
ಬೆಳಗಾವಿ ಗಡಿಯಲ್ಲಿ ಉದ್ವಿಗ್ನ: ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತ
ಬೆಳಗಾವಿಯಲ್ಲಿ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ನಡೆಸಲು ಉದ್ದೇಶಿಸಿದ್ದ 'ಮಹಾಮೇಳಾವ್'ಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿರುವ ಬೆನ್ನಲ್ಲೇ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನಾ ಕಾರ್ಯಕರ್ತರ ಪುಂಡಾಟಿಕೆ ಮಿತಿಮೀರಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗೆ ಶಿವಸೇನಾ ಕಾರ್ಯಕರ್ತರು ಬಲವಂತವಾಗಿ 'ಜೈ ಮಹಾರಾಷ್ಟ್ರ' ಎಂಬ ಸ್ಟಿಕ್ಕರ್ ಅಂಟಿಸಿ ದರ್ಪ ಮೆರೆದಿದ್ದಾರೆ. ಈ ಘಟನೆಯ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ಮಧ್ಯಾಹ್ನದಿಂದ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳುವ ಎಲ್ಲಾ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬೆಳಗಾವಿಯಲ್ಲಿ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ನಡೆಸಲು ಉದ್ದೇಶಿಸಿದ್ದ 'ಮಹಾಮೇಳಾವ್'ಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಇದರಿಂದ ಕೆರಳಿದ ಶಿವಸೇನಾ ಕಾರ್ಯಕರ್ತರು ಕೊಲ್ಹಾಪುರದಲ್ಲಿ ಕರ್ನಾಟಕದ ಬಸ್‌ಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಬಸ್ ಮೇಲೆ ಮಸಿ ಬಳಿದು, ಸ್ಟಿಕ್ಕರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ನಾಯಕರು ಬೆಳಗಾವಿ ಪ್ರವೇಶಿಸಲು ಯತ್ನಿಸುವ ಸಾಧ್ಯತೆ ಇರುವುದರಿಂದ, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. "ಬೆಳಗಾವಿಯಿಂದ ಕೊಲ್ಹಾಪುರ ಮತ್ತು ಮಹಾರಾಷ್ಟ್ರದ ಇತರೆಡೆಗಳಿಗೆ ತೆರಳಬೇಕಿದ್ದ ಬಸ್‌ಗಳನ್ನು ಸದ್ಯಕ್ಕೆ ನಿಪ್ಪಾಣಿಯವರೆಗೂ ಮಾತ್ರ ಓಡಿಸಲಾಗುತ್ತಿದೆ. ಅಲ್ಲಿಂದ ಅವು ವಾಪಸ್ ಆಗುತ್ತಿವೆ.

