ಸೆಪ್ಟೆಂಬರ್ 15ರೊಳಗೆ ಬಿಬಿಎಂಪಿ ವಿಭಜನೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ: ಡಿಸಿಎಂ ಡಿ.ಕೆ. ಶಿವಕುಮಾರ್
x

ಸೆಪ್ಟೆಂಬರ್ 15ರೊಳಗೆ ಬಿಬಿಎಂಪಿ ವಿಭಜನೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿರುವ ಎಲ್ಲಾ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ನೋಂದಾಯಿತ 27,665 ಬೀದಿಬದಿ ವ್ಯಾಪಾರಿಗಳಿಗೆ ತಳ್ಳುವ ವಾಹನಗಳನ್ನು ನೀಡಲಾಗುತ್ತಿ ಎಂದು ಡಿಸಿಎಂ ತಿಳಿಸಿದರು.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಪ್ರಕ್ರಿಯೆಯು ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳ್ಳಲಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಜಿಎ) ರಚನೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ವಿರೋಧ ಪಕ್ಷದ ನಾಯಕರು ಹಾಗೂ ಇತರ ಶಾಸಕರೊಂದಿಗೆ ಚರ್ಚಿಸಿ, ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಶನಿವಾರ ವಿಧಾನಸೌಧದಲ್ಲಿ ನಡೆದ ಗ್ರೇಟರ್ ಬೆಂಗಳೂರು ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಮೇ 15ರಿಂದಲೇ ಬಿಬಿಎಂಪಿಯನ್ನು ಬಿಜಿಎ ಆಗಿ ಪರಿವರ್ತಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ಮುಂದಿನ 120 ದಿನಗಳಲ್ಲಿ ಹೊಸ ಪಾಲಿಕೆಗಳನ್ನು ರಚಿಸಬೇಕಿರುವುದರಿಂದ ಬೆಂಗಳೂರಿನ ಎಲ್ಲಾ ಶಾಸಕರಿಂದ ಸಲಹೆಗಳನ್ನು ಪಡೆಯಲಾಗಿದೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.

ಬೆಂಗಳೂರು ಅಭಿವೃದ್ಧಿಗೆ ಮಹತ್ವದ ಯೋಜನೆಗಳು

ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದರು. ಮಳೆಯಿಂದ ಮನೆಗಳಿಗೆ ನೀರು ನುಗ್ಗಿರುವವರಿಗೆ 10 ಸಾವಿರ ರೂ. ಪರಿಹಾರ ನೀಡಲಾಗುವುದು. ಮಳೆ ಪೀಡಿತ ಪ್ರದೇಶಗಳಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದ್ದು, ಅಗತ್ಯವಿರುವ ಬಜೆಟ್ ಅನ್ನು ಸರ್ಕಾರದಿಂದ ಒದಗಿಸಲಾಗುವುದು. ಟ್ಯಾಂಕರ್ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ದೂರು ಬಂದಿರುವ ಪ್ರದೇಶಗಳಲ್ಲಿ ಆಯಾ ಋತುವಿಗೆ ತಕ್ಕಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ಬೆಂಗಳೂರಿನಲ್ಲಿರುವ ಎಲ್ಲಾ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ನೋಂದಾಯಿತ 27,665 ಬೀದಿಬದಿ ವ್ಯಾಪಾರಿಗಳಿಗೆ ತಳ್ಳುವ ವಾಹನಗಳನ್ನು ನೀಡಲಾಗುತ್ತಿದ್ದು, ಅವರಿಗೆ ನಿಗದಿಪಡಿಸಿದ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಡಿಸಿಎಂ ತಿಳಿಸಿದರು. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ, ಶಾಸಕರ ಶಿಫಾರಸಿನ ಆಧಾರದ ಮೇಲೆ ಆಸ್ತಿ ಮಾಲೀಕರಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (Transferable Development Rights - TDR) ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು.

300 ಕಿ.ಮೀ ಉದ್ದದ ರಸ್ತೆ

ರಾಜಕಾಲುವೆಗಳ ಅಕ್ಕಪಕ್ಕದ ಬಫರ್ ವಲಯದಲ್ಲಿ ಸುಮಾರು 300 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಗುರುತಿಸಲಾಗಿದ್ದು, ಶಾಸಕರು ಕೂಡ ಸುಮಾರು 300 ಕಿ.ಮೀ ಉದ್ದದ ರಸ್ತೆಗಳನ್ನು ಮಾಡಲು ಶಿಫಾರಸು ಮಾಡಬಹುದು ಎಂದು ಅವರು ಹೇಳಿದರು. ಇನ್ನು ಮುಂದೆ, ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸೀವೇಜ್ ಮತ್ತು ನೀರಿನ ಕಾಲುವೆಗಳಲ್ಲಿ ಕಾನೂನುಬಾಹಿರವಾಗಿ ಎಳೆಯಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಕತ್ತರಿಸಲು ಸೂಚಿಸಲಾಗಿದೆ. ಚರಂಡಿಗಳಲ್ಲಿನ ಹೂಳನ್ನು ತೆಗೆಯಲು ಸಹ ಕ್ರಮ ಕೈಗೊಳ್ಳಲಾಗುವುದು. ನಗರದ 25 ಲಕ್ಷ ಆಸ್ತಿಗಳನ್ನು ಇ-ಖಾತಾ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ 5 ಲಕ್ಷ ಆಸ್ತಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ತೆರಿಗೆ ಮತ್ತು ಆಸ್ತಿ ದಾಖಲಾತಿಯಲ್ಲಿ ಪಾರದರ್ಶಕತೆ ತರುವುದೇ ಇದರ ಮುಖ್ಯ ಉದ್ದೇಶ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.

ಕೆಂಪೇಗೌಡ ಬಡಾವಣೆಯಲ್ಲಿ ಸ್ಕೈ ಡೆಕ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಿಂದೆ ವಿಮಾನ ನಿಲ್ದಾಣದಿಂದ 20 ಕಿ.ಮೀ ದೂರವಿರಬೇಕು ಎಂಬ ನಿಯಮದಿಂದಾಗಿ ಹೆಮ್ಮಿಗೆಪುರದಲ್ಲಿ ನಿರ್ಮಿಸಲು ಸಮಸ್ಯೆ ಎದುರಾಗಿತ್ತು. ರಸ್ತೆಗಳಲ್ಲಿ ನಿಲ್ಲಿಸಿರುವ ಹಳೆಯ ವಾಹನಗಳನ್ನು ಸಂಗ್ರಹಿಸಲು ಕಂದಾಯ ಇಲಾಖೆಯಿಂದ 100 ಎಕರೆ ಜಾಗ ಒದಗಿಸಿ, ಅಲ್ಲಿಗೆ ಸ್ಥಳಾಂತರಿಸಲು ಸಂಚಾರ ಪೊಲೀಸರಿಗೆ ಸೂಚಿಸಲಾಗಿದೆ. ಪಾಲಿಕೆ ಕಾನೂನಿನ ಪ್ರಕಾರ, 21 ದಿನಗಳ ಕಾಲ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಅನಾಥ ಎಂದು ಪರಿಗಣಿಸಿ ಹರಾಜು ಹಾಕುವ ಅವಕಾಶವಿದೆ ಎಂದು ಅವರು ತಿಳಿಸಿದರು. ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಸರ್ವೀಸ್ ರಸ್ತೆಗಳನ್ನು ಮುಖ್ಯ ರಸ್ತೆಯೊಂದಿಗೆ ವಿಲೀನಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದೂ ಡಿ.ಕೆ. ಶಿವಕುಮಾರ್ ಹೇಳಿದರು.

ಬಿಬಿಎಂಪಿ ವಿಭಜನೆ ಕುರಿತು ಬಿಜೆಪಿ ನಾಯಕರ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ, "ಅವರು ನಿಮ್ಮ ಮುಂದೆ ಏನು ಹೇಳುತ್ತಾರೋ ಗೊತ್ತಿಲ್ಲ. ಆದರೆ ನನ್ನ ಬಳಿ ಅವರು ಏನು ಹೇಳುತ್ತಾರೆಂದು ನನಗೆ ಮಾತ್ರ ಗೊತ್ತಿದೆ" ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು. ಸುರಂಗ ರಸ್ತೆ ಯೋಜನೆ ಅಸಾಧ್ಯ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, "ಈ ಯೋಜನೆಯ ಟೆಂಡರ್ ಬಂದಾಗ ಗೊತ್ತಾಗುತ್ತದೆ" ಎಂದು ಉತ್ತರಿಸಿದರು.

Read More
Next Story