ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ಮೊದಲೇ ಕಾಂಗ್ರೆಸ್-ಬಿಜೆಪಿ ಕ್ರೆಡಿಟ್ ವಾರ್
ಆಗ ಮಾಡದವರು ನಾವು ಮಾಡಿದ ಕೆಲಸದ ಲಾಭಕ್ಕೆ ಹವಣಿಸುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಟೀಕಿಸಿದ್ದಾರೆ. ಆರುವರೆ ದಶಕಗಳ ಹಿಂದಿನ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್ನ ಪಾಪದ ಕೂಸು ಎಂದು ಸಂಸದ ಬಿ.ವೈ. ರಾಘವೇಂದ್ರ ಜರಿದಿದ್ದಾರೆ.
ಶರಾವತಿ ಸಂತ್ರಸ್ತರ ಸಮಸ್ಯೆ ಸುಪ್ರೀಂ ಕೋರ್ಟಲ್ಲಿದೆ. ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಪ್ರಕರಣ ನ್ಯಾಯಾಲಯದ ಹಂತದಲ್ಲಿರುವಾಗಲೇ ಕ್ರೆಡಿಟ್ ಫೈಟ್ ನಡೆಯುತ್ತಿರುವುದು ಮಾತ್ರ ವಿಪರ್ಯಾಸ.
ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿ ಡಿನೋಟಿಫಿಕೇಷನ್ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇತ್ಯರ್ಥವಾಗುವ ಮುನ್ನವೇ ಅದರ ಕ್ರೆಡಿಟ್ಗಾಗಿ ಪೈಪೋಟಿ ಆರಂಭವಾಗಿದೆ. ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂತ್ರಸ್ತರ ಸಾಗುವಳಿ ಭೂಮಿಯ ಡಿನೋಟಿಫಿಕೇಷನ್ ರದ್ದಾಗಿತ್ತು. ನ್ಯಾಯಾಲಯದ ಈ ಆದೇಶ ಮುಂದಿಟ್ಟುಕೊಂಡು ಅಂದಿನ ಸರ್ಕಾರ ಈ ಸಂಬಂಧ ರಾಜ್ಯಪತ್ರವನ್ನೂ ಹೊರಡಿಸಿತ್ತು. ಅದಾದ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ವಿಷಯ ಪ್ರಮುಖವಾಗಿ ಚರ್ಚೆಯಾಗಿತ್ತು. ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲೆಯ ಎರಡು ವಿಧಾನ ಸಭೆ ಕ್ಷೇತ್ರಗಳ ಫಲಿತಾಂಶದ ಮೇಲೂ ಪರಿಣಾಮ ಬೀರಿತ್ತು.
ಮಧು ಬಂಗಾರಪ್ಪ ಭರವಸೆ
ವಿಧಾನಸಭೆ ಚುನಾವಣೆಗೂ ಮುನ್ನ ಶರಾವತಿ ಸಂತ್ರಸ್ತರೊಂದಿಗೆ ಪಾದಯಾತ್ರೆ ನಡೆಸಿದ್ದ ಮಧುಬಂಗಾರಪ್ಪ ಅವರು, ಸಿದ್ದರಾಮಯ್ಯ ಮತ್ತು ಡಿಕೆಶಿ ಜೋಡಿಯನ್ನು ಶಿವಮೊಗ್ಗಕ್ಕೆ ಕರೆಸಿ ಅಧಿಕಾರಕ್ಕೆ ಬಂದರೆ ಬೇಡಿಕೆ ಈಡೇರಿಸುವ ಭರವಸೆ ಕೊಡಿಸಿದ್ದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತಿದ್ದಂತೆ ಶರಾವತಿ ಸಂತ್ರಸ್ತರ ಭೂಮಿ ವಿಚಾರದಲ್ಲಿ ಸಚಿವ ಮಧುಬಂಗಾರಪ್ಪ ಹಲವು ಸಭೆಗಳನ್ನು ನಡೆಸಿದ್ದರು.
2017 ರಲ್ಲಿ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದ ಸಂದರ್ಭ ಮಾಡಿದ್ದ ಡಿನೋಟಿಫಿಕೇಷನ್ಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ರದ್ದು ಮಾಡಲಾಗಿತ್ತು. ಅಂದಿನ ಆ ಆದೇಶದ ವಿರುದ್ಧ ಈಗಿನ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಆರಂಭವಾಗಿದ್ದು, ಡಿ.3 ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಸುವಂತೆ ಸೂಚಿಸಿದ್ದ ನ್ಯಾಯಾಲಯ ವಿಚಾರಣೆಯನ್ನು ಜನವರಿ 21 ಕ್ಕೆ ಮುಂದೂಡಿತ್ತು. ಜನವರಿ 21 ರಂದು ಯಾವುದೇ ವಿಚಾರಣೆ ನಡೆಯದೆ ಮತ್ತೆ ಹದಿನೈದು ದಿನ ಮುಂದೂಡಿದೆ.
ಪೈಪೋಟಿ ಆರಂಭ
ಶರಾವತಿ ಸಂತ್ರಸ್ತರ ಪ್ರಕರಣ ಸುಪ್ರೀಂ ಕೋರ್ಟ್ ಮೇಟ್ಟಿಲೇರುತಿದ್ದಂತೆ ಕ್ರೆಡಿಟ್ ಪೈಪೋಟಿ ಆರಂಭವಾಗಿದೆ. ನ್ಯಾಯಾಲಯ ಅರ್ಜಿ ಕೈಗೆತ್ತಿಕೊಳ್ಳುತ್ತಿದ್ದಂತೆ ಜಾಗೃತರಾದ ಸಂಸದ ಬಿ.ವೈ.ರಾಘವೇಂದ್ರ ಅವರು, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಪ್ರಕರಣದ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನೂ ಭೇಟಿ ಮಾಡಿ ಕೇಂದ್ರ ಸರಕಾರದೊಂದಿಗಿನ ಸಮನ್ವಯತೆ ಕುರಿತು ಚರ್ಚೆ ನಡೆಸಿದ್ದಾರೆ.
ಶರಾವತಿ ಸಂತ್ರಸ್ತರು ನಿರ್ಣಾಯಕರಾಗಿರುವ ಸಾಗರ ವಿಧಾನ ಸಭೆಯನ್ನು ಪ್ರತಿನಿಧಿಸುವ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಈ ವಿಚಾರದಲ್ಲಿ ಸಂಸದರ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಸಂಸದ ರಾಘವೇಂದ್ರ ಅವರ ಪರಿಶ್ರಮದಿಂದ ಸಂತ್ರಸ್ತರ ಸಮಸ್ಯೆ ಒಂದು ಹಂತಕ್ಕೆ ಬಂದಿದೆ ಎಂದು ಪತ್ರಿಕಾ ಹೇಳಿಕೆಯನ್ನೂ ನೀಡಿದ್ದಾರೆ.
ಕೆರಳಿದ ಬಂಗಾರಪ್ಪ
ಬಿಜೆಪಿಯವರ ಈ ವರಸೆಗೆ ಕೆರಳಿರುವ ಸಚಿವ ಮಧು ಬಂಗಾರಪ್ಪ ಈ ಹಿಂದಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಜೆಪಿಯದ್ದೇ ಆಗಿದ್ದರೂ ಸಂತ್ರಸ್ತರ 9120 ಎಕರೆ ಸಾಗುವಳಿ ಭೂಮಿಯ ಡಿನೋಟಿಫಿಕೇಷನ್ ರದ್ದು ಮಾಡಲಾಗಿದೆ. ಅಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದ ಪ್ರಸ್ತಾವನೆಯೂ ಹಿಂದೆ ಬಂದಿತ್ತು. ಆಗ ಮಾಡದವರು ನಾವು ಮಾಡಿದ ಕೆಲಸದ ಲಾಭಕ್ಕೆ ಹವಣಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದಕ್ಕೆ ಮಾತಿನೇಟು ಕೊಟ್ಟಿರುವ ಸಂಸದ ರಾಘವೇಂದ್ರ ಅವರು ಆರುವರೆ ದಶಕಗಳ ಹಿಂದಿನ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್ನ ಪಾಪದ ಕೂಸು ಎಂದು ಜರಿದಿದ್ದಾರೆ.
ಸಮನ್ವಯತೆ ಬರಲಿ
ನಾಡಿಗೆ ಬೆಳಕು ನೀಡಲು ತಮ್ಮ ಬದುಕು ಕಳೆದುಕೊಂಡು ಕಾಡು ಮೇಡಲ್ಲಿ ಜೀವನ ಕಟ್ಟಿಕೊಂಡ ಶರಾವತಿ ಮುಳುಗಡೆ ಸಂತ್ರಸ್ತರು ಆರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕುದಾರಿಕೆ ಹೊಂದಿಲ್ಲ. ಧೀರ್ಘ ಕಾಲದ ಹೋರಾಟದ ಫಲವಾಗಿ ಈಗ ನ್ಯಾಯಾಲಯದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಒಂದು ಉತ್ತಮ ಸಮನ್ವಯತೆ ಉಂಟಾದಲ್ಲಿ ಮಾತ್ರ ಈ ಪ್ರಕರಣ ಗೆಲುವು ಸಾಧ್ಯ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸಿದರು ಎಂಬಂತೆ ತೀರ್ಪು ಬರುವ ಮುನ್ನವೇ ಕ್ರೆಡಿಟ್ ಫೈಟ್ ನಡೆಸುತ್ತಿರುವುದು ಸರಿಯಲ್ಲ. ಎಲ್ಲಾ ರಾಜಕೀಯ ಪಕ್ಷಗಳ ತಪ್ಪಿನಿಂದಾಗಿ ಶರಾವತಿ ಸಂತ್ರಸ್ತರು ಬದುಕು ಅನಿಶ್ಚಿತತೆಯಲ್ಲಿದೆ. ಎರಡೂ ಪಕ್ಷಗಳ ಜನಪ್ರತಿನಿಧಿಗಳು ಪರಸ್ಪರ ಆರೋಪ ಮಾಡುವುದನ್ನು ನಿಲ್ಲಿಸಬೇಕಿದೆ ಎನ್ನತ್ತಾರೆ ರಾಜ್ಯ ರೈತ ಸಂಘದ ಹಿರಿಯ ಹೋರಾಟಗಾರ ಶಿವಾನಂದ ಕುಗ್ವೆ ಅವರು.
ನಾವು ಹಿರೇ ಭಾಸ್ಕರ ಮತ್ತು ಶರಾವತಿ ಎರಡೂ ಮುಳುಗಡೆಯಿಂದ ನಷ್ಟ ಅನುಭವಿಸಿದ್ದೇವೆ. ಈಗ ಪ್ರಕರಣ ನ್ಯಾಯಾಲಯದಲ್ಲಿದೆ. ಕೇಂದ್ರ ಸರ್ಕಾರವೂ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡಬೇಕಿದೆ. ಇಂತಹ ಸನ್ನಿವೇಶದಲ್ಲಿ ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳ ಮಟ್ಟದಲ್ಲಿ ಸಮನ್ವಯತೆ ಅಗತ್ಯವಿದೆ. ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕೊಡುವುದು ಸರಕಾರಗಳ ಕರ್ತವ್ಯ ಈ ವಿಚಾರದಲ್ಲಿ ರಾಜಕೀಯ ಲಾಭಕ್ಕೆ ಹವಣಿಸುವುದು ನಾಚಿಕೆಗೇಡು ಎನ್ನುತ್ತಾರೆ ರೈತ ಮುಖಂಡ ವಸಂತಕುಮಾರ್.
ಈ ಬಗ್ಗೆ ಪ್ರತಿಕ್ರಿಯಿಸಿದ ಶರಾವತಿ ಸಂತ್ರಸ್ತರಾದ ಶಿವಪ್ಪ ಅವರು, ಆರುವರೆ ದಶಕಗಳ ನರಕಯಾತನೆ ಸಾಕಾಗಿದೆ. ನಾಡಿಗೆ ಬೆಳಕು ಕೊಟ್ಟು ನಮ್ಮ ಬದುಕು ಕತ್ತಲೆಯಲ್ಲಿದೆ.ಸಂತ್ರಸ್ತರ ಪರವಾಗಿ ಯಾರು ಕೆಲಸ ಮಾಡಿದರೂ ಸಂತೋಷವೇ. ನ್ಯಾಯಾಲಯವೇ ಈ ಕಗ್ಗಂಟು ಬಿಡಿಸಬೇಕಿದೆ. ಸಚಿವರ ಪ್ರಯತ್ನ ಪ್ರಶಂಸನೀಯವಾದುದಾಗಿದೆ. ಕೇಂದ್ರ ಮಟ್ಟದಲ್ಲಿ ಸಂಸದರೂ ಪ್ರಯತ್ನ ಶೀಲರಾಗಿದ್ದಾರೆ. ಅವರ ಪಕ್ಷ ರಾಜ್ಯದಲ್ಲಿದ್ದಾಗ ಆದ ಅನ್ಯಾಯವನ್ನು ಸರಿಪಡಿಸುವ ಹೊಣೆಗಾರಿಕೆ ಅವರ ಮೇಲಿದೆ. ಒಟ್ಟಿನಲ್ಲಿ ಎಲ್ಲರೂ ಕೂಡಿ ನಮ್ಮ ಭೂಮಿಯನ್ನು ನಮಗೆ ಉಳಿಸಿಕೊಡಲಿ ಎಂದರು.
ಏನಿದು ಪ್ರಕರಣ?
1950 ರದಶಕದಲ್ಲಿ ನಾಡಿಗೆ ಬೆಳಕು ನೀಡುವ ಉದ್ದೇಶದಿಂದ ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಮಾಡಲಾಯಿತು. ಅಂದು ಲಿಂಗನಮಕ್ಕಿ ಡ್ಯಾಮಿನ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಸಂತ್ರಸ್ತರಿಗೆ 9120 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಆಗಿನ ಸರಕಾರಗಳು ಅರಣ್ಯ ಇಲಾಖೆಯಿಂದ ಬಿಡುಗಡೆಯಾದ ಭೂಮಿಯ ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಸ್ಥಿರೀಕರಿಸಿರಲಿಲ್ಲ. ಬದಲಾದ ಅರಣ್ಯ ಕಾನೂನು ಮತ್ತು ಇಂಡೀಕರಣದ ಸಮಯದಲ್ಲಿ ಸರ್ಕಾರವೇ ಮಂಜೂರು ಮಾಡಿದ್ದ ರೈತರ ಸಾಗುವಳಿ ಭೂಮಿ ಅರಣ್ಯ ಎಂದು ದಾಖಲಾಗಿತ್ತು. ಈ ಸಮಸ್ಯೆ ಮನಗಂಡ ಸಿದ್ದರಾಮಯ್ಯರ 2013 ರ ಸರಕಾರದಲ್ಲಿ ಡಿನೋಟಿಫಿಕೇಷನ್ ಮಾಡಲಾಗಿತ್ತು. ಈ ಪ್ರಕ್ರಿಯೆಯನ್ನು ಸಮಾಜ ಪರಿವರ್ತನಾ ಸಂಸ್ಥೆಯ ಗಿರೀಶ್ ಆಚಾರ್ಯ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ಅರಣ್ಯ ಸಂರಕ್ಷಣಾ ಕಾಯಿದೆ ಪ್ರಕಾರ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ಮಾಡುವಾಗ ಕೇಂದ್ರದ ಪೂರ್ವಾನುಮತಿ ಪಡೆದಿಲ್ಲ ಎಂಬ ಆಕ್ಷೇಪಣೆಯನ್ನು ಎತ್ತಿ ಹಿಡಿದಿದ್ದ ನ್ಯಾಯಾಲಯ ಇಡೀ ಇಡೀ ಡಿನೋಟಿಫಿಕೇಷನ್ ಪ್ರಕರಣಗಳನ್ನು ರದ್ದು ಮಾಡಿತ್ತು.