ಬಳ್ಳಾರಿ ಬಾಣಂತಿಯರ ಸಾವು | ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ: ಸಿಎಂ ಸೂಚನೆ
x

ಬಳ್ಳಾರಿ ಬಾಣಂತಿಯರ ಸಾವು | ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ: ಸಿಎಂ ಸೂಚನೆ

ಹಾಸನ ಜನಕಲ್ಯಾಣ ಸಮಾವೇಶದ ಯಶಸ್ಸಿನಿಂದ ಬೀಗುತ್ತಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಳ್ಳಾರಿ ಬಾಣಂತಿಯರ ಸಾವು ಹೊಸ ಸಂಕಷ್ಟ ತಂದೊಡ್ಡಿದೆ.


ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಪಡೆಯುತ್ತಿದೆ. ಬಾಣಂತಿಯರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂಬ ಪ್ರತಿಪಕ್ಷಗಳ ಆರೋಪ, ಆರೋಗ್ಯ ಇಲಾಖೆ ನಿರ್ಲಕ್ಷ್ಯದ ಕುರಿತ ಸಾರ್ವಜನಿಕರ ಆಕ್ರೋಶದ ನಡುವೆಯೇ ಮತ್ತೊಬ್ಬರು ಮೃತಪಟ್ಟು, ಬಾಣಂತಿಯರ ಸಾವಿನ ಸಂಖ್ಯೆ ಐದಕ್ಕೆ ಏರಿದೆ.

ಹಾಸನ ಜನಕಲ್ಯಾಣ ಸಮಾವೇಶದ ಯಶಸ್ಸಿನಿಂದ ಬೀಗುತ್ತಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಳ್ಳಾರಿ ಬಾಣಂತಿಯರ ಸಾವು ಹೊಸ ಸಂಕಷ್ಟ ತಂದೊಡ್ಡಿದೆ. ಇನ್ನು ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 327 ತಾಯಂದಿರ ಸಾವು ಸಂಭವಿಸಿದೆ ಎಂಬ ಆರೋಗ್ಯ ಸಚಿವರ ಹೇಳಿಕೆ ತೀವ್ರ ಆತಂಕ ಸೃಷ್ಟಿಸಿದೆ.

ಬಳ್ಳಾರಿ ಬಾಣಂತಿಯರ ಸಾವಿನ ವಿಚಾರ ಶುಕ್ರವಾರ ಸಚಿವ ಸಂಪುಟದಲ್ಲಿ ಗಹನ ಚರ್ಚೆಗೆ ಕಾರಣವಾಯಿತು. ಐವರು ಬಾಣಂತಿಯರ ಜೊತೆಗೆ 327 ತಾಯಂದಿರ ಸಾವಿನ ಕುರಿತಂತೆ ಪರಿಶೀಲನೆ ನಡೆಸುವಂತೆ ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಸದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನ.16 ರಂದು ಎಲ್ಲ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದ್ದರೂ ವೈದ್ಯರು ದ್ರಾವಣ ಬಳಸಿರುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಂಪುಟ ಸಭೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ವೈದ್ಯಕೀಯ ಲೋಪಗಳಿಗೆ ಅವಕಾಶವಿಲ್ಲ. ಬಾಣಂತಿಯರ ಸಾವಿನ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ 327 ತಾಯಂದಿರ ಸಾವಿನ ಕುರಿತಂತೆಯೂ ಪರಿಶೀಲನೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Read More
Next Story