
Part- 2| ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಅಭಿವೃದ್ಧಿ; ಈಡೇರದ ಆಶಯಗಳು
ಬೆಳಗಾವಿಯಲ್ಲಿ ಪ್ರತಿವರ್ಷ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಈವರೆಗೆವಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಕಂಡುಕೊಳ್ಳಲಾಗುವುದೇ ಎಂಬುದನ್ನು ಕಾದು ನೋಡಬೇಕು.
ಬೆಳಗಾವಿಯ ಸುವರ್ಣ ವಿಧಾನಸೌಧವು ಕೇವಲ ಒಂದು ಕಟ್ಟಡವಲ್ಲ, ಅದು ಉತ್ತರ ಕರ್ನಾಟಕದ ಜನರ ಆತ್ಮಾಭಿಮಾನ ಮತ್ತು ಸಮಗ್ರ ಕರ್ನಾಟಕದ ಅಭಿವೃದ್ಧಿಯ ಸಂಕೇತವಾಗಿದೆ. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ ಡಾ. ನಂಜುಂಡಪ್ಪ ವರದಿಯ ಆಶಯದಂತೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ನಡೆಸುವ ಸಂಪ್ರದಾಯವನ್ನು ಪ್ರಾರಂಭಿಸಲಾಯಿತು. ಆದರೆ, ಪ್ರತಿ ವರ್ಷ ನಡೆಯುವ ಈ ಅಧಿವೇಶನವು ಕೇವಲ ಕಾಟಾಚಾರದ ಪ್ರಕ್ರಿಯೆಯಾಗುತ್ತಿದೆಯೇ ಅಥವಾ ನಿಜಕ್ಕೂ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
ನೀರಾವರಿ ಯೋಜನೆಗಳು, 371(ಜೆ) ಅನುಷ್ಠಾನದ ಕೊರತೆ, ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ, ಕಬ್ಬು ಬೆಳೆಗಾರರ ಸಂಕಷ್ಟ ಮತ್ತು ಬೆಳೆ ವಿಮೆ, ಸ್ಥಳಾಂತರಗೊಳ್ಳದ ಸರ್ಕಾರಿ ಕಚೇರಿಗಳು ಸೇರಿದಂತೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಈವರೆಗೆವಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿಬಾರಿ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮರ್ಪಕ ಪ್ರಯತ್ನ ಕೈಗೊಂಡಿಲ್ಲ ಎಂಬ ಆರೋಪಗಳಿವೆ.
ನೀರಾವರಿ ಯೋಜನೆಗಳು
ಉತ್ತರ ಕರ್ನಾಟಕದ ಬಹುಪಾಲು ಜನರ ಜೀವನಾಡಿ ಕೃಷಿ. ಆದರೆ, ಇಲ್ಲಿನ ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿರುವುದು ದುರಾದೃಷ್ಟಕರ. ಮಹದಾಯಿ ಯೋಜನೆ ಉತ್ತರ ಕರ್ನಾಟಕದ (ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ ಭಾಗದ) ಕುಡಿಯುವ ನೀರಿನ ಪ್ರಶ್ನೆಯಾಗಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದರೂ, ಕಾಮಗಾರಿ ಆರಂಭಿಸುವಲ್ಲಿ ಉಂಟಾಗುತ್ತಿರುವ ವಿಳಂಬ, ಅರಣ್ಯ ಇಲಾಖೆಯ ತೊಡಕುಗಳು ಮತ್ತು ಗೋವಾ ರಾಜ್ಯದ ಕ್ಯಾತೆಗಳ ಕುರಿತು ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರವಾಗಬೇಕಿದೆ. ಕೇವಲ ಟೆಂಡರ್ ಕರೆಯುವ ಭರವಸೆ ಸಾಲದು, ಕಾಮಗಾರಿ ಯಾವಾಗ ಶುರುವಾಗಲಿದೆ ಎಂಬ ಸ್ಪಷ್ಟತೆ ಜನತೆಗೆ ನೀಡಬೇಕಾಗಿದೆ.
ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ಗೆ ಹೆಚ್ಚಿಸುವುದು ಉತ್ತರ ಕರ್ನಾಟಕ ಭಾಗದ ರೈತರ ಬಹುದಿನದ ಕನಸು. ಇದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡುತ್ತದೆ. ಆದರೆ, ಇದಕ್ಕೆ ಬೇಕಾಗಿರುವ ಬೃಹತ್ ಮೊತ್ತದ ಪುನರ್ವಸತಿ ಮತ್ತು ಪುನರ್ನಿರ್ಮಾಣ ಪರಿಹಾರ ಧನವನ್ನು ರಾಜ್ಯ ಸರ್ಕಾರ ಹೇಗೆ ಹೊಂದಿಸುತ್ತದೆ ಎಂಬುದು ದೊಡ್ಡ ಪ್ರಶ್ನೆ. ಈ ಯೋಜನೆಗೆ 'ರಾಷ್ಟ್ರೀಯ ಯೋಜನೆ'ಯ ಸ್ಥಾನಮಾನ ಸಿಗದಿರುವುದರಿಂದ ರಾಜ್ಯವೇ ಸಂಪೂರ್ಣ ಆರ್ಥಿಕ ಹೊರೆ ಹೊರಬೇಕಿದೆ. ಈಗಾಗಲೇ ಪರಿಹಾರ ನಿಗದಿ ಮಾಡಿರುವ ಸರ್ಕಾರವು ಯಾವ ಮೂಲದಿಂದ ನೀಡಲಿದೆ ಎಂಬುದು ಸ್ಪಷ್ಟತೆ ಇಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಉತ್ತರ ನೀಡುವ ನಿರೀಕ್ಷೆ ಇದೆ.
371(ಜೆ) ಅನುಷ್ಠಾನದ ಕೊರತೆ
ಸಂವಿಧಾನದ 371(ಜೆ) ವಿಧಿಯ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದರೆ ಇದರ ಅನುಷ್ಠಾನದಲ್ಲಿ ಇನ್ನೂ ಅನೇಕ ಲೋಪಗಳಿವೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮೀಸಲಿಟ್ಟ ಅನುದಾನವು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪವಿದೆ. ಮೂಲಸೌಕರ್ಯ, ರಸ್ತೆ ಮತ್ತು ಶಾಲಾ ಕಟ್ಟಡಗಳ ನಿರ್ಮಾಣದಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ. ಈ ಭಾಗದ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಇದ್ದರೂ, ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬವನ್ನು ಪ್ರಶ್ನಿಸುವಂತಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕಗಳು ಇನ್ನೂ ರಾಜ್ಯದ ಸರಾಸರಿಗಿಂತ ಕೆಳಗಿವೆ. ಏಮ್ಸ್ ನಂತಹ ಉನ್ನತ ಆರೋಗ್ಯ ಸಂಸ್ಥೆ ರಾಯಚೂರಿಗೆ ಮಂಜೂರಾಗಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಈ ಕುರಿತು ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರು ಧ್ವನಿ ಎತ್ತಬೇಕಾಗಿದೆ.
ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ
ಕರ್ನಾಟಕದ ಅಭಿವೃದ್ಧಿ ಎಂದರೆ ಕೇವಲ ಬೆಂಗಳೂರು ಎಂಬಂತಾಗಿದೆ. ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಸಮಾವೇಶಗಳು ನಡೆದರೂ, ವಾಸ್ತವದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿಲ್ಲ. ಉದ್ಯೋಗವಿಲ್ಲದೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಜನರು ಬೆಂಗಳೂರು, ಮುಂಬೈ, ಗೋವಾಗಳಿಗೆ ಗುಳೆ ಹೋಗುವುದು ನಿಂತಿಲ್ಲ. ಸ್ಥಳೀಯವಾಗಿ ಕೃಷಿ ಆಧಾರಿತ ಕೈಗಾರಿಕೆಗಳು, ಟೆಕ್ಸ್‌ಟೈಲ್ ಪಾರ್ಕ್‌ಗಳು ಮತ್ತು ಐಟಿ ಕಂಪನಿಗಳನ್ನು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಸ್ಥಾಪಿಸಲು ಸರ್ಕಾರ ಯಾವ ಉತ್ತೇಜಕ ಕ್ರಮ ಕೈಗೊಂಡಿದೆ ಎಂಬುದು ಚರ್ಚೆಯಾಗಬೇಕು. ಗ್ರಾಮೀಣ ಭಾಗದ ರಸ್ತೆಗಳು ತೀರಾ ಹದಗೆಟ್ಟಿವೆ. ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲ್ವೆ ಯೋಜನೆಗಳು ತ್ವರಿತಗತಿಯಲ್ಲಿ ಸಾಗಬೇಕಿದೆ.
ಕಬ್ಬು ಬೆಳೆಗಾರರ ಸಂಕಷ್ಟ
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳು ಸಕ್ಕರೆ ಕಣಜಗಳಾಗಿವೆ. ಆದರೆ, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಸಿಗಬೇಕಾದ ಬಾಕಿ ಹಣ ಪಾವತಿಯಲ್ಲಿ ವಿಳಂಬವಾಗುತ್ತಲೇ ಇದೆ. ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ನಡುವಿನ ಹೊಂದಾಣಿಕೆ ಕೊರತೆಯಿಂದ ರೈತರು ಬೀದಿಗೆ ಬರುವಂತಾಗಿದೆ. ತೂಕದಲ್ಲಿನ ಮೋಸ ಮತ್ತು ಕಟಾವು ವೆಚ್ಚದ ಹೆಸರಿನಲ್ಲಿ ರೈತರ ಸುಲಿಗೆಯಾಗುತ್ತಿದೆ. ಇನ್ನೊಂದೆಡೆ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಫಸಲ್ ಬಿಮಾ ಯೋಜನೆಯ ಪರಿಹಾರ ಸರಿಯಾಗಿ ತಲುಪುತ್ತಿಲ್ಲ. ಬೆಳೆ ನಷ್ಟದ ಸಮೀಕ್ಷೆ ವರದಿಗಳು ಅವೈಜ್ಞಾನಿಕವಾಗಿವೆ ಎಂಬ ದೂರುಗಳಿವೆ.
ಗಡಿ ವಿವಾದ ಮತ್ತು ಎಂಇಎಸ್ ಪುಂಡಾಟಿಕೆ
ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್ ) ಕ್ಯಾತೆ ತೆಗೆಯುವುದು ಸಾಮಾನ್ಯವಾಗಿದೆ. 1956ರ ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲೇ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಕಾನೂನಾತ್ಮಕವಾಗಿ ದೃಢಪಟ್ಟಿದೆ. ಆದರೂ, ಮಹಾರಾಷ್ಟ್ರ ಸರ್ಕಾರ ಮತ್ತು ಬೆಳಗಾವಿಯ ಸ್ಥಳೀಯ ಪುಂಡ ಸಂಘಟನೆಯಾದ ಎಂಇಎಸ್, ಭಾಷೆಯ ಹೆಸರಿನಲ್ಲಿ ಶಾಂತಿ ಕದಡುವ ಕೆಲಸವನ್ನು ದಶಕಗಳಿಂದ ಮಾಡುತ್ತಲೇ ಬಂದಿವೆ. ಮಹಾಮೇಳಾವ್ ನಡೆಸುವ ಮೂಲಕ ಭಾಷಾ ಸಾಮರಸ್ಯ ಕದಡುವ ಪ್ರಯತ್ನ ನಡೆಯುತ್ತದೆ. ಸರ್ಕಾರ ಕೇವಲ ಎಚ್ಚರಿಕೆ ನೀಡುವುದರಲ್ಲೇ ಕಾಲಹರಣ ಮಾಡದೆ, ಗಡಿ ಭಾಗದ ಕನ್ನಡಿಗರಿಗೆ ರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ತಲುಪಿಸುವ ಮೂಲಕ ಭಾಷಾ ಅಭಿಮಾನವನ್ನು ಗಟ್ಟಿಗೊಳಿಸಬೇಕಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡುವುದು ಅಗತ್ಯ ಇದೆ.
ಪ್ರವಾಸೋದ್ಯಮದ ನಿರ್ಲಕ್ಷ್ಯ
ಹಂಪಿ, ಪಟ್ಟದಕಲ್ಲು, ಐಹೊಳೆ, ವಿಜಯಪುರದ ಗೋಲಗುಮ್ಮಟ, ಬಾದಾಮಿಯಂತಹ ವಿಶ್ವಪಾರಂಪರಿಕ ತಾಣಗಳನ್ನು ಹೊಂದಿದ್ದರೂ, ಉತ್ತರ ಕರ್ನಾಟಕದ ಪ್ರವಾಸೋದ್ಯಮ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಮೂಲಸೌಕರ್ಯದ ಕೊರತೆಯಿಂದ ಪ್ರವಾಸಿಗರು ಇತ್ತ ಮುಖ ಮಾಡುತ್ತಿಲ್ಲ. ಪ್ರವಾಸೋದ್ಯಮ ಬೆಳೆದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಸರಳ ಸತ್ಯವನ್ನು ಆಳುವವರು ಮರೆತಂತಿದೆ ಎಂಬ ಮಾತುಗಳು ಕೇಳಿಬಂದಿವೆ.
ಸ್ಥಳಾಂತರಗೊಳ್ಳದ ಸರ್ಕಾರಿ ಕಚೇರಿಗಳು
ಬೆಳಗಾವಿಯಲ್ಲಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುವರ್ಣ ವಿಧಾನಸೌಧವು ಉತ್ತರ ಕರ್ನಾಟಕದ ಆಡಳಿತ ಶಕ್ತಿಯ ಕೇಂದ್ರವಾಗಬೇಕಿತ್ತು. ಆದರೆ, ಉದ್ಘಾಟನೆಯಾಗಿ ದಶಕವೇ ಕಳೆದರೂ, ಇದು ವರ್ಷದ 340 ದಿನಗಳ ಕಾಲ ಬಾಗಿಲು ಮುಚ್ಚಿರುತ್ತದೆ. ಶಕ್ತಿ ಸೌಧವಾಗಬೇಕಿದ್ದ ಕಟ್ಟಡವು ಕೇವಲ ಪ್ರವಾಸಿ ತಾಣ ಅಥವಾ ಬಿಳಿ ಆನೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಪ್ರಮುಖ ಕಾರಣ, ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸುವಲ್ಲಿ ಸರ್ಕಾರಗಳು ತೋರುತ್ತಿರುವ ನಿರಂತರ ನಿರ್ಲಕ್ಷ್ಯ. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಬೆಂಗಳೂರಿನಿಂದ ಬೆಳಗಾವಿಗೆ ಶಾಶ್ವತವಾಗಿ ಸ್ಥಳಾಂತರಗೊಂಡು ಸರ್ಕಾರ ಆದೇಶಿಸಿದೆ. ಆದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.
ಉತ್ತರ ಕರ್ನಾಟಕದ ಜನರ ಅಗತ್ಯಗಳಿಗೆ ನೇರವಾಗಿ ಸ್ಪಂದಿಸುವಂತಹ ಸುಮಾರು 25ಕ್ಕೂ ಹೆಚ್ಚು ಪ್ರಮುಖ ಇಲಾಖೆಗಳು ಅಥವಾ ಆಯುಕ್ತಾಲಯಗಳನ್ನು ಸ್ಥಳಾಂತರಿಸುವಂತೆ ಈ ಹಿಂದೆ (2014, 2018ರಲ್ಲಿ) ಆದೇಶಗಳನ್ನು ಹೊರಡಿಸಲಾಗಿತ್ತು. ಆದರೆ ಇಂದಿಗೂ ಅವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.
ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮ
ಉತ್ತರ ಕರ್ನಾಟಕದ ರೈತರ ಜೀವನಾಡಿಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಇತರ ನೀರಾವರಿ ಯೋಜನೆಗಳ ಕಚೇರಿಗಳು ಯೋಜನಾ ಸ್ಥಳದಲ್ಲೇ ಇರಬೇಕು. ಆದರೆ, ಇವುಗಳ ಕೇಂದ್ರ ಕಚೇರಿಗಳು ಇಂದಿಗೂ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿವೆ. ರೈತರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಅಥವಾ ಗುತ್ತಿಗೆದಾರರು ಬಿಲ್ ಪಾವತಿಗೆ ಬೆಂಗಳೂರಿಗೆ ಅಲೆಯುವಂತಾಗಿದೆ.
ಸಕ್ಕರೆ ನಿರ್ದೇಶನಾಲಯ
ರಾಜ್ಯದ ಒಟ್ಟು ಸಕ್ಕರೆ ಉತ್ಪಾದನೆಯ ಸಿಂಹಪಾಲು ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳದ್ದು. ಹೀಗಿದ್ದರೂ, ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆಗಳ ಸಮಸ್ಯೆ ಬಗೆಹರಿಸುವ ಸಕ್ಕರೆ ನಿರ್ದೇಶನಾಲಯ ಬೆಂಗಳೂರಿನಲ್ಲಿದೆ. ಇದನ್ನು ಬೆಳಗಾವಿಗೆ ಸ್ಥಳಾಂತರಿಸಬೇಕೆಂಬುದು ನ್ಯಾಯಯುತ ಬೇಡಿಕೆ.
ಮಾಹಿತಿ ಹಕ್ಕು ಆಯೋಗ
ಉತ್ತರ ಕರ್ನಾಟಕದ ಜನಸಾಮಾನ್ಯರು ಮೇಲ್ಮನವಿ ಸಲ್ಲಿಸಲು ಬೆಂಗಳೂರಿಗೆ ಹೋಗುವುದು ವೆಚ್ಚದಾಯಕ. ಬೆಳಗಾವಿಯಲ್ಲಿ ಪೂರ್ಣ ಪ್ರಮಾಣದ ಪೀಠ ಸ್ಥಾಪನೆಯಾಗಬೇಕೆಂಬ ಆದೇಶವಿದ್ದರೂ, ಅದು ಪೂರ್ಣವಾಗಿ ಜಾರಿಯಾಗಿಲ್ಲ.
ಇತರೆ ಪ್ರಮುಖ ಕಚೇರಿಗಳು
ಪುರಾತತ್ವ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಕೆಲವು ವಿಭಾಗಗಳು, ಮತ್ತು ಮಾನವ ಹಕ್ಕುಗಳ ಆಯೋಗದ ಪ್ರಾದೇಶಿಕ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಕೆಲವು ಕಚೇರಿಗಳನ್ನು ತೆರೆಯಲಾಗಿದೆ ಎಂದು ಸರ್ಕಾರ ಹೇಳಿದರೂ, ಅಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿರುವ ಹಿರಿಯ ಅಧಿಕಾರಿಗಳು ಇರುವುದಿಲ್ಲ. ಕೇವಲ ಕಿರಿಯ ದರ್ಜೆಯ ನೌಕರರನ್ನು ನೇಮಿಸಿ, ಕಚೇರಿ ತೆರೆದಿದ್ದೇವೆ ಎಂದು ಕಣ್ಣೊರೆಸುವ ತಂತ್ರ ನಡೆಯುತ್ತಿದೆ.
ಅಧಿಕಾರಿಗಳೇ ಅಡ್ಡಿ
ಕಚೇರಿಗಳ ಸ್ಥಳಾಂತರಕ್ಕೆ ಅತಿದೊಡ್ಡ ಅಡ್ಡಿಯಾಗಿರುವುದು ಅಧಿಕಾರಿಶಾಹಿ ವರ್ಗ. ಹಿರಿಯ ಅಧಿಕಾರಿಗಳು, ಕಾರ್ಯದರ್ಶಿಗಳು ಬೆಂಗಳೂರಿನ ಸುಖಜೀವನ, ಮಕ್ಕಳ ವಿದ್ಯಾಭ್ಯಾಸ ಮತ್ತು ಹವಾಮಾನದ ನೆಪವೊಡ್ಡಿ ಬೆಳಗಾವಿಗೆ ಬರಲು ಹಿಂದೇಟು ಹಾಕುತ್ತಾರೆ. ವರ್ಗಾವಣೆಯಾದರೆ ರಾಜಕೀಯ ಒತ್ತಡ ತಂದು ಅದನ್ನು ರದ್ದುಪಡಿಸಿಕೊಳ್ಳುತ್ತಾರೆ ಅಥವಾ ಬೆಂಗಳೂರಿನಲ್ಲೇ ಉಳಿದುಕೊಂಡು ವಾರಕ್ಕೊಮ್ಮೆ ಬೆಳಗಾವಿಗೆ ಬಂದು ಹೋಗುವ 'ಪ್ರವಾಸಿ ಅಧಿಕಾರಿ'ಗಳಾಗುತ್ತಾರೆ. ಸುವರ್ಣ ವಿಧಾನಸೌಧದಲ್ಲಿ ಸಾವಿರಾರು ಜನರಿಗೆ ಕುಳಿತು ಕೆಲಸ ಮಾಡುವಷ್ಟು ಜಾಗವಿದ್ದರೂ, "ವಸತಿ ಸೌಕರ್ಯ ಇಲ್ಲ" ಎಂಬ ಸಬೂಬು ಹೇಳಲಾಗುತ್ತಿದೆ.
ಸುವರ್ಣ ವಿಧಾನಸೌಧದ ನಿರ್ವಹಣೆಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಕಚೇರಿಗಳು ಬಾರದೆ ಕಟ್ಟಡ ಬಳಕೆಯಾಗುತ್ತಿಲ್ಲ. ಆಡಳಿತವು ಜನರ ಬಾಗಿಲಿಗೆ ಬರಬೇಕು ಎಂಬ ಪ್ರಜಾಪ್ರಭುತ್ವದ ಆಶಯ ವಿಫಲವಾಗಿದೆ. ಉತ್ತರ ಕರ್ನಾಟಕದ ಜನರು ಸಣ್ಣ ಕೆಲಸಕ್ಕೂ ರಾಜಧಾನಿಗೆ ಹೋಗಬೇಕಾದ ಅನಿವಾರ್ಯತೆ ತಪ್ಪಿಲ್ಲ.

