
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾರು ಚಾಲಕ ಬಸವಂತ ಕಡೋಲ್ಕರ್, ಮೃಣಾಲ್ ಹೆಬ್ಬಾಳ್ಕರ್ ಹಾಗೂ ಐಪಿಎಸ್ ಅಧಿಕಾರಿ ರವೀಂದ್ರ ಗಡಾದೆ.
ಸಚಿವೆ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ; ಪ್ರಾಣ ಉಳಿಸಿದ ಐಪಿಎಸ್ ಅಧಿಕಾರಿ
ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಆರೋಪಿಗಳಿಗೆ ಬಲೆ ಬೀಸಲಾಗಿದೆ. ಮೈನಿಂಗ್ ವಿಚಾರವಾಗಿ ಗಲಾಟೆ ನಡೆದಿರುವುದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಾರು ಚಾಲಕ ಬಸವಂತ ಕಡೋಲ್ಕರ್(32) ಅವರಿಗೆ ಚಾಕು ಇರಿತವಾಗಿರುವ ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದ್ದು, ಐಪಿಎಸ್ ಅಧಿಕಾರಿ ರವೀಂದ್ರ ಗಡಾದೆ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ.
ಮಂಗಳವಾರ(ಜ.6) ಮಧ್ಯಾಹ್ನ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಾರು ಚಾಲಕನಾಗಿರುವ ಬಸವಂತ ಕಡೋಲ್ಕರ್ ಕಾರು ನಿಲ್ಲಿಸಿ ಕೆಳಗೆ ನಿಂತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದು, ಎದೆ, ಭುಜ, ತೊಡೆ ಸೇರಿ ನಾಲ್ಕು ಕಡೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಆಸ್ಪತ್ರೆಗೆ ಸೇರಿಸಿದ ಐಪಿಎಸ್ ಅಧಿಕಾರಿ
ಬೆಳಗಾವಿ ವಿಭಾಗದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಘಟನೆ ವೇಳೆ ಮನೆಗೆ ಊಟಕ್ಕೆ ಹೋಗುತ್ತಿದ್ದರು. ಗಲಾಟೆ ನೋಡಿ ಸ್ಥಳಕ್ಕೆ ಹೋಗಿ ದುಷ್ಕರ್ಮಿಗಳಿಂದ ಬಸವಂತನ ಜೀವ ಉಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಆಸ್ಪತ್ರೆಗೆ ಡಿಸಿಪಿ, ಎಸಿಪಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಭೇಟಿ ನೀಡಿ ಚಾಲಕನ ಆರೋಗ್ಯ ವಿಚಾರಿಸಿದ್ದಾರೆ.
ಘಟನೆಗೆ ಕಾರಣವೇನು ?
"ಮೈನಿಂಗ್ ವಿಚಾರದಲ್ಲಿ ಗೋಜಗಾ ಗ್ರಾಮದ ಶಿವಾ ಪೂಜಾರಿ, ಪರಶುರಾಮ ಮತ್ತು ಮೋನಪ್ಪ ಪಾಟೀಲ್ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮೈನಿಂಗ್ ವಿಚಾರಕ್ಕೆ ಪದೇ ಪದೆ ನನ್ನೊಂದಿಗೆ ಜಗಳ ತೆಗೆಯುತ್ತಿದ್ದರು ಎಂದು ಹಲ್ಲೆಗೊಳಗಾದ ಬಸವಂತ ತಿಳಿಸಿದ್ದಾರೆ," ಎಂದು ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದಾನೆ.
ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಮೈನಿಂಗ್ ವಿಚಾರವಾಗಿ ಗಲಾಟೆ ನಡೆದಿರುವುದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

