Chikkamagalur | ಚಿನ್ನದ ನಿಕ್ಷೇಪ ಅನ್ವೇಷಣೆಗೆ ಅನುಮತಿ; ಅರಣ್ಯದಲ್ಲಿ ಶೋಧ ಕಾರ್ಯಾಚರಣೆಗೆ ಆಕ್ಷೇಪ
x
ಚಿಕ್ಕಮಗಳೂರು 

Chikkamagalur | ಚಿನ್ನದ ನಿಕ್ಷೇಪ ಅನ್ವೇಷಣೆಗೆ ಅನುಮತಿ; ಅರಣ್ಯದಲ್ಲಿ ಶೋಧ ಕಾರ್ಯಾಚರಣೆಗೆ ಆಕ್ಷೇಪ

ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗಾಗಲೇ ಪರಿಶೋಧನೆಗಾಗಿ ಕಂಪನಿಗೆ ಸಂಯೋಜಿತ ಪರವಾನಗಿ ನೀಡಿದ್ದು, ಕಂಪನಿ 100 ಕೊಳವೆಬಾವಿಗಳನ್ನು ಕೊರೆಯುವ ಮೂಲಕ ನಿಕ್ಷೇಪಗಳ ಮೌಲ್ಯ ಹಾಗೂ ಗಣಿಗಾರಿಕೆಯ ಸಾಧ್ಯತೆ ಪರಿಶೀಲಿಸಲು ಮುಂದಾಗಿದೆ.


ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ 10,082 ಎಕರೆ ಭೂಮಿಯಲ್ಲಿ ಚಿನ್ನದ ನಿಕ್ಷೇಪ ಪರಿಶೀಲಿಸುವ ಸಂಬಂಧ ಔರಮ್ ಜಿಯೋ ಎಕ್ಸ್‌ಪ್ಲೋರೇಶನ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಮನವಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಲು ನಿರ್ಧರಿಸಿರುವ ವಿಚಾರ ಪರಿಸರಾಸಕ್ತರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಚಿನ್ನದ ನಿಕ್ಷೇಪ ಪರಿಶೀಲಿಸುವ ಒಟ್ಟು 10ಸಾವಿರ ಎಕರೆಯಲ್ಲಿ 5,600 ಎಕರೆ ಅರಣ್ಯ ಪ್ರದೇಶಕ್ಕೆ ಸೇರಿದೆ. 3,600 ಎಕರೆ ಕೃಷಿ ಭೂಮಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಚಿರತೆ, ಕರಡಿ ಸೇರಿದಂತೆ ಹಲವು ವನ್ಯಮೃಗಗಳು, ಪಕ್ಷಿಗಳ ಸಂಕುಲವಿದೆ. ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಜೀವವೈವಿಧ್ಯ ಹಾಳಾಗಲಿದೆ ಎಂಬುದು ಪರಿಸರಪ್ರಿಯರ ಆಕ್ಷೇಪವಾಗಿದೆ.

ಚಿನ್ನದ ನಿಕ್ಷೇಪ ಪರಿಶೋಧನೆಗಾಗಿ ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕಂಪನಿಗೆ ಸಂಯೋಜಿತ ಪರವಾನಗಿ ನೀಡಿದೆ. ಪರಿಶೀಲನೆ ವೇಳೆ ಅರಣ್ಯದಲ್ಲಿ 100 ಕೊಳವೆಬಾವಿಗಳನ್ನು ಕೊರೆಯುವ ಮೂಲಕ ನಿಕ್ಷೇಪಗಳ ಮೌಲ್ಯ ಹಾಗೂ ಗಣಿಗಾರಿಕೆ ಸಾಧ್ಯತೆ ಪರಿಶೀಲಿಸಲು ಕಂಪನಿ ಮುಂದಾಗಿದೆ.

ಚಿನ್ನದ ನಿಕ್ಷೇಪ ಇದೆಯೇ?

ಉದ್ದೇಶಿತ ಪ್ರದೇಶದಲ್ಲಿ ಪ್ರತಿ ಟನ್‌ಗೆ 19 ಗ್ರಾಂನಿಂದ ಗರಿಷ್ಠ 80 ಗ್ರಾಂ ವರೆಗೆ ಚಿನ್ನ ಸಿಗಲಿದೆ ಎಂದು ಈ ಹಿಂದೆ ನಡೆದ ಶೋಧನೆಗಳಿಂದ ತಿಳಿದು ಬಂದಿತ್ತು. ಈಗ ಹೊಸೂರಿನ ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು ಮತ್ತು ಹೊನ್ನುಹಟ್ಟಿಯಲ್ಲಿ ಚಿನ್ನದ ನಿಕ್ಷೇಪದ ಕುರುಹುಗಳನ್ನು ಔರಮ್ ಜಿಯೋ ಎಕ್ಸ್‌ಪ್ಲೋರೇಶನ್ ಪ್ರೈವೇಟ್ ಲಿಮಿಟೆಡ್‌ ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಶೋಧಕ್ಕೆ ಮನವಿ ಮಾಡಿದೆ ಎನ್ನಲಾಗಿದೆ.

ದಟ್ಟವಾದ ಅರಣ್ಯ ಪ್ರದೇಶವಿರುವ ಕಾರಣ ಅಧ್ಯಯನ ಕಷ್ಟಕರವಾಗಿದೆ. ಪರಿಶೋಧನೆಯ ಸಮಯದಲ್ಲಿ ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಕಂದಕ ಮತ್ತು ಕೊರೆಯುವ ಕಾರ್ಯಾಚರಣೆ ಸಮಯದಲ್ಲಿ ಆಗುವ ಶಬ್ದ, ಪರಿಸರ ಮಾಲಿನ್ಯ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂಪನಿ ಹೇಳಿದೆ.

ಈ ಅರಣ್ಯ ಪ್ರದೇಶದಲ್ಲಿ ಚಿರತೆ ಹಾಗೂ ನಾಲ್ಕುಕೊಂಬಿನ ಜಿಂಕೆಗಳು ಇರುವುದನ್ನು ಅರಣ್ಯ ಇಲಾಖೆ ದೃಢಪಡಿಸಿದೆ. ಜೊತೆಗೆ, ಭದ್ರಾ ಹುಲಿ ಮೀಸಲು ಪ್ರದೇಶದಿಂದ ಆನೆ ಹಾಗೂ ಕಾಡೆಮ್ಮೆಗಳು ತರೀಕೆರೆ ಮತ್ತು ಲಕ್ಕವಳ್ಳಿ ಶ್ರೇಣಿಗಳ ಕಡೆಗೆ ಸಂಚರಿಸಲಿದ್ದು, ಬೆಳೆ ಹಾನಿಗೆ ಕಾರಣವಾಗುತ್ತಿದೆ ಎಂಬುದನ್ನು ಇಲಾಖೆ ಉಲ್ಲೇಖಿಸಿದೆ.

Read More
Next Story