
ನಗರದಲ್ಲಿ ಸ್ಥಾಪಿಸಲಾಗಿರುವ ಸೇಪ್ಟಿ ಐಲ್ಯಾಂಡ್
ಬೆಂಗಳೂರಿನ ಮಹಿಳೆಯರೇ... ಕಷ್ಟ ಎದುರಾದಾಗ ಈ ಬಟನ್ ಒತ್ತಿ; ಕ್ಷಣದಲ್ಲೇ ಪೊಲೀಸರು ಹಾಜರ್!
ಮೊಬೈಲ್ ಫೋನ್ ಅಗತ್ಯವಿಲ್ಲದೆ ಶೀಘ್ರ ಸಹಾಯವನ್ನು ಒದಗಿಸುತ್ತವೆ. ಬೂತ್‌ಗಳಲ್ಲಿರುವ SOS ಬಟನ್ ಒತ್ತುವ ಮೂಲಕ, ಬಳಕೆದಾರರು ನೇರವಾಗಿ ಪೊಲೀಸ್ ಕಮಾಂಡ್ ಸೆಂಟರ್ ಸಂಪರ್ಕ ಹೊಂದಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಹಿಳೆಯರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು 'ಸೇಫ್ ಸಿಟಿ' (Safe City) ಯೋಜನೆಯಡಿ 'ಸೇಫ್ಟಿ ಐಲ್ಯಾಂಡ್' (Safety Islands) ಎಂಬ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಆಪತ್ತಿನಲ್ಲಿರುವ ಮಹಿಳೆಯರಿಗೆ ತುರ್ತು ನೆರವು ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಈ ನೀಲಿ ಬಣ್ಣದ ಟೆಲಿಫೋನ್ ಬೂತ್ ಮಾದರಿಯ ಘಟಕಗಳು ಈಗ ನಗರದ ಮಹಿಳೆಯರ ಪಾಲಿನ ಅಭಯದಾತೆ! .
ಈ ವ್ಯವಸ್ಥೆಯ ವಿಶೇಷವೆಂದರೆ, ಮೊಬೈಲ್ ಫೋನ್ ಇಲ್ಲದಿದ್ದರೂ ಕೇವಲ ಒಂದೇ ಒಂದು 'ಎಸ್‌ಒಎಸ್' (SOS) ಬಟನ್ ಒತ್ತುವ ಮೂಲಕ ಸಂತ್ರಸ್ತರು ನೇರವಾಗಿ ಪೊಲೀಸ್ ಕಮಾಂಡ್ ಸೆಂಟರ್ ಅನ್ನು ಸಂಪರ್ಕಿಸಬಹುದು. ಇದು ಪೊಲೀಸರ ತ್ವರಿತ ಪ್ರತಿಕ್ರಿಯೆ ಮತ್ತು ಹಸ್ತಕ್ಷೇಪವನ್ನು ಖಚಿತಪಡಿಸುತ್ತದೆ.
50 ಪ್ರಮುಖ ಸ್ಥಳಗಳಲ್ಲಿ ಅಳವಡಿಕೆ
ನಗರದಾದ್ಯಂತ 50 ಆಯಕಟ್ಟಿನ ಸ್ಥಳಗಳಲ್ಲಿ ಈ ಸೇಫ್ಟಿ ಐಲ್ಯಾಂಡ್‌ಗಳನ್ನು ಸ್ಥಾಪಿಸಲಾಗಿದ್ದು, ಇವುಗಳನ್ನು ಗೂಗಲ್ ಮ್ಯಾಪ್‌ನಲ್ಲಿಯೂ ಗುರುತಿಸಲಾಗಿದೆ. ಇವು ಕೇವಲ ಸಾಮಾನ್ಯ ಬೂತ್‌ಗಳಲ್ಲ; ಬದಲಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿವೆ. 360 ಡಿಗ್ರಿ ಕವರೇಜ್ ನೀಡುವ ಪಿಟಿಝಡ್ (PTZ) ಕ್ಯಾಮೆರಾ ಮತ್ತು ಒಂದು ಸ್ಟಿಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಪೊಲೀಸರೊಂದಿಗೆ ನೇರವಾಗಿ ಮಾತನಾಡಲು ಟೂ-ವೇ ಕಮ್ಯುನಿಕೇಶನ್ ಸಿಸ್ಟಮ್ ಇದೆ. ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆ ನೀಡಲು ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.
ಯಶಸ್ವಿ ಕಾರ್ಯಾಚರಣೆ ಮತ್ತು ಫಲಿತಾಂಶ
2024ರ ಜೂನ್ 30ರಂದು ಚಾಲನೆ ನೀಡಲಾದ ಈ ಯೋಜನೆಯು ಉತ್ತಮ ಫಲಿತಾಂಶ ನೀಡುತ್ತಿದೆ. ಕಮಾಂಡ್ ಸೆಂಟರ್ ಈವರೆಗೆ 188 ಎಸ್‌ಒಎಸ್ ಕರೆಗಳಿಗೆ ಸ್ಪಂದಿಸಿದ್ದು, ಇದರಲ್ಲಿ 62 ಪ್ರಕರಣಗಳು ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿವೆ. ಬನಶಂಕರಿಯಲ್ಲಿ ವಿದ್ಯಾರ್ಥಿನಿಯೊಬ್ಬರು ಬಿಎಂಟಿಸಿ ಬಸ್‌ನಲ್ಲಿ ಮೊಬೈಲ್ ಕಳೆದುಕೊಂಡಾಗ, ತಕ್ಷಣವೇ ಅಲ್ಲಿನ ಸೇಫ್ಟಿ ಐಲ್ಯಾಂಡ್ ಬಳಸಿ ದೂರು ನೀಡಿದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಬಸ್ ನಿರ್ವಾಹಕನನ್ನು ಪತ್ತೆಹಚ್ಚಿ ಫೋನ್ ಮರಳಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಖಾಸಗಿ ಫೋಟೋಗಳನ್ನು ಬಳಸಿ ಯುವತಿಯೊಬ್ಬರಿಗೆ ಬೆದರಿಕೆ ಹಾಕುತ್ತಿದ್ದ ಪ್ರಕರಣದಲ್ಲಿ, ನೊಂದ ಮಹಿಳೆ ಎಸ್‌ಒಎಸ್ ಬಟನ್ ಒತ್ತಿದ ತಕ್ಷಣ ಪೊಲೀಸರು ಸ್ಪಂದಿಸಿ, ಆರೋಪಿಯನ್ನು ಠಾಣೆಗೆ ಕರೆಸಿ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು ಸೇಫ್ ಸಿಟಿ ಯೋಜನೆಯು ಕೇವಲ ಮೂಲಸೌಕರ್ಯ ಅಭಿವೃದ್ಧಿಯಲ್ಲ, ಬದಲಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನವಾಗಿದೆ. ನಗರದ ಪ್ರತಿಯೊಬ್ಬ ಮಹಿಳೆಗೂ ಈಗ ನೆರವು ಕೇವಲ ಒಂದು ಬಟನ್ ಒತ್ತಿದಷ್ಟು ಹತ್ತಿರದಲ್ಲಿದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

