
ಅನಧಿಕೃತ ಕಟ್ಟಡಗಳಿಗೆ ಬಿಬಿಎಂಪಿ ಶಾಕ್ ; ವಿದ್ಯುತ್ ಸಂಪರ್ಕ ಕಡಿತಕ್ಕೆ ಬೆಸ್ಕಾಂಗೆ ಸೂಚನೆ
ಅನಧಿಕೃತ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಾಯ್ದೆಯ ಕಲಂ 248(1), (2) ಮತ್ತು (3) ರಡಿಯಲ್ಲಿ ಆದೇಶವನ್ನು ಮತ್ತು ಕಲಂ 356(1) & (2) ರಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಾಠ ಕಲಿಸಲು ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂಗೆ ಬಿಬಿಎಂಪಿ ಸೂಚನೆ ನೀಡಿದೆ. 2024ರ ಡಿ. 17ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದನ್ವಯ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ತಿಳಿಸಿದೆ.
ಸುತ್ತೋಲೆಯಲ್ಲಿ ಏನಿದೆ?
ಅನಧಿಕೃತ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಾಯ್ದೆಯ ಕಲಂ 248(1), (2) ಮತ್ತು (3) ರಡಿಯಲ್ಲಿ ಆದೇಶವನ್ನು ಮತ್ತು ಕಲಂ 356(1) & (2) ರಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಇನ್ನು ಮುಂದೆ ಯಾವುದೇ ಅನಧಿಕೃತ ಕಟ್ಟಡದ ವಿರುದ್ಧ ಬಿಬಿಎಂಪಿ ಕಾಯ್ದೆ 2020ರ ಕಲಂ 248(3) ಅಡಿಯಲ್ಲಿ ಪಾಲಿಕೆಯಿಂದ ಆದೇಶ ಹೊರಡಿಸಿದ ತಕ್ಷಣ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ಅನಧಿಕೃತ ಕಟ್ಟಡಗಳಿಗೆ ತಾತ್ಕಾಲಿಕ/ಶಾಶ್ವತ ಸಂಪರ್ಕವನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇದರಿಂದ ಅನಧಿಕೃತ ನಿರ್ಮಾಣಗಳನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವ ಪೂರ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಬೇಕೆಂದು ಬೆಸ್ಕಾಂಗೆ ಬಿಬಿಎಂಪಿ ಸೂಚಿಸಿದೆ.
ಅನಧಿಕೃತ ಕಟ್ಟಡಗಳ ತಡೆಗೆ ಬಿಬಿಎಂಪಿ ಹೆಜ್ಜೆ
1. ಕಟ್ಟಡ ನಿರ್ಮಾಣ ಹಂತದಲ್ಲಿ/ಪೂರ್ವದಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಬೇಕಾದಲ್ಲಿ ಪಾಲಿಕೆಯಿಂದ ನೀಡಲಾಗಿರುವ ‘ಎ’ ಖಾತಾ ಹಾಗೂ ಅಂತಹ ಕಟ್ಟಡಗಳ ನಿರ್ಮಾಣಕ್ಕೆ ಪಾಲಿಕೆಯಿಂದ ನಕ್ಷೆ ಮಂಜೂರಾತಿ ನೀಡಿರುವುದನ್ನು ಬೆಸ್ಕಾಂ ಖಾತರಿಪಡಿಸಿಕೊಳ್ಳುಬೇಕು.
2. ಯಾವುದೇ ಕಟ್ಟಡಕ್ಕೆ ಬಿಬಿಎಂಪಿ ಕಾಯ್ದೆ 2020 ರ ಕಲಂ 248(3) ರಡಿಯಲ್ಲಿ ಆದೇಶ ಹೊರಡಿಸಿದ ನಂತರ ಕಟ್ಟಡಕ್ಕೆ ಶಾಶ್ವತ/ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು.
3. ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ಯಾವುದೇ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ಸಂಪರ್ಕ ನೀಡುವ ಪೂರ್ವದಲ್ಲಿ ಅಂತಹ ಕಟ್ಟಡಕ್ಕೆ ಪಾಲಿಕೆಯಿಂದ ಪೂರ್ಣತಾ ಪ್ರಮಾಣ ಪತ್ರ/ಸ್ವಾಧಿನಾನುಭವ ಪ್ರಮಾಣ ಪತ್ರ ನೀಡಲಾಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು.
4. ಪಾಲಿಕೆಯಿಂದ ನೀಡಿರುವ ನಕ್ಷೆ ಮಂಜೂರಾತಿಯ ಸಿಂಧುತ್ವ ಅವಧಿಯು ಮುಗಿದ ನಂತರ, ಅಂತಹ ಕಟ್ಟಡಕ್ಕೆ ತಾತ್ಕಾಲಿಕ ಸಂಪರ್ಕ ಮುಂದುವರೆಸಬೇಕಾದಲ್ಲಿ ಕಟ್ಟಡ ನಕ್ಷೆ ಮಂಜೂರಾತಿಯನ್ನು ಪಾಲಿಕೆಯಿಂದ ನವೀಕರಿಸಿರುವುದನ್ನು ದೃಡೀಕರಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.