ಬೇಕಾಬಿಟ್ಟಿ ಕಸ ಎಸೆದರೆ ಹುಷಾರ್‌; ನೀವು ಹಾಕಿದ ಕಸವನ್ನೇ ʼಹೋಂ ಡೆಲಿವರಿʼ ಕೊಡಲಿದೆ ಜಿಬಿಎ
x

ಕಸ ಎಸೆದವರಿಗೆ ಅವರ ಮನೆಯ ಮುಂದೆಯೇ 'ಕಸದ ಮರುಪಾವತಿ'

ಬೇಕಾಬಿಟ್ಟಿ ಕಸ ಎಸೆದರೆ ಹುಷಾರ್‌; ನೀವು ಹಾಕಿದ ಕಸವನ್ನೇ ʼಹೋಂ ಡೆಲಿವರಿʼ ಕೊಡಲಿದೆ ಜಿಬಿಎ

ಜಿಬಿಎ ಅಧಿಕಾರಿಗಳು ʻಕಸ ಸುರಿಯುವ ಹಬ್ಬʼ ಹೆಸರಿನಲ್ಲಿ ಬೆಂಗಳೂರಿನ ಕಸದ ಬ್ಲಾಕ್ ಸ್ಪಾಟ್‌ಗಳ ನಿವಾರಣೆಗೆ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ. ರಸ್ತೆ, ಖಾಲಿ ಜಾಗದಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಕಸವನ್ನು ವಾಪಸ್‌ ಸುರಿಯುವ ಮೂಲಕ ಸಾರ್ವಜನಿಕರನ್ನು ಎಚ್ಚರಿಸಲು ಮುಂದಾಗಿದೆ.


Click the Play button to hear this message in audio format

ಉದ್ಯಾನನಗರಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಕಸದ ಸಮಸ್ಯೆ ದೊಡ್ಡ ಪಿಡುಗಾಗಿ ಮಾರ್ಪಟ್ಟಿದೆ. ನಗರದ ಮೂಲೆ ಮೂಲೆಗಳಲ್ಲಿ ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಹಸಿ ಹಾಗೂ ಒಣ ಕಸ ಬೇರ್ಪಡಿಸಿ ವಿಲೇವಾರಿ ಮಾಡುವಂತೆ ಸಾಕಷ್ಟು ಜಾಗೃತಿ ಮೂಡಿಸಿದರೂ ಕಸವನ್ನು ನಿಯಂತ್ರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಕಸ ಎಸೆಯುವುದರಿಂದ 'ಬ್ಲಾಕ್‌ಸ್ಪಾಟ್‌'ಗಳು ಸೃಷ್ಟಿಯಾಗಿವೆ. 'ಬ್ರ್ಯಾಂಡ್ ಬೆಂಗಳೂರು' ಹೆಸರಿಗೆ ಇದರಿಂದ ಕಳಂಕವೂ ಮೆತ್ತಿಕೊಂಡಿದೆ. ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು ʼಕಸ ಸುರಿಯುವ ಹಬ್ಬʼ ಹೆಸರಿನಲ್ಲಿ ಕಸ ಸಮರ್ಪಕ ವಿಲೇವಾರಿಗೆ ತಂತ್ರ ಹೆಣೆದಿದ್ದು, ಪ್ರಾಯೋಗಿಕವಾಗಿ ಆರಂಭಿಸಿದೆ.

ಎಲ್ಲೆಂದರಲ್ಲಿ ಎಸೆದ ಕಸವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (BSWML) ಅಧಿಕಾರಿಗಳು ಎಸೆಯುವವರ ಮನೆಗೆ ಹಿಂತಿರುಗಿಸುವ ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿದವರನ್ನು ಪತ್ತೆ ಹಚ್ಚಿದ್ದು, ಗುರುವಾರ ಸುಮಾರು 200 ಮನೆಗಳ ಮುಂದೆ ಅದೇ ಕಸವನ್ನು ತಂದು ಸುರಿಯಲಾಗಿದೆ.

ಬೆಂಗಳೂರಿನ ಹೊಸಕೆರೆಹಳ್ಳಿಯ ದತ್ತಾತ್ರೆಯ ದೇವಸ್ಥಾನ ರಸ್ತೆಯಲ್ಲಿ ಕಸ ಎಸೆದ ವ್ಯಕ್ತಿಯೊಬ್ಬರ ಮನೆಯ ಮುಂದೆಯೇ ಆಟೋ ಟಿಪ್ಪರ್‌ನಲ್ಲಿ ಕಸ ಸುರಿದ ಜಿಬಿಎ ಸಿಬ್ಬಂದಿ 100 ರೂ.ದಂಡ ಸಹ ವಿಧಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಬಿಎ ಅಧಿಕಾರಿಗಳ ಈ ವಿಶಿಷ್ಟ ಕ್ರಮವನ್ನು ʻಕಸ ಸುರಿಯುವ ಹಬ್ಬʼ ಎಂದು ಕರೆಯಲಾಗಿದೆ. ಇದು ನಗರದಲ್ಲಿ ಕಸದ ಬ್ಲಾಕ್‌ಸ್ಪಾಟ್‌ಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಜಾಗೃತಿ ಅಭಿಯಾನ ಎಂದೇ ಕರೆಯಲಾಗಿದೆ. ಜಿಬಿಎ ಸಿಬ್ಬಂದಿ ಕಸ ತಂದು ಸುರಿದಿದ್ದನ್ನು ಕಂಡು ಹಲವರು ಬೆಚ್ಚಿಬಿದ್ದಿದ್ದಾರೆ.

ಏನಿದು ಜಿಬಿಎ ಕ್ರಮ?

ನಗರದ ಸ್ವಚ್ಛತೆ ಕಾಪಾಡಲು ಮತ್ತು ಕಸದ ಬ್ಲಾಕ್‌ಸ್ಪಾಟ್‌ ನಿರ್ಮೂಲನೆ ಮಾಡಲು ಜಿಬಿಎ (ಗ್ರೇಟರ್‌ ಬೆಂಗಳೂರು ಪ್ರಾಧಿಕಾರ) ಹೊಸ ಮಾರ್ಗದ ಮೊರೆ ಹೋಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಬೇಕಾಬಿಟ್ಟಿ ಕಸ ಎಸೆಯುವವರನ್ನು ಗುರುತಿಸಿ, ಅದನ್ನು ವಿಡಿಯೋ ಮಾಡಲಾಗುತ್ತದೆ. ನಂತರ ಅವರ ಮನೆಯ ಮುಂದೆ ದೊಡ್ಡ ಕಸದ ರಾಶಿಯನ್ನು ತಂದು ಸುರಿಯಲಾಗುತ್ತದೆ. ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬುದ್ದಿ ಕಲಿಸುವುದರಲ್ಲೇ ಸಾರ್ವಜನಿಕವಾಗಿ ಅವರ ಕೃತ್ಯವನ್ನು ಟೀಕಿಸಲು ಈ ಕ್ರಮದ ಮೊರೆ ಹೋಗಿದೆ ಎಂದು ಹೇಳಲಾಗಿದೆ.

ಇದಲ್ಲದೇ ಬೇಕಾಬಿಟ್ಟಿ ಕಸ ಸುರಿಯುವವರ ವಿರುದ್ಧ 2,000 ರೂ.ಗಳಿಂದ ಹಿಡಿದು 10,000 ರೂ.ಗಳವರೆಗೆ ದಂಡ ವಿಧಿಸುವುದಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ. ಜಿಬಿಎ ಉಪಕ್ರಮದಿಂದ ಕಸದ ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆಯನ್ನು 869 ರಿಂದ 150ಕ್ಕೆ ಇಳಿಸಲು ಉದ್ದೇಶಿಸಲಾಗಿದೆ ಎಂದು ಜಿಬಿಎ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬ್ಲಾಕ್ ಸ್ಪಾಟ್‌ ಪತ್ತೆ ಹಚ್ಚುವುದು ಹೇಗೆ?

ಬಿಎಸ್‌ಡಬ್ಲ್ಯೂಎಂಎಲ್ ಅಧಿಕಾರಿಗಳ ಪ್ರಕಾರ, ಈಗಾಗಲೇ ಮನೆ-ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯುವುದನ್ನು ಮುಂದುವರಿಸುತ್ತಿದ್ದ ಮನೆಗಳನ್ನು ಗುರುತು ಮಾಡಿ, ಅಂತಹ ಮನೆಗಳ ಮುಂದೆಯೇ ಕಸ ಸುರಿಯುವ ಹಬ್ಬದ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಬೇಕಾಬಿಟ್ಟಿ ಕಸ ಸುರಿಯುವ ಮನೆಗಳನ್ನು ಪತ್ತೆ ಮಾಡಲು ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ.

ಪರ-ವಿರೋಧದ ಮಾತುಗಳು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಈ ನಡೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ವರ್ಷಗಟ್ಟಲೇ ಜಾಗೃತಿ ಮೂಡಿಸಿದರೂ ಜನರು ಬದಲಾಗಿಲ್ಲ. ಜನರಿಗೆ ತಮ್ಮ ಮನೆಯ ಸ್ಚಚ್ಛತೆ ಮಾತ್ರ ಬೇಕು. ನಗರದ ಸ್ವಚ್ಛತೆ ಬೇಡವಾಗಿದೆ. ಜನರು ಸುಶಿಕ್ಷಿತರಾಗಿದ್ದರೂ ಕಸವನ್ನು ರಸ್ತೆಗೆ ಎಸೆಯುತ್ತಾರೆ. ಹೀಗೆ ರಸ್ತೆಗೆ ಎಸೆಯುವವರ ಕಸವನ್ನು ಅವರ ಮನೆಯ ಮುಂದೆಯೇ ಹಾಕಿ ಸರಿಯಾಗಿ ಪಾಠ ಕಲಿಸಲು ಮುಂದಾಗಿರುವುದು ಉತ್ತಮ ಎಂದು ಸಂಜಯ್‌ ನಗರದ ಡಾಲರ್ಸ್‌ ಕಾಲೊನಿ ನಿವಾಸಿಯಾದ ಉದ್ಯಮಿ ಶ್ಯಾಮ್‌.ಕೆ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಬಿಎಸ್‌ಡಬ್ಲ್ಯೂಎಂಎಲ್ ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ಮಾತನಾಡಿ, ಕಸ ವಿಲೇವಾರಿಗೆ ಸಾಕಷ್ಟು ಕ್ರಮ ಕೈಗೊಂಡು, ಜಾಗೃತಿ ಅಭಿಯಾನ ನಡೆಸಿದರೂ ಬೇಕಾಬಿಟ್ಟಿ ಕಸ ಎಸೆಯುವುದು ತಹಬದಿಗೆ ಬಂದಿಲ್ಲ. ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಹಿನ್ನೆಲೆಯಲ್ಲಿ ಈ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಡಿಸಿಎಂ ಕಟ್ಟುನಿಟ್ಟಿನ ಸೂಚನೆ

ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕೂಡ ಕಸದ ಪಿಡುಗು ನಿಯಂತ್ರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬ್ರ್ಯಾಂಡ್ ಬೆಂಗಳೂರನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಕಠಿಣ ಕ್ರಮಗಳನ್ನು ಅನುಸರಿಸುವಂತೆ ಡಿಸಿಎಂ ಸೂಚನೆ ನೀಡಿದ್ದರು.

Read More
Next Story