ಡೈವೋರ್ಸ್ ಕೇಸ್‌ ವಿಚಾರಣೆಯ ಬಳಿಕ ಪತ್ನಿಯ ಶೂಟೌಟ್‌- ಹಂತಕ ಪತಿ ಪೊಲೀಸರಿಗೆ ಶರಣು
x
ಬೆಂಗಳೂರಿನಲ್ಲಿ ಪತ್ನಿಯ ಮೇಲೆ ಪತಿಯಿಂದಲೇ ಗುಂಡಿನ ದಾಳಿ

ಡೈವೋರ್ಸ್ ಕೇಸ್‌ ವಿಚಾರಣೆಯ ಬಳಿಕ ಪತ್ನಿಯ ಶೂಟೌಟ್‌- ಹಂತಕ ಪತಿ ಪೊಲೀಸರಿಗೆ ಶರಣು

ಬೆಂಗಳೂರು ಬಸವೇಶ್ವರನಗರದ ವೆಸ್ಟ್ ಇನ್ ಹೋಟೆಲ್ ಬಳಿ ಡೈವೋರ್ಸ್ ವಿಚಾರಣೆಯ ನಂತರ ಪತಿಯೇ ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.


Click the Play button to hear this message in audio format

ಬೆಂಗಳೂರು (Bengaluru) ಬಸವೇಶ್ವರನಗರದ (Basaveshwaranagar) ವೆಸ್ಟ್ ಇನ್ ಹೋಟೆಲ್ ಸಮೀಪ ಭೀಕರ ಹತ್ಯೆ ನಡೆದಿದ್ದು, ಗಂಡನೇ ತನ್ನ ಹೆಂಡತಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಪತಿ ಬಾಲಮುರಗನ್ ಪತ್ನಿ ಭುವನೇಶ್ವರಿಯ ಮೇಲೆ ಗುಂಡು ಹಾರಿಸಿದ್ದು, ಗಂಭೀರ ಗಾಯಗೊಂಡ ಭುವನೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಪತಿ-ಪತ್ನಿ ನಡುವೆ ಕೋರ್ಟ್‌ನಲ್ಲಿ ಡೈವೋರ್ಸ್ (Divorce) ಕೇಸ್ ನಡೆಯುತ್ತಿತ್ತು. ಮಂಗಳವಾರ ಸಂಜೆ ಕೋರ್ಟ್ ವಿಚಾರಣೆ ಮುಗಿಸಿಕೊಂಡು ಹಿಂದಿರುಗುವ ವೇಳೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಈ ಸಂದರ್ಭ ಬಾಲಮುರಗನ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಫೈರಿಂಗ್ ಬಳಿಕ ಠಾಣೆಗೆ ಸರೆಂಡರ್

ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದ್ದು, ಫೈರಿಂಗ್ ನಂತರ ಸ್ಥಳೀಯರು ಭುವನೇಶ್ವರಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾರೆ. ಪತ್ನಿಗೆ ಗುಂಡು ಹಾರಿಸಿದ ಬಳಿಕ ಆರೋಪಿ ಬಾಲಮುರಗನ್ ಸ್ವತಃ ಪೊಲೀಸ್ ಠಾಣೆಗೆ ತೆರಳಿ ಸರೆಂಡರ್ ಆಗಿದ್ದಾನೆ. ಪಿಸ್ತೂಲ್ ಅಕ್ರಮವಾಗಿ ತಂದಿರುವ ಶಂಕೆಯಿದ್ದು, ಪೊಲೀಸರು ಆರೋಪಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ತಮಿಳುನಾಡು ಮೂಲದ ದಂಪತಿ

ಮೃತ ಭುವನೇಶ್ವರಿ ಬಸವೇಶ್ವರನಗರ ಶಾಖೆಯ ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದರು. ಆರೋಪಿ ಬಾಲಮುರಗನ್ ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ತಮಿಳುನಾಡಿನ ಸೇಲಂ ಮೂಲದವರಾಗಿದ್ದು, 2011ರಲ್ಲಿ ವಿವಾಹವಾಗಿದ್ದರು. 2018ರಲ್ಲಿ ಬೆಂಗಳೂರಿಗೆ ಬಂದಿದ್ದು, ಬಾಲಮುರಗನ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದ. ಬಳಿಕ ಭುವನೇಶ್ವರಿ ಬ್ಯಾಂಕ್ ಉದ್ಯೋಗ ಪಡೆದಿದ್ದರು.

ಪ್ರತ್ಯೇಕವಾಗಿ ವಾಸ, ಉದ್ಯೋಗಕ್ಕೆ ರಾಜೀನಾಮೆ

ಕೆಲ ವರ್ಷಗಳ ಬಳಿಕ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ಇಬ್ಬರೂ ವೈಟ್‌ಫೀಲ್ಡ್‌ನಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸವಿದ್ದರು. ನಾಲ್ಕು ತಿಂಗಳ ಹಿಂದೆ ಬಾಲಮುರಗನ್ ಉದ್ಯೋಗ ಬಿಟ್ಟಿದ್ದಾನೆ. ಭುವನೇಶ್ವರಿ ರಾಜಾಜಿನಗರ ಶಾಖೆಗೆ ವರ್ಗಾವಣೆಯಾಗಿ ಮನೆ ಬದಲಿಸಿದ್ದರು. ಘಟನೆ ವೇಳೆ ಪತಿ ಆಕೆಯ ಕೈಗೆ ಎರಡು ಸುತ್ತು ಮತ್ತು ತಲೆಗೆ ಎರಡು ಸುತ್ತು ಸೇರಿ ಒಟ್ಟು ಐದು ರೌಂಡ್ ಗುಂಡು ಹಾರಿಸಿದ್ದಾನೆ.

ಅನುಮಾನವೇ ಕೊಲೆಗೆ ಕಾರಣ?

ಪತ್ನಿಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನವೇ ಗಲಾಟೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆಕೆ ದಿನವೂ ನಡೆದುಕೊಂಡು ಹೋಗುವುದನ್ನು ಗಮನಿಸಿ ಆರೋಪಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಇನ್ನು ಕೃತ್ಯಕ್ಕೆ ಬಳಸಿದ ಪಿಸ್ತೂಲ್‌ಗೆ ಲೈಸೆನ್ಸ್ ಇದೆಯೇ ಅಥವಾ ಅಕ್ರಮವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಪಿಸ್ತೂಲ್ ಹಾಗೂ ಗುಂಡು ಹಸ್ತಾಂತರ

ಒಟ್ಟು ಐದು ರೌಂಡ್ ಗುಂಡು ಹಾರಿಸಿದ ಬಳಿಕ ಆರೋಪಿ ಸ್ವತಃ ಠಾಣೆಗೆ ತೆರಳಿ ಪಿಸ್ತೂಲ್ ಹಾಗೂ ಒಂದು ಗುಂಡನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾನೆ ಎಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.

Read More
Next Story