ಸಿದ್ದರಾಮಯ್ಯ ಆಪ್ತ ಆರ್.ವಿ. ದೇಶಪಾಂಡೆ ʼಸಿಎಂ ಆಸೆʼ| ಡಿಕೆಶಿಗೆ ನಿರಾಸೆ ತರಿಸುವ ಮತ್ತೊಂದು ಯತ್ನವೇ?
x
ಸಂಗ್ರಹ ಚಿತ್ರ

ಸಿದ್ದರಾಮಯ್ಯ ಆಪ್ತ ಆರ್.ವಿ. ದೇಶಪಾಂಡೆ ʼಸಿಎಂ ಆಸೆʼ| ಡಿಕೆಶಿಗೆ ನಿರಾಸೆ ತರಿಸುವ ಮತ್ತೊಂದು ಯತ್ನವೇ?

ಸಿದ್ದರಾಮಯ್ಯ ಅವರ ಆಪ್ತರೇ ಆಗಿರುವ ಹಿರಿಯ ನಾಯಕ ಆರ್‌.ವಿ. ದೇಶಪಾಂಡೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿರುವುದು ಅವರ ನಿಜವಾದ ಆಸೆಯೇ ಅಥವಾ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ರಕ್ಷಿಸಿ, ಡಿ.ಕೆ. ಶಿವಕುಮಾರ್‌ ಅವರನ್ನು ಮತ್ತೆ ರಾಜಕೀಯವಾಗಿ ಹಿಂದಕ್ಕೆ ತಳ್ಳುವ ಯತ್ನವೇ ಎಂಬ ಚರ್ಚೆ ನಡೆದಿದೆ.


ಮುಡಾ ಪ್ರಕರಣ ಬಳಿಕ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಸಮ್ಮತಿ ನೀಡಿದ್ದು, ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಪರವಾಗಿ ಪಕ್ಷ, ಮುಖಂಡರಾದಿಯಾಗಿ ಬೆಂಬಲ ಹೆಚ್ಚಿದೆ. ಜತೆಗೆ, "ಮುಂದಿನ ಸಿಎಂ" ಪ್ರಶ್ನೆ ಸದ್ಯಕ್ಕೆ ತಣ್ಣಗಾಗಿದೆ.

ಆದರೂ, ಸಿಎಂ ಸ್ಥಾನದತ್ತ ಸದಾ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಆಸೆಗೆ ತಣ್ಣೀರೆರಚುವ ಕಾರ್ಯ ಸಿದ್ದರಾಮಯ್ಯ ಆಪ್ತರ ಕಡೆಯಿಂದ ಸದಾ ನಡೆಯುತ್ತಲೇ ಇದೆ. ಈ ಹಿಂದೆ, ಸತೀಶ್‌ ಜಾರಕಿಹೊಳಿ, ಎಂ.ಬಿ. ಪಾಟೀಲ್‌ ಮತ್ತಿತರರು ಹಾಗೂ ಇತ್ತೀಚೆಗೆ ಸಿದ್ದರಾಮಯ್ಯ ಬಣದಲ್ಲಿರುವ ಡಾ. ಜಿ. ಪರಮೇಶ್ವರ ಅವರೂ ಎಂ ಆಗುವ ಹಂಬಲ ವ್ಯಕ್ತಪಡಿಸಿ ಡಿ.ಕೆ. ಶಿವಕುಮಾರ್‌ ಅವರ ಆಸೆಗೆ ವಿಘ್ನ ತರುತ್ತಿದ್ದರು. ಜತೆಗೆ, ಜಾತಿವಾರು ಡಿಸಿಎಂ ಸ್ಥಾನ ಕಲ್ಪಿಸಬೇಕೆಂಬ ಕೂಗು ಎಬ್ಬಿಸಿ ಡಿಕೆಶಿ ಅವರ ಆಸೆಗೆ ಮತ್ತೆ ಮತ್ತೆ ಭಂಗ ತಂದು, ತಮ್ಮ ಡಿಸಿಎಂ ಸ್ಥಾನವನ್ನು ಆಬಾಧಿತವಾಗಿ ಉಳಿಸಲು ಪ್ರಯತ್ನಿಸುವಂತೆ ಮಾಡಿತ್ತು.

ಈಗ ಸಿದ್ದರಾಮಯ್ಯ ಅವರ ಆಪ್ತರೇ ಆಗಿರುವ ಹಿರಿಯ ನಾಯಕ ಆರ್‌.ವಿ. ದೇಶಪಾಂಡೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿರುವುದು ಅವರ ನಿಜವಾದ ಆಸೆಯೇ ಅಥವಾ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ರಕ್ಷಿಸಿ, ಡಿ.ಕೆ. ಶಿವಕುಮಾರ್‌ ಅವರನ್ನು ಮತ್ತೆ ರಾಜಕೀಯವಾಗಿ ಹಿಂದಕ್ಕೆ ತಳ್ಳುವ ಯತ್ನವೇ ಎಂಬ ಚರ್ಚೆ ನಡೆಯುವಂತಹ ವಾತಾವರಣ ಸೃಷ್ಟಿಸಿದೆ. ಜತೆಗೆ ಆರ್‌.ವಿ. ದೇಶಪಾಂಡೆ ಅವರ ಮಾತು ಡಿ.ಕೆ. ಶಿವಕುಮಾರ್‌ ಅವರನ್ನು ಕೆರಳಿಸಿ "ಸಿದ್ದರಾಮಯ್ಯನವರೇ ಸಿಎಂ. ಹಾಗೂ ಮುಡಾ ಹಗರಣದಲ್ಲಿ ಕೋರ್ಟ್‌ ಯಾವುದೇ ತೀರ್ಪು ನೀಡಿದರೂ, ಸಿದ್ದರಾಮಯ್ಯ ಅವರ ಸ್ಥಾನ ಅಬಾಧಿತ " ಎಂಬರ್ಥದ ಹೇಳಿಕೆ ನೀಡುವಂತೆ ಪ್ರೇರೇಪಿಸಿತು. ಆ ಮೂಲಕ ಅನಿವಾರ್ಯವಾಗಿ ಸಿದ್ದರಾಮಯ್ಯ ಅವರನ್ನು ಮತ್ತೆ ಮತ್ತೆ ಬೆಂಬಲಿಸುವಂತೆ ಮಾಡುವಲ್ಲಿ ದೇಶಪಾಂಡೆ ಹೇಳಿಕೆ ಸಫಲವಾಯಿತು ಎಂದು ಕಾಂಗ್ರೆಸ್‌ ಹಿರಿಯ ಮುಖಂಡರೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ಹೇಳಿದ್ದಾರೆ.

ಹಿನ್ನೆಲೆ

"ನಾನು ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರು ಮುಖ್ಯಮಂತ್ರಿ ಆಗಬೇಕು ಅಷ್ಟೆ," ಎಂದು ಆಸೆ ವ್ಯಕ್ತಪಡಿಸಿದವರು ಮಾಜಿ ಕೆಪಿಸಿಸಿ ಅಧ್ಯಕ್ಷ ಆರ್‌.ವಿ. ದೇಶಪಾಂಡೆ ಅವರು. ಜನತಾ ದಳ ಮತ್ತು ಕಾಂಗ್ರೆಸ್‌ ಸರ್ಕಾರಗಳಲ್ಲಿ ಸಚಿವರಾಗಿದ್ದ ದೇಶಪಾಂಡೆ ಅವರು ಸಿದ್ದರಾಮಯ್ಯ ಸ್ನೇಹಿತರೂ ಕೂಡಾ. ಈಗ ಅವರು ಸಾರ್ವಿಜನಿಕವಾಗಿ ವ್ಯಕ್ತಪಡಿಸಿದ ಆಸೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರ ಮೊದಲ ಅವಧಿಯ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ದೇಶಪಾಂಡೆ ಹಿಂದಿನಿಂದಲೂ ಸತತವಾಗಿ ಸಚಿವರಾಗುತ್ತಲೇ ಇದ್ದವರು. ಆದರೆ, ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಸಚಿವ ವಯಸ್ಸು ಮತ್ತು ಹೊಸಬರಿಗೆ ಅವಕಾಶ ನೀಡಬೇಕೆನ್ನುವ ಕಾರಣಕ್ಕೆ ಸಚಿವ ಸ್ಥಾನದಿಂದ ವಂಚಿತರಾದರು.

ಸಿದ್ದರಾಮಯ್ಯ ಅವರ ಆಪ್ತರಾಗಿರುವ ದೇಶಪಾಂಡೆ, ಬಿ.ಆರ್‌. ಪಾಟೀಲ್‌, ಬಸವರಾಜ ರಾಯರೆಡ್ಡಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಾಗ ಆ ಮೂವರಿಗೂ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ನೀಡಿದ್ದರು ಸಿದ್ದರಾಮಯ್ಯ. ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ಹಾಗೂ ಆಳಂದ ಶಾಸಕ ಬಿ. ಆರ್. ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ "ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ" ಎಂದ ದೇಶಪಾಂಡೆ ಮಾಧ್ಯಮ ಪ್ರೇರಿತ ಪ್ರಶ್ನೆಗೆ ಉತ್ತರಿಸಿ ಸಿಎಂ ಆಗುವ ಆಸೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು. "ನನಗೆ ಆಸೆ ಇದೆ, ನಿಮ್ಮಂತ ಜನರಿಗೂ ಆಸೆ ಇದೆ. ಜೀವನದಲ್ಲಿ ಮಹತ್ವಕಾಂಕ್ಷೆ ಇರಬೇಕು. ನಾನು ಸಿದ್ದರಾಮಯ್ಯಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಕೂಡ, ಸಿದ್ದರಾಮಯ್ಯ ಅನುಮತಿ ಕೊಡಬೇಕು. ನಾನು ಸಿದ್ದರಾಮಯ್ಯಗೆ ಒಳ್ಳೆಯ ಸ್ನೇಹಿತ, 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರುತ್ತಾರೆ. ಸದ್ಯ ಸಿಎಂ ಬದಲಾವಣೆ ಕುರಿತು ನ‌ನಗೆ ಗೊತ್ತಿಲ್ಲದೆ ಯಾವ ಚರ್ಚೆ ನಡೆಯಲು ಸಾಧ್ಯ ಇಲ್ಲ" ಎಂದು ಸಮಜಾಯಿಷಿ ನೀಡಿದರು.

ಡಿಕೆಶಿ ಸ್ಪಷ್ಟನೆ

ಮುಖ್ಯಮಂತ್ರಿ ಕುರ್ಚಿ ಖಾಲಿ ಯಿಲ್ಲ. ಇದ್ದಿದ್ದರೆ ಮಾತನಾಡಬಹುದಿತ್ತು. ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೋಮವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

"ಹಿರಿಯರಾದ ಆರ್‌.ವಿ. ದೇಶಪಾಂಡೆ ಆಸೆ ಪಡುವುದು ತಪ್ಪಲ್ಲ. ಆದರೆ ಮಾಧ್ಯಮಗಳ ಮುಂದೆ ಮಾತನಾಡಬಾರದಿತ್ತು. ಹಿರಿಯರಾದ ಅವರಿಗೆ ಏನು ಗೌರವ ನೀಡಬೇಕೋ ಅದನ್ನು ನೀಡೋಣ," ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ.

ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ವಿರುದ್ಧವಾಗಿ ತೀರ್ಪು ಬಂದರೆ ಮುಂದಿನ ನಡೆ ಏನು ಎಂದು ಕೇಳಿದಾಗ, ಯಾವ ವ್ಯತಿರಿಕ್ತವೂ ಆಗುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಕೆಲಸ ಮಾಡುತ್ತಾರೆ ಎಂದೂ ಅವರು ಹೇಳಿದ್ದಾರೆ.

ಜಮೀರ್‌ ಆಸೆ

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ದೇಶಪಾಂಡೆ ಅವರ ಹೇಳಿಕೆ ಬಳಿಕ ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಸಚಿವ ಜಮೀರ್‌ ಆಹ್ಮದ್‌ , "ನನಗೂ ಮುಖ್ಯಮಂತ್ರಿ ಆಗುವ ಆಸೆಯಿದೆ. ಆದರೆ ಸದ್ಯ ಕುರ್ಚಿ ಖಾಲಿ ಇಲ್ಲ," ಎಂದು ಹೇಳಿದ್ದಾರೆ." ಹಿರಿಯ ಮುಖಂಡ ಆರ್‌.ವಿ. ದೇಶಪಾಂಡೆ ಮುಖ್ಯಮಂತ್ರಿ ಆಗುವುದಾಗಿ ಹೇಳಿದ್ದು ಸಹಜ. ಅವರ ಆಸೆಯಲ್ಲಿ ತಪ್ಪೇನಿಲ್ಲ. 8-9 ಬಾರಿ ಶಾಸಕರಾಗಿದ್ದಾರೆ, ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಸಚಿವರಾಗಿ ಅನುಭವ ಹೊಂದಿದ್ದಾರೆ. ಇದೀಗ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ವ್ಯಕ್ತಪಡಿಸಿದ್ದಾರೆ. ಎರಡೂವರೆ ವರ್ಷಕ್ಕೆ ಸಿಎಂ ಸಿದ್ದರಾಮಯ್ಯ ಬದಲಾಗುತ್ತಾರೆ ಎಂದು ಹೇಳಿದವರಾರು? ರಾಹುಲ್‌ ಗಾಂಧಿ ಹೇಳಿದ್ದಾರೆಯೇ? ಸ್ವತಃ ಡಿಕೆಶಿ ಅವರೇ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ" ಎಂದಿದ್ದಾರೆ.

Read More
Next Story