ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು; ಶಾಸಕ ಸಿ.ಕೆ. ರಾಮಮೂರ್ತಿಗೆ ಡಿಸಿಎಂ ಖಡಕ್‌ ವಾರ್ನಿಂಗ್‌
x

ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು; ಶಾಸಕ ಸಿ.ಕೆ. ರಾಮಮೂರ್ತಿಗೆ ಡಿಸಿಎಂ ಖಡಕ್‌ ವಾರ್ನಿಂಗ್‌

ಸಂಸದ ತೇಜಸ್ವಿ ಸೂರ್ಯ ಅವರು ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದಿರುವ ಕುರಿತು ಪ್ರಸ್ತಾಪಿಸಿದಾಗ ಡಿ.ಕೆ. ಶಿವಕುಮಾರ್‌ ಅವರು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡರು.


ʼನನ್ನ ಬಳಿ ತಗ್ಗಿ ಬಗ್ಗಿ ಇರಬೇಕು. ಬೇರೆಯವರ ಜೊತೆಗಿದ್ದಂತೆ ಇದ್ದರೆ ಆಗುವುದಿಲ್ಲʼ... ಹೀಗೆ ಖಡಕ್‌ ವಾರ್ನಿಂಗ್‌ ನೀಡಿದವರು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು.

ಬುಧವಾರ ಮಾದಾವರದವರೆಗೆ ಮೆಟ್ರೋ ರೈಲು ಪ್ರಯಾಣಕ್ಕೆ ಪ್ರಾಯೋಗಿಕ ಚಾಲನೆ ನೀಡಿದ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಎದುರೇ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ವಿರುದ್ಧ ಅವರು ಮೇಲಿನಂತೆ ಕಿಡಿಕಾರಿದರು.

ಸಂಸದ ತೇಜಸ್ವಿ ಸೂರ್ಯ ಅವರು ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದಿರುವ ಕುರಿತು ಪ್ರಸ್ತಾಪಿಸಿದಾಗ ಡಿ.ಕೆ. ಶಿವಕುಮಾರ್‌ ಜಯನಗರ ಶಾಸಕರ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡರು.

ʼಶಾಸಕ ಸಿ.ಕೆ ರಾಮಮೂರ್ತಿ ಅವರ ಮಾತು ಹೆಚ್ಚಾಗಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು ಅಭಿವೃದ್ಧಿ ಅಧೋಗತಿಗೆ ಇಳಿದಿದೆ ಎಂದು ಟೀಕಿಸಿದ್ದಾರೆ. ಅದನ್ನು ಸಾಬೀತು ಮಾಡಲಿ, ಆ ಮೇಲೆ ಅನುದಾನ ಬಿಡುಗಡೆ ಕುರಿತು ಯೋಚಿಸೋಣ. ಈಗಾಗಲೇ ಆಸ್ಪತ್ರೆ ಕಿತ್ತುಹಾಕಿಸಿದ್ದೇನೆ, ನನ್ನ ಬಳಿ ತಗ್ಗಿ ಬಗ್ಗಿ ಇರಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ರಸ್ತೆ ಅಭಿವೃದ್ಧಿಗಾಗಿ ತಲಾ 10 ಕೋಟಿ ರೂ. ಮಂಜೂರು ಮಾಡಿ ಇತ್ತೀಚೆಗೆ ಡಿ.ಕೆ. ಶಿವಕುಮಾರ್‌ ಅವರು ಆದೇಶ ಹೊರಡಿಸಿದ್ದರು. ಆದರೆ, ಜಯನಗರ ಕ್ಷೇತ್ರಕ್ಕೆ ಅನುದಾನ ಮಂಜೂರು ಮಾಡಿರಲಿಲ್ಲ. ಈ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಅನುದಾನ ನೀಡದಿರುವ ನಿರ್ಧಾರವನ್ನು ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದರು.

ಜಯನಗರ ಕ್ಷೇತ್ರಕ್ಕೆ ಅನುದಾನ ತಡೆ ಹಿಡಿದ ವಿಚಾರವಾಗಿ ವಕೀಲ ಎಚ್ ಯೋಗೇಂದ್ರ ಎಂಬುವವರು ಡಿ.ಕೆ. ಶಿವಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು ಸಹ ನೀಡಿದ್ದರು.

ಮೆಟ್ರೋ ರೈಲು ಪ್ರಯಾಣಕ್ಕೆ ಚಾಲನೆ

ನಾಗಸಂದ್ರದಿಂದ ಮಾದಾವರವರೆಗಿನ 3.14ಕಿ.ಮೀ.ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು. ಈ ಮಾರ್ಗದಲ್ಲಿ ಮೆಟ್ರೋ ರೈಲು ಗುರುವಾರದಿಂದ(ನ.7) ಅಧಿಕೃತವಾಗಿ ಕಾರ್ಯಾರಂಭಿಸಲಿದೆ.

ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ಎರಡನೇ ಹಂತದ ಮೆಟ್ರೋ ಯೋಜನೆಯಡಿ ಹಸಿರು ಮಾರ್ಗವನ್ನು ವಿಸ್ತರಿಸಲಾಗಿದೆ.

ಮಾದಾವರದವರೆಗೆ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿ ಮೆಟ್ರೋ ರೈಲಿನಲ್ಲೇ ಡಿಸಿಎಂ ಪ್ರಯಾಣಿಸಿದರು.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ವಿಸ್ತರಿತ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಸದ್ಯದಲ್ಲೇ ಅಧಿಕೃತವಾಗಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಸ್ತರಿತ ಮಾರ್ಗದ 3.14 ಕಿ.ಮೀ ಸೇರಿ ಬೆಂಗಳೂರು ಮೆಟ್ರೋ 76.95 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಮೆಟ್ರೋ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಆದ್ಯತೆ ನೀಡಲಾಗುತ್ತಿದೆ. ಮುಂದಿನ ವರ್ಷ ಇನ್ನೂ 30 ಕಿ.ಮೀ ಮಾರ್ಗವನ್ನು ಸೇರ್ಪಡೆ ಮಾಡಲಾಗುವುದು. 2026ಕ್ಕೆ ಬೆಂಗಳೂರು ಮೆಟ್ರೋದ ಒಟ್ಟು ವ್ಯಾಪ್ತಿ 175 ಕಿ.ಮೀ ಆಗಲಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮೆಟ್ರೋ ಸೇವೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ನೆಲಮಂಗಲ ಶಾಸಕ ಎಂ.ಶ್ರೀನಿವಾಸ್, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಇತರರು ಇದ್ದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ನೆಲಮಂಗಲ ಶಾಸಕರೊಂದಿಗೆ ಮಾದಾವರವರಗೆ ಪ್ರಯಾಣಿಸಿ ಮೆಟ್ರೋ ರೈಲು ಸೇವೆಗೆ ಪ್ರಾಯೋಗಿಕ ಚಾಲನೆ ನೀಡಿದ್ದೇವೆ. ನಾಳೆಯಿಂದ ಸಾರ್ವಜನಿಕರು ಪ್ರಯಾಣಿಸಬಹುದು. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಂದು ಉದ್ಘಾಟನೆ ಮಾಡಿದ್ದೇವೆ ಎಂದರು.

298 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

ಅ.4 ರಂದು ರೈಲ್ವೆ ಸುರಕ್ಷತಾ ಆಯುಕ್ತರು ಸಂಚಾರಕ್ಕೆ ವಿಸ್ತರಿತ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಿ, ಮೆಟ್ರೋ ರೈಲು ಕಾರ್ಯಾರಂಭಕ್ಕೆ ಹಸಿರುನಿಶಾನೆ ತೋರಿದ್ದರು. ಆದರೆ, ಇಲ್ಲಿಯವರೆಗೂ ರೈಲು ಸಂಚಾರ ಆರಂಭವಾಗಿರಲಿಲ್ಲ. ಒಟ್ಟು 298 ಕೋಟಿ ರೂ. ವೆಚ್ಚದಲ್ಲಿ ವಿಸ್ತರಿತ ಮಾರ್ಗ ನಿರ್ಮಿಸಲಾಗಿದ್ದು, ಮಂಗಳವಾರವಷ್ಟೇ ಮೆಟ್ರೋ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾದಾವರವರೆಗೆ ಮೆಟ್ರೋ ರೈಲು ಸಂಚಾರಕ್ಕೆ ಪ್ರಯೋಗಿಕ ಚಾಲನೆ ನೀಡಲಾಗಿದೆ.

ಗುರುವಾರ (ಅ.7) ಬೆಳಿಗ್ಗೆ ಐದು ಗಂಟೆಯಿಂದ ರೈಲು ಸೇವೆ ಆರಂಭವಾಗಲಿದೆ. ಕಳೆದ ವರ್ಷ ನೇರಳೆ ಮಾರ್ಗದ ಬೈಯಪ್ಪನಹಳ್ಳಿಯಿಂದ ಕೆ.ಆರ್ ಪುರದವರೆಗೆ ಮೆಟ್ರೋ ರೈಲು ಸಂಚಾರಕ್ಕೆ ಯಾವುದೇ ಅಧಿಕೃತ ಕಾರ್ಯಕ್ರಮ ನಡೆಸದೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿತ್ತು.

Read More
Next Story