ಸಾವಿರ ಕೋಟಿ ಅಡಮಾನ ಸಾಲ | ಬಿಡಿಎ ವಿರುದ್ಧ ಚು.ಆಯೋಗಕ್ಕೆ ಸುರೇಶ್‌ ಕುಮಾರ್ ದೂರು
x
ಬಿಡಿಎ

ಸಾವಿರ ಕೋಟಿ ಅಡಮಾನ ಸಾಲ | ಬಿಡಿಎ ವಿರುದ್ಧ ಚು.ಆಯೋಗಕ್ಕೆ ಸುರೇಶ್‌ ಕುಮಾರ್ ದೂರು


ಲೋಕಸಭೆ ಚುನಾವಣೆ ಸಮಯದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅವರು ಆರೋಪಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಶಿವರಾಮ ಕಾರಂತ ಬಡಾವಣೆಯ ಗುತ್ತಿಗೆದಾರರ ಪಾವತಿಗಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲೆ ನಿವೇಶನಗಳನ್ನು ಒತ್ತೆ ಇಟ್ಟು 1000ದಿಂದ 2000 ಕೋಟಿ ರೂ. ಹಣ ಪಡೆಯಲು ಮುಂದಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಮಾದರಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಹೀಗಾಗಿ, ಈ ಪ್ರಕ್ರಿಯೆಯನ್ನು ಚುನಾವಣೆ ಪೂರ್ಣಗೊಳ್ಳುವವರೆಗೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯ 2500 ಮೂಲೆ ನಿವೇಶನಗಳನ್ನು ಬ್ಯಾಂಕಿನಲ್ಲಿ ಒತ್ತೆ ಇರಿಸಿ, 1000ರಿಂದ 2000 ಕೋಟಿ ರೂಪಾಯಿ ಹಣವನ್ನು ಕಾರಂತ ಬಡಾವಣೆಯ ಅಭಿವೃದ್ಧಿಗೆ ವ್ಯಯಿಸಲು ಪಡೆದುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ಸರ್ಕಾರಿ ಸಂಸ್ಥೆಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತನ್ನ ಹೊಸ ಬಡಾವಣೆಯಾದ ಶಿವರಾಮ ಕಾರಂತ ಬಡಾವಣೆಯ ಮೂಲಸೌಕರ್ಯ ಕಾಮಗಾರಿಗಳಿಗಾಗಿ ಮೂಲೆ ನಿವೇಶನಗಳನ್ನು ಅಡಮಾನವಿಟ್ಟು 1000 ದಿಂದ 2000 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ಬ್ಯಾಂಕಿನಲ್ಲಿ ಚುನಾವಣಾ ಸಮಯದಲ್ಲಿಯೇ ಪಡೆದುಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಮೊತ್ತದ ಹಣವನ್ನು ಚುನಾವಣಾ ಸಮಯದಲ್ಲೇ ತೆಗೆದುಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವು (ಕಾಂಗ್ರೆಸ್) ಮೂಲಸೌಕರ್ಯ ಕಾಮಗಾರಿಗಳನ್ನು ಮುಂದುವರಿಸಲು ಗುತ್ತಿಗೆದಾರರಿಗೆ ಪಾವತಿಯ ನೆಪ ಒಡ್ಡಿ ಚುನಾವಣಾ ಕಾರ್ಯಕ್ಕೆ ಬಳಸುವ ಉದ್ದೇಶದಿಂದ ವ್ಯವಸ್ಥಿತವಾಗಿ ಅಡ್ಡದಾರಿಯ ಮೂಲಕ ಹಣದ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದೆ ಎನ್ನುವ ಅನುಮಾನ ಮೂಡಿದೆ. ಹಾಗಾಗಿ, ಚುನಾವಣೆ ಮುಕ್ತಾಯವಾಗುವ ವರೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ರೀತಿಯ ಪಾವತಿಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Read More
Next Story