
ಜನಾರ್ದನ ರೆಡ್ಡಿ ನಿವಾಸದ ಮುಂದೆ ಫೈರಿಂಗ್: ಕಾಂಗ್ರೆಸ್ ಕಾರ್ಯಕರ್ತ ಸಾವು
ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾನೆ. ಬಳ್ಳಾರಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಶಾಸಕ ಜನಾರ್ದನ ರೆಡ್ಡಿ ನಿವಾಸದ ಎದುರು ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗುರುವಾರ ರಾತ್ರಿ ಘರ್ಷಣೆ ಸಂಭವಿಸಿದೆ. ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎರಡು ಗುಂಪುಗಳಿಂದ ಕಲ್ಲು ತೂರಾಟ ಸಂಭವಿಸಿದ್ದು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿ
ತಡರಾತ್ರಿ ಸಂಭವಿಸಿದ ಘರ್ಷಣೆಯಲ್ಲಿ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಜನಾರ್ದನ ರೆಡ್ಡಿ ಅವರ ಬೆಂಬಲಿಗರ ಕಡೆಯಿಂದ ದಾಳಿ ನಡೆದಿದೆ ಎಂದು ಶಾಸಕ ಭರತ್ ರೆಡ್ಡಿ ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆ
ಜನಾರ್ದನ ರೆಡ್ಡಿ ಅವರ ಮನೆ ಎದುರಿನ ಜಾಗದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಮೊದಲಿಗೆ ಜಗಳ ಆರಂಭವಾಗಿದೆ. ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ಮನೆ ಎದುರು ರಸ್ತೆಯಲ್ಲಿ ಬ್ಯಾನರ್ ಕಟ್ಟಿಸಿದರು. ಆಗ ಮಾಜಿ ಸಚಿವ ಶ್ರೀರಾಮುಲು ಅಡ್ಡ ಬಂದರು. ಈ ಕಾರಣಕ್ಕೆ ಎರಡು ಬಣಗಳ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದು, ನಂತರ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ.
ಹತ್ಯೆಗೆ ಸಂಚು ಎಂದ ಜನಾರ್ದನ ರೆಡ್ಡಿ
ಈ ಬಗ್ಗೆ ಮಾತನಾಡಿರುವ ಜನಾರ್ದನ ರೆಡ್ಡಿ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಅವರ ಆಪ್ತ ಸತೀಶ್ ರೆಡ್ಡಿ ಹಾಗೂ ಭರತ್ ರೆಡ್ಡಿ ತಂದೆ ನಾರಾ ಸೂರ್ಯನಾರಾಣ ರೆಡ್ಡಿಯಿಂದ ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ನಿವಾಸದ ಮುಂದೆ ಗನ್ ಮ್ಯಾನ್ಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ. ಗಂಗಾವತಿಯಿಂದ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ, ಗನ್ಮ್ಯಾನ್ಗಳು ಫೈರಿಂಗ್ ನಡೆಸಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಾಲ್ಮೀಕಿ ಪುತ್ಥಳಿ ಪ್ರತಿಷ್ಟಾಪನೆ ಹೆಸರಲ್ಲಿ ಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಕೊಲೆಗೆಡುಕರನ್ನು ಹಿಂದಿಟ್ಟುಕೊಂಡು ನಾರಾ ಭರತ್ ರೆಡ್ಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಜನಾರ್ದನ ರೆಡ್ಡಿ, ಗಾಳಿಯಲ್ಲಿ ಹಾರಿಬಿದ್ದ ಗುಂಡನ್ನು ಮಾಧ್ಯಮಗಳಿಗೆ ತೋರಿಸಿದರು.
ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಜನವರಿ 3ರಂದು ಪ್ರತಿಮೆ ಅನಾವರಣ ಮಾಡಲು ಸಿದ್ಧತೆ ನಡೆಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದಾದ್ಯಂತ ಬ್ಯಾನರ್ ಅಳವಡಿಕೆ ಮಾಡಲಾಗುತ್ತಿದೆ. ಬ್ಯಾನರ್ ಅನ್ನು ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಅಳವಡಿಸುವ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ.
ಬಳ್ಳಾರಿ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಗರದ ಸಿರುಗುಪ್ಪ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಈ ನಡುವೆ ಶಾಸಕ ಜನಾರ್ದನ ರೆಡ್ಡಿ ಬಂಧನಕ್ಕೆ ಆಗ್ರಹಿಸಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಗರದ ಅವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಎದುರೇ ಗುರುವಾರ ರಾತ್ರಿ ಧರಣಿ ಕುಳಿತರು.
11 ಜನರ ವಿರುದ್ಧ ಎಫ್‌ಐಆರ್
ಘಟನೆ ಕುರಿತು ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾನರ್ ಕಟ್ಟುವಾಗ ಉದ್ದೇಶಪೂರ್ವಕವಾಗಿಯೇ ಹಲ್ಲೆ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಅಲಿಖಾನ್, ದಮ್ಮೂರ ಶೇಕರ್ ಸೇರಿದಂತೆ 11 ಜನರ ವಿರುದ್ಧ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಉಭಯ ನಾಯಕರಿಂದ ಮಾಧ್ಯಮಗೋಷ್ಠಿ
ಇನ್ನು ಘಟನೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಹಾಗೂ ನಾರಾ ಭರತ್ ರೆಡ್ಡಿ ಇಂದು ಬಳ್ಳಾರಿಯಲ್ಲಿ ಪ್ರತ್ಯೇಕವಾಗಿ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ.

