ಲಿ ಎರಡು ಹಂತಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 18 ಅಂಗಡಿಗಳಿಗೆ ಟ್ರೇಡ್ ವಾರೆಂಟ್ ಜಾರಿ ಮಾಡಲಾಗಿದೆ. ಮೊದಲ ಹಂತದಲ್ಲಿ 8 ಅಂಗಡಿಗಳಿಂದ 6.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಮತ್ತು ಎರಡನೇ ಹಂತದಲ್ಲಿ 10 ಅಂಗಡಿಗಳಿಂದ ₹8.50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಅಂಗಡಿಗಳು ಕೂಡ ಹಲವು ಬಾರಿ ನೋಟಿಸ್ ನೀಡಿದರೂ ಲೈಸೆನ್ಸ್ ಪಡೆಯದೆ ವ್ಯಾಪಾರ ಮುಂದುವರಿಸಿದ್ದವು. ಇಲ್ಲಿ ಎಲೆಕ್ಟ್ರಾನಿಕ್, ಪೀಠೋಪಕರಣ, ಮತ್ತು ಗಾರ್ಮೆಂಟ್ಸ್ ಅಂಗಡಿಗಳು ಪ್ರಮುಖವಾಗಿದ್ದವು. ಈ ಕಾರ್ಯಾCಚರಣೆಯು ಜಂಟಿ ಆಯುಕ್ತರಾದ ಶ್ರೀನಿವಾಸ್ ಜೆ. ಮತ್ತು ಇತರ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯಿತು.

Read More
Next Story