ಬೆಳಗಾವಿ ಅಗ್ನಿ ದುರಂತ| ಮಗನ ಸುಟ್ಟ ದೇಹವನ್ನು ಕೈಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟ ಅಧಿಕಾರಿಗಳು
x

ಬೆಳಗಾವಿ ಅಗ್ನಿ ದುರಂತ| ಮಗನ ಸುಟ್ಟ ದೇಹವನ್ನು ಕೈಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟ ಅಧಿಕಾರಿಗಳು


ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿರುವ ಸ್ನೇಹಂ ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಬೆಂಕಿ ಬಿದ್ದು ‌ಭಾರೀ ಅನಾಹುತ ಸಂಭವಿಸಿದೆ. ಬುಧವಾರದ ಮಧ್ಯಾಹ್ನದವರೆಗೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಸುಮಾರು 6 ಅಗ್ನಿಶಾಮಕ ವಾಹನಗಳು ಹಾಗೂ 250ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು 16 ಗಂಟೆಗಳ ಕಾರ್ಯಾಚರಣೆ ಬಳಿಕಒಬ್ಬ ಕಾರ್ಮಿಕನ ಶವ ಸಂಪೂರ್ಣ ಸುಟ್ಟು ಕರಕಲಾದ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತಪಟ್ಟಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (19) ಅವರ ದೇಹದ ಅಂಗಾಂಗಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಅವರ ಮೃತದೇಹದ ಅವಶೇಷಗಳನ್ನು ಅಧಿಕಾರಿಗಳು ಕೈಚೀಲದಲ್ಲಿ ಹಾಕಿ ತಂದೆ ಸಣ್ಣಗೌಡ ಅವರ ಕೈಗೆ ಕೊಟ್ಟಿರುವುದು ಈ ದೃಶ್ಯವನ್ನು ನೋಡಿದವರ ಕರುಳು ಕಿತ್ತು ಬರುವಂತಾಗಿದೆ. ದಾರಿಯುದ್ದಕ್ಕೂ ತಂದೆ ತನ್ನ ಕೈಯಲ್ಲಿ ಮಗನ ಸುಟ್ಟ ದೇಹದ ಅಂಗಾಂಗಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿಗೆ ಮರಗುವಂತಾಗಿದೆ. ಜಿಲ್ಲಾಡಳಿತದ ಈ ಅಮಾನವೀಯ ಕಾರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

4 ತಿಂಗಳ ಹಿಂದೆಯಷ್ಟೇ ಯುವಕ ಫ್ಯಾಕ್ಟರಿಯಲ್ಲಿ ಹೆಲ್ಪರ್ ಕೆಲಸಕ್ಕೆ ಸೇರಿಕೊಂಡಿದ್ದನು. ಆದರೆ, ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ಭೀಕರ ಬೆಂಕಿ ಅವಘಡದಲ್ಲಿ ಸಾವಿಗೀಡಾಗಿದ್ದಾನೆ. ಮನೆ ಮಗ ಸುಟ್ಟು ಕರಕಲಾಗಿ ಮೂಳೆಗಳು ಮಾತ್ರ ಸಿಕ್ಕಿದ್ದು ಮೂಳೆಗಳನ್ನು ಕೈ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಡಲಾಗಿದೆ. ಮಗನ ಸಾವಿನ ನೋವಿನಲ್ಲಿರುವ ತಂದೆ ಮೂಳೆಗಳನ್ನು ಕೈಯಲ್ಲಿ ಹಿಡಿದು ಮತ್ತಷ್ಟು ರೋಧಿಸಿದ್ದಾರೆ. ಸದ್ಯ ಕೈ ಚೀಲದಲ್ಲಿ ಮೃತನ ಮೂಳೆಗಳನ್ನು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಜಿಲ್ಲಾಡಳಿತಕ್ಕೆ ಚೀಮಾರಿ ಹಾಕಿದ್ದಾರೆ.

ಈ ರೀತಿ ಕೈ ಚೀಲದಲ್ಲಿ ಮೂಳೆಗಳನ್ನು ಹಾಕಿ ಕೊಡುವುದು ಎಷ್ಟು ಸರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮೃತ ಯುವಕನಿಗೆ ಕನಿಷ್ಠ ಮಟ್ಟದ ಗೌರವ ನೀಡದೆ ಮೃತದೇಹ ಸಾಗಾಣೆಗೆ ವಾಹನ ವ್ಯವಸ್ಥೆ ಮಾಡದೆ, ಈ ರೀತಿ ತರಕಾರಿ ತರುವ ಚೀಲದಲ್ಲಿ ನೀಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಕೆಂಡಕಾರಿದ್ದಾರೆ.

ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಓಡೋಡಿ ಬಂದ ಯಲ್ಲಪ್ಪನ ಮನೆಯವರಿಗೆ ಫ್ಯಾಕ್ಟರಿಯ ಲಿಫ್ಟಿನಲ್ಲಿ ಯಲ್ಲಪ್ಪ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕಂಡುಬಂದಿದೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಹೋಗಿದ್ದ ಯಲ್ಲಪ್ಪನ ಅಸ್ತಿಪಂಜರ ಮಾತ್ರ ಸಿಕ್ಕಿತು. ಮಗನ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Read More
Next Story