ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ : ಜಾರಕಿಹೊಳಿ ಬಣಕ್ಕೆ ಭರ್ಜರಿ ಗೆಲುವು, ಕತ್ತಿ, ಸವದಿ ಬಣಕ್ಕೆ ಮುಖಭಂಗ
x

ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ : ಜಾರಕಿಹೊಳಿ ಬಣಕ್ಕೆ ಭರ್ಜರಿ ಗೆಲುವು, ಕತ್ತಿ, ಸವದಿ ಬಣಕ್ಕೆ ಮುಖಭಂಗ

ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಭರ್ಜರಿ ಗೆಲುವು ಸಾಧಿಸಿದ್ದು, ಕತ್ತಿ ಕುಟುಂಬಕ್ಕೆ ಮುಖಭಂಗವಾಗಿದೆ. ಜಾರಕಿಹೊಳಿ ಬಣವು 29 ವರ್ಷಗಳ ಬಳಿಕ ಡಿಸಿಸಿ ಬ್ಯಾಂಕ್ ಅಧಿಕಾರ ಕಸಿದುಕೊಂಡಿದೆ.


ಬೆಳಗಾವಿಯಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬದ ಮಧ್ಯೆ ತೀವ್ರ ಪೈಪೋಟಿಗೆ ಕಾರಣವಾಗಿದ್ದ ಬೆಳಗಾವಿ ಜಿಲ್ಲಾ ಸಹಕಾರ (ಡಿಸಿಸಿ) ಬ್ಯಾಂಕ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ.

ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಭರ್ಜರಿ ಗೆಲುವು ಸಾಧಿಸಿದ್ದು, ಕತ್ತಿ ಕುಟುಂಬಕ್ಕೆ ಮುಖಭಂಗವಾಗಿದೆ. ಜಾರಕಿಹೊಳಿ ಬಣವು 29 ವರ್ಷಗಳ ಬಳಿಕ ಡಿಸಿಸಿ ಬ್ಯಾಂಕ್ ಅಧಿಕಾರ ಕಸಿದುಕೊಂಡಿದೆ.

ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ

ಘೋಷಣೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಬಾಲಚಂದ್ರ ಜಾರಕಿಹೊಳಿ ಅವರು, “ಹದಿನಾರು ಸ್ಥಾನಗಳಲ್ಲಿ 13 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದೇವೆ. 29 ವರ್ಷಗಳ ಬಳಿಕ ಡಿಸಿಸಿ ಬ್ಯಾಂಕ್ ಅಧಿಕಾರ ನಮ್ಮ ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯ ಜನರು, ರೈತರು ಹಾಗೂ ಶಾಸಕರ ಸಹಕಾರದಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಹೇಳಿದರು.

"ಇದೀಗ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮಾಜದವರಿಗೆ ನೀಡಲು ನಿರ್ಧರಿಸಿದ್ದೇವೆ. ಅಧ್ಯಕ್ಷ, ಉಪಾಧ್ಯಕ್ಷ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಗಳು ನಮ್ಮ ಬಣದವರ ಪಾಲಾಗಲಿವೆ" ಎಂದು ಹೇಳಿದರು.

ರಮೇಶ್ ಕತ್ತಿಗೆ ಪರೋಕ್ಷ ಟಾಂಗ್

“ಚುನಾವಣೆಯಲ್ಲಿ ಕೆಲವರು ನಮ್ಮ ವಿರುದ್ಧ ಮಾತನಾಡಿದರು. ಆದರೆ, ನಾವು ಬ್ಯಾಂಕ್ ಹಿತದೃಷ್ಟಿಯಿಂದ ಮೌನವಾಗಿದ್ದೇವೆ. ಅದು ನಮ್ಮ ದುರ್ಬಲತೆ ಅಲ್ಲ. ಸಮಯ ಬಂದಾಗ ಎಲ್ಲರಿಗೂ ಉತ್ತರ ಕೊಡುತ್ತೇವೆ,” ಎಂದು ಹೇಳಿ ರಮೇಶ್ ಕತ್ತಿಗೆ ಪರೋಕ್ಷ ಬಾಲಚಂದ್ರ ಜಾರಕಿಹೊಳಿ ಟಾಂಗ್ ಕೊಟ್ಟರು.

ರಾಜು ಕಾಗೆ ಮತ್ತು ಗಣೇಶ್ ಹುಕ್ಕೇರಿ ನಮ್ಮ ಬಣಕ್ಕೆ ಬೆಂಬಲ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಲಕ್ಷ್ಮಣ ಸವದಿಗೆ 50 ಕೋಟಿ ಬೆಟ್ಟಿಂಗ್ ಸವಾಲ್

ಬೆಳಗಾವಿ ಡಿಸಿಸಿ ಬ್ಯಾಂಕ್ ಗೆ ನಮ್ಮ ಬೆಂಬಲಿಗರೇ ಅಧ್ಯಕ್ಷರಾಗುತ್ತಾರೆ. ನಾನು ಐವತ್ತು ಕೋಟಿ ರೂ. ಬೆಟ್ಟಿಂಗ್ ಕಟ್ಟುತ್ತೇನೆ. ಸವದಿ ಬಯಸಿದರೆ ಅವರೂ ಬೆಟ್ಟಿಂಗ್ ಕಟ್ಟಲಿ. ಒಂದು ವೇಳೆ ನಮ್ಮವರು ಆಗದಿದ್ದರೆ ನನ್ನ ಆಸ್ತಿ ಮಾರಿ ಕೊಡುತ್ತೇನೆ ಎಂದು ಸವಾಲು ಹಾಕಿದರು.

ಘಟಪ್ರಭಾ ಸಕ್ಕರೆ ಕಾರ್ಖಾನೆಯ 33 ಕೋಟಿ ರೂ. ಬಾಕಿ ಹಣದ ವಸೂಲಿಗೆ ಕ್ರಮ ಕೈಗೊಳ್ಳುವುದು. ಸವದಿಗೂ ನಮಗೂ ವೈಯಕ್ತಿಕವಾಗಿ ಯಾವುದೇ ಶತ್ರುತ್ವ ಇಲ್ಲ. ಆದರೆ, ಅವರು ಅವಿರೋಧ ಆಯ್ಕೆಯಾಗಬೇಕೆಂದಿದ್ದರು. ಅದು ಆಗದ ಕಾರಣ ಅಸಮಾಧಾನ ವ್ಯಕ್ತವಾಗಿದೆ ಎಂದರು.

ಸತೀಶ್ ಜಾರಕಿಹೊಳಿ ಹೇಳಿದ್ದೇನು?

“ಏಳು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳಲ್ಲಿ ನಾವು ಗೆದ್ದಿದ್ದೇವೆ. ಕೆಲವೆಡೆ ಸೋತಿದ್ದೇವೆ, ಆದರೆ ಜನತೆ ನಮಗೆ ಬೆಂಬಲ ನೀಡಿದ್ದಾರೆ. ಜಾತಿಯ ಆಧಾರದ ಪ್ರಚಾರ ಫಲ ನೀಡಿಲ್ಲ. ಜನರು ಅದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ,” ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಲಕ್ಷ್ಮಣ ಸವದಿ ಕುರಿತು ಮಾತನಾಡಿದ ಅವರು, “ಸವದಿ ಎಲ್ಲರೂ ಒಂದೇ ಗುಂಪಿನವರು ಎಂದು ಹೇಳಿ ತಪ್ಪು ಸಂದೇಶ ನೀಡಿದ್ದಾರೆ. ಅಧ್ಯಕ್ಷ ಸ್ಥಾನ ಯಾರಿಗೆ ಸಿಗುತ್ತದೆ ಎಂಬ ಚರ್ಚೆ ಅವರ ಹೊಸ ತಂತ್ರ ಮಾತ್ರ,” ಎಂದು ಟೀಕಿಸಿದರು.

ಒಟ್ಟಾರೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬಣದ ಗೆಲುವು ಬೆಳಗಾವಿ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸಂಕೇತ ಎಂದೇ ವಿಶ್ಲೇಷಿಸಲಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಸೋಲು ಕತ್ತಿ ಮತ್ತು ಸವದಿ ಬಣಗಳಿಗೆ ದೊಡ್ಡ ಹಿನ್ನಡೆ ತಂದೊಡ್ಡಿದೆ.

Read More
Next Story