
ಸುವರ್ಣ ವಿಧಾನಸೌಧ
Belagavi Session| ದೆಹಲಿ ಸ್ಫೋಟದ ಹಿನ್ನೆಲೆ ಬೆಳಗಾವಿಯಲ್ಲಿ ಹೈಅಲರ್ಟ್; 6-8 ಸಾವಿರ ಪೊಲೀಸರ ನಿಯೋಜನೆ
ಅಧಿವೇಶನದ ಸಮಯದಲ್ಲಿ ಸುಮಾರು 6 ರಿಂದ 8 ಸಾವಿರ ಪೊಲೀಸರನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಸಚಿವಾಲಯದ ಸಿಬ್ಬಂದಿ ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಅಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಬೆಳಗಾವಿ ಅಧಿವೇಶನಕ್ಕೆ ಕಟ್ಟೆಚ್ಚರ ವಹಿಸಲು ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.8 ರಿಂದ ಚಳಿಗಾಲದ ಅಧಿವೇಶನದ ಆರಂಭವಾಗಲಿದೆ. ದೆಹಲಿ ಸ್ಫೋಟದ ಹಿನ್ನೆಲೆಯಲ್ಲಿ ಸೂಕ್ತ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಸೂಚಿಸಿದೆ.
ಅಧಿವೇಶನದ ಸಮಯದಲ್ಲಿ 6 ರಿಂದ 8 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಸಚಿವಾಲಯದ ಸಿಬ್ಬಂದಿ ಸೇರಿ 12 ಸಾವಿರಕ್ಕೂ ನೌಕರರು ಈ ಅಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಅಧಿವೇಶನ ನಡೆಯುವ ಅವಧಿಯಲ್ಲಿ ಸುವರ್ಣ ಸೌಧದ ಆವರಣದಲ್ಲಿ ಹಲವಾರು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಪ್ರತಿದಿನ ಅಂದಾಜು 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ಸುವರ್ಣ ವಿಧಾನಸೌಧದ ಸುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.
ಅಧಿವೇಶನಕ್ಕೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಎಲ್ಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಮಂಗಳವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಭೂಷಣ್ ಬೋರಸೆ, ಎಸ್ಪಿ ಡಾ. ಭೀಮಾಶಂಕರ ಗುಳೇದ್ ಮತ್ತು ಸಿಇಒ ರಾಹುಲ್ ಶಿಂಧೆ ಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ ಈಗಾಗಲೇ 3 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಮತ್ತೊಂದೆಡೆ, ನಾಡದ್ರೋಹಿ ಎಂದು ಪರಿಗಣಿಸಲಾಗಿರುವ ಎಂಇಎಸ್ ಸಂಸ್ಥೆಯು ನಡೆಸಲು ಯೋಜಿಸಿದ್ದ 'ಮಹಾಮೇಳಾವ್' ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.

