
ಬಿಬಿಎಂಪಿ ಮೈದಾನದ ಗೇಟ್ ಬಿದ್ದು ಬಾಲಕ ಸಾವು: ಓರ್ವ ಅಧಿಕಾರಿ ಅಮಾನತು
ಬಿಬಿಎಂಪಿ ಮೈದಾನದ ಗೇಟ್ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಹಾಯಕ ಅಭಿಯಂತರ ಟಿ. ಶ್ರೀನಿವಾಸ ರಾಜು ಅವರನ್ನು ಅಮಾನತು ಮಾಡಿ ಬಿಬಿಎಂಪಿ ಅಡಳಿತ ವಿಭಾಗದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ ಮೈದಾನದ ಗೇಟ್ ಬಿದ್ದು ಬಾಲಕ ಸಾವು ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭಾಗದ ಬಿಬಿಎಂಪಿ ಸಹಾಯಕ ಅಭಿಯಂತರ ಟಿ.ಶ್ರೀನಿವಾಸ ರಾಜು ಅವರನ್ನು ಅಮಾನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಗೇಟ್‌ನ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸದಿರುವುದು, ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ ಆರೋಪದಡಿ ಟಿ.ಶ್ರೀನಿವಾಸ ರಾಜು ಅವರನ್ನು ಅಮಾನತು ಮಾಡಲಾಗಿದೆ.
2022ರಲ್ಲಿ ದತ್ತಾತ್ರೇಯ ವಾರ್ಡ್‌ನ ಎಇ ಆಗಿದ್ದ ಶ್ರೀನಿವಾಸ ರಾಜು, ಪ್ರಸ್ತುತ ರಾಜಾಜಿನಗರ ವಾರ್ಡ್‌ನ ಎಇ ಆಗಿದ್ದರು. ಘಟನೆ ಬಗ್ಗೆ ಮೂರು ದಿನಗಳಲ್ಲಿ ನೋಟಿಸ್‌ಗೆ ಸೂಕ್ತ ಉತ್ತರ ನೀಡುವಂತೆ ಇಇ ವೆಂಕಟೇಶ್‌ಗೆ ಸೂಚಿಸಲಾಗಿದೆ.
ದಿನೇಶ್ ಗುಂಡೂರಾವ್ ಸಾಂತ್ವನ
ಸೋಮವಾರ ಘಟನೆ ನಡೆದ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಾಲಕನ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಸಂಬಂಧಪಟ್ಟವರಿಂದ ವರದಿ ತರಿಸಿಕೊಳುತ್ತೇವೆ ಮತ್ತು ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು. ಬಿಬಿಎಂಪಿ ಐದು ಲಕ್ಷ ರೂ., ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಐದು ಲಕ್ಷ ರೂ. ಸೇರಿದಂತೆ ಒಟ್ಟು ನಿರಂಜನ ಕುಟುಂಬಕ್ಕೆ ದಿನೇಶ್ ಗುಂಡುರಾವ್ ಹತ್ತು ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಏನಿದು ಪ್ರಕರಣ?
ಆಟ ಆಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ 10 ವರ್ಷದ ಬಾಲಕ ನಿರಂಜನ್ ಮೇಲೆ ಗೇಟ್ ಬಿದ್ದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಮಗುವನ್ನು ಕೆ ಸಿ ಜನರಲ್ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ನಿರಂಜನ್ ಕೊನೆಯುಸಿರೆಳೆದಿದ್ದಾನೆ.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 10 ವರ್ಷದ ಬಾಲಕ ನಿರಂಜನ್ ಮೃತಪಟ್ಟಿದ್ದಾನೆ. ಗದಗ ಮೂಲದವರಾಗಿರುವ ಮೃತ ನಿರಂಜನ್ ಪೋಷಕರು ಬೆಂಗಳೂರಿನಲ್ಲಿ ಪ್ಯಾಲೇಸ್ ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಬಾಲಕನ ಕಣ್ಣುಗಳು ದಾನ
ಮೃತ ನಿರಂಜನ್ ಮಲ್ಲೇಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ. ತಂದೆ ವಿಜಯಕುಮಾರ್ ಆಟೋ ಚಾಲಕರಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ, ಮೃತ ನಿರಂಜನ್ನ ಎರಡು ಕಣ್ಣುಗಳನ್ನು ಅವರ ತಂದೆ ದಾನ ಮಾಡಿದ್ದಾರೆ. ಲಯನ್ಸ್ ಇಂಟರ್ ನ್ಯಾಷನಲ್ ಐ ಬ್ಯಾಂಕ್ಗೆ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಿಂದ ಮನೆಗೆ ಮೃತದೇಹವನ್ನ ಶಿಫ್ಟ್ ಮಾಡಲಾಗಿತ್ತು. ಬಿಬಿಎಂಪಿ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಆಗಿದ್ರೂ, ಈ ವರೆಗೂ ಮೃತ ಬಾಲಕನ ಕುಟುಂಬವನ್ನು ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನವನ್ನು ಹೇಳಿಲ್ಲ ಎನ್ನಲಾಗಿದೆ.