
ಬೆಳ್ಳಂದೂರು ಠಾಣೆಯ ಇನ್‌ಸ್ಪೆಕ್ಟರ್ ರಮೇಶ್ ರೊಟ್ಟಿ
ಪುತ್ರಿ ಮೃತದೇಹಕ್ಕೂ ಲಂಚ ಕೇಳಿದ ಬೆಳ್ಳಂದೂರು ಇನ್‌ಸ್ಪೆಕ್ಟರ್ ಅಮಾನತು
ಪುತ್ರಿಯ ಮೃತದೇಹವನ್ನು ಸಾಗಿಸಲು, ಮರಣೋತ್ತರ ಪರೀಕ್ಷೆ ನಡೆಸಲು ಹಾಗೂ ಸಾವಿನ ಪ್ರಮಾಣಪತ್ರ ಪಡೆಯಲು ಬೆಳ್ಳಂದೂರು ಠಾಣೆಯ ಪೊಲೀಸರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
‘ಮಗಳ ಸಾವಿನ ದುಃಖದಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರಿಗೆ, ಮರಣೋತ್ತರ ಪರೀಕ್ಷೆ ನಡೆಸಲು ಮತ್ತು ಪ್ರಕರಣ ದಾಖಲಿಸಲು ಲಂಚಕ್ಕಾಗಿ ಪೀಡಿಸಿದ ಆರೋಪದ ಮೇಲೆ ಬೆಂಗಳೂರಿನ ಬೆಳ್ಳಂದೂರು ಠಾಣೆಯ ಇನ್‌ಸ್ಪೆಕ್ಟರ್ ರಮೇಶ್ ರೊಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ನಿವೃತ್ತ ಮುಖ್ಯ ಹಣಕಾಸು ಅಧಿಕಾರಿ (CFO) ಕೆ. ಶಿವಕುಮಾರ್ ಅವರ 34 ವರ್ಷದ ಪುತ್ರಿ ಅಕ್ಷಯಾ ಅವರು ಸೆಪ್ಟೆಂಬರ್ 18 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಸುದ್ದಿ ತಿಳಿದು ಮುಂಬೈನಿಂದ ಬೆಂಗಳೂರಿಗೆ ಧಾವಿಸಿದ ಪೋಷಕರಿಗೆ, ಮಗಳ ಅಂತ್ಯಸಂಸ್ಕಾರ ನಡೆಸಲು ಮುಂದಾದಾಗ ಲಂಚದ ಬಿಸಿ ತಟ್ಟಿದೆ.
ಪುತ್ರಿಯ ಮೃತದೇಹವನ್ನು ಸಾಗಿಸಲು, ಮರಣೋತ್ತರ ಪರೀಕ್ಷೆ ನಡೆಸಲು ಹಾಗೂ ಸಾವಿನ ಪ್ರಮಾಣಪತ್ರ ಪಡೆಯಲು ಬೆಳ್ಳಂದೂರು ಠಾಣೆಯ ಪೊಲೀಸರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಅಮಾನವೀಯ ಅನುಭವವನ್ನು ಶಿವಕುಮಾರ್ ಅವರು ತಮ್ಮ 'ಲಿಂಕ್ಡ್ಇನ್' ಖಾತೆಯಲ್ಲಿ ಎಳೆಎಳೆಯಾಗಿ ವಿವರಿಸಿದ ನಂತರ ಪ್ರಕರಣವು ಬೆಳಕಿಗೆ ಬಂದಿತ್ತು. ಆಂಬುಲೆನ್ಸ್ ಚಾಲಕರಿಂದ ಹಿಡಿದು ಸ್ಮಶಾನದ ಸಿಬ್ಬಂದಿಯವರೆಗೆ ಪ್ರತಿಯೊಬ್ಬರೂ ಹಣಕ್ಕಾಗಿ ಪೀಡಿಸಿದ ನೋವನ್ನು ಅವರು ಹಂಚಿಕೊಂಡಿದ್ದರು.
ತನಿಖೆ ಮತ್ತು ಅಮಾನತು
ಸಾಮಾಜಿಕ ಜಾಲತಾಣದಲ್ಲಿ ಶಿವಕುಮಾರ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್‌ಕುಮಾರ್ ಸಿಂಗ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ತಕ್ಷಣವೇ ತನಿಖೆಗೆ ಆದೇಶಿಸಿ, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ರಮೇಶ್ ರೊಟ್ಟಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಮೊದಲೇ ಠಾಣೆಯ ಪಿಎಸ್‌ಐ ಸಂತೋಷ್ ಮತ್ತು ಕಾನ್‌ಸ್ಟೆಬಲ್ ಗೋರಕ್‌ನಾಥ್ ಅವರನ್ನು ಅಮಾನತು ಮಾಡಲಾಗಿತ್ತು.

