ಬೆಂಗಳೂರಿನಲ್ಲಿ ಮಳೆ ನಂತರ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಆತಂಕ: ಡೆಂಗಿ, ಮಲೇರಿಯಾ, ವೈರಲ್ ಜ್ವರ, ಕೋವಿಡ್ ಪ್ರಕರಣಗಳಲ್ಲಿ ಏರಿಕೆ
x

ಬೆಂಗಳೂರಿನಲ್ಲಿ ಮಳೆ ನಂತರ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಆತಂಕ: ಡೆಂಗಿ, ಮಲೇರಿಯಾ, ವೈರಲ್ ಜ್ವರ, ಕೋವಿಡ್ ಪ್ರಕರಣಗಳಲ್ಲಿ ಏರಿಕೆ

ಮಳೆಯಿಂದಾಗಿ ನಗರದಾದ್ಯಂತ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಡೆಂಗಿ, ಮಲೇರಿಯಾ ಮತ್ತು ಚಿಕುನ್‌ಗುನ್ಯಾ ಪ್ರಕರಣಗಳು ಹೆಚ್ಚಾಗಿವೆ.


ಬೆಂಗಳೂರು: ಕಳೆದ ಒಂದು ವಾರದಿಂದ ಬೆಂಗಳೂರು ನಗರದಲ್ಲಿ ಸುರಿದ ಅಕಾಲಿಕ ಮಳೆಯು ಡೆಂಗಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಕಾರಣವಾಗಿದೆ. ನಗರದಲ್ಲಿ 500ಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ಸಕ್ರಿಯವಾಗಿವೆ. ಇದರ ಜೊತೆಗೆ, ಸಾಮಾನ್ಯ ಜ್ವರ, ವೈರಲ್ ಸೋಂಕುಗಳು ಮತ್ತು ಕೋವಿಡ್-19 ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ಆತಂಕ ಸೃಷ್ಟಿಸಿದೆ.

ಮಳೆಯಿಂದಾಗಿ ನಗರದಾದ್ಯಂತ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಡೆಂಗಿ, ಮಲೇರಿಯಾ ಮತ್ತು ಚಿಕುನ್‌ಗುನ್ಯಾ ಪ್ರಕರಣಗಳು ಹೆಚ್ಚಾಗಿವೆ. ಇದಲ್ಲದೆ, ಬದಲಾದ ಹವಾಮಾನ ಮತ್ತು ದಿನವಿಡೀ ಶೀತ ವಾತಾವರಣವು ಸಾಮಾನ್ಯ ಜ್ವರ, ನೆಗಡಿ. ಸುಸ್ತು ಮತ್ತು ತಲೆನೋವು ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಕಲುಷಿತ ನೀರು ಸೇವನೆಯಿಂದ ಗ್ಯಾಸ್ಟ್ರೋ ಎಂಟರೈಟಿಸ್ (ಉದರ ಬಾಧೆ ) ಪ್ರಕರಣಗಳೂ ಹೆಚ್ಚಾಗಿ ವರದಿಯಾಗಿವೆ.

ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ

ನಗರದ ಪ್ರಮುಖ ಆಸ್ಪತ್ರೆಗಳಾದ ಕೆ.ಸಿ. ಜನರಲ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ ಈ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಕೊಳೆಗೇರಿಗಳು, ಇಕ್ಕಟ್ಟಾದ ಮತ್ತು ಸಂಕೀರ್ಣ ವಸತಿ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಮಕ್ಕಳು ಮತ್ತು ವೃದ್ಧರಲ್ಲಿ ಜ್ವರದ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈಡೀಸ್ ಈಜಿಪ್ಟಿ ಸೊಳ್ಳೆಯಿಂದ ಹರಡುವ ಡೆಂಗಿ ಕಾಯಿಲೆಗೆ ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಲಾರ್ವಾ ಉತ್ಪತ್ತಿಯನ್ನು ತಡೆಯಲು ಹೆಚ್ಚಿನ ಜಾಗೃತಿ ವಹಿಸುವಂತೆ ಸಲಹೆ ನೀಡಲಾಗಿದೆ.

ಮಕ್ಕಳು ಮತ್ತು ವೃದ್ಧರಿಗೆ ವಿಶೇಷ ಕಾಳಜಿ ಅಗತ್ಯ

ಗ್ಯಾಸ್ಟ್ರೋ ಎಂಟರೈಟಿಸ್ (ಉದರ ಬಾಧೆ) ಪ್ರಕರಣಗಳೂ ನಗರದಲ್ಲಿ ಹೆಚ್ಚಾಗುತ್ತಿವೆ. ಸೋಂಕುಪೀಡಿತ ವ್ಯಕ್ತಿಯ ಸಂಪರ್ಕ ಅಥವಾ ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಹರಡುವ ಈ ಜ್ವರವು ಅತಿಸಾರ, ವಾಂತಿ, ರಕ್ತದೊತ್ತಡದಲ್ಲಿ ಇಳಿಕೆ ಮತ್ತು ಮೂತ್ರಪಿಂಡ ಸಮಸ್ಯೆಗಳಿಗೆ ಕಾರಣವಾಗಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಮತ್ತು ವೃದ್ಧರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಇಂತಹ ಯಾವುದೇ ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ರಾಜ್ಯದಲ್ಲಿ ರೋಗ ಪ್ರಕರಣಗಳ ಸಂಖ್ಯೆ

ಬೆಂಗಳೂರಿನಲ್ಲಿ ಕಳೆದ ವಾರ 110 ಡೆಂಗಿ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ 500ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ರಾಜ್ಯದ ಉಳಿದ ಜಿಲ್ಲೆಗಳನ್ನು ಸೇರಿ ಒಟ್ಟು 1403 ಡೆಂಗಿ ಪ್ರಕರಣಗಳು ವರದಿಯಾಗಿವೆ ಎಂದು ಡಾ. ಅನ್ಸಾರ್ ಅಹ್ಮದ್ ಮಾಹಿತಿ ನೀಡಿದ್ದಾರೆ. ಇದರೊಂದಿಗೆ, ಕಳೆದ ವಾರ ದಾಖಲಾದ 22 ಪ್ರಕರಣಗಳು ಸೇರಿ ಒಟ್ಟು 343 ಚಿಕುನ್‌ಗುನ್ಯಾ ಮತ್ತು 65 ಮಲೇರಿಯಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಈ ಪೈಕಿ ಬೆಂಗಳೂರಿನಲ್ಲಿಯೇ ಹೆಚ್ಚಿನ ಸಂಖ್ಯೆಯ ರೋಗಿಗಳಿದ್ದಾರೆ.

ಕೋವಿಡ್-19 ಆತಂಕ

ಈ ಎಲ್ಲಾ ಸಾಂಕ್ರಾಮಿಕ ರೋಗಗಳ ಆತಂಕದ ಜೊತೆಗೆ, ಕೋವಿಡ್-19 ಆತಂಕವೂ ಮುಂದುವರಿದಿದೆ. ಬೆಂಗಳೂರಿನಲ್ಲಿ ಸದ್ಯ 16 ಸಕ್ರಿಯ ಕೋವಿಡ್ ಪ್ರಕರಣಗಳಿದ್ದರೆ, ರಾಜ್ಯದಲ್ಲಿ ಒಟ್ಟು 33 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

Read More
Next Story