ಬಿಬಿಎಂಪಿ ಚುನಾವಣೆಗೆ ಗ್ರಹಣ: ಯಾವಾಗ ನಡೆಯಲಿದೆ ಬಿಬಿಎಂಪಿ ಚುನಾವಣೆ?
x
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ

ಬಿಬಿಎಂಪಿ ಚುನಾವಣೆಗೆ ಗ್ರಹಣ: ಯಾವಾಗ ನಡೆಯಲಿದೆ ಬಿಬಿಎಂಪಿ ಚುನಾವಣೆ?

ಕಳೆದ ನಾಲ್ಕೂವರೆ ವರ್ಷಗಳಿಂದ ಬಿಬಿಎಂಪಿ ಚುನಾವಣೆ ಮುಂದೂಡಿಕೆ ಆಗುತ್ತಲೇ ಇದೆ. ಬಿಬಿಎಂಪಿಯನ್ನು 7 ಮಹಾನಗರಪಾಲಿಕೆಗಳನ್ನಾಗಿ ವಿಭಜಿಸಿ ಗ್ರೇಟರ್ ಬೆಂಗಳೂರು ಮಾಡುವಂತೆ ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿ ಸರ್ಕಾರಕ್ಕೆ ಸಲಹೆ ಕೊಟ್ಟಿದೆ.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸದ್ಯಕ್ಕೆ ಚುನಾವಣೆ ನಡೆಯುವಂತಹ ಲಕ್ಷಣಗಳು ಕಂಡು ಬರುತ್ತಿಲ್ಲ. ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳು ಪರಸ್ಪರ ಒಬ್ಬರ ಮೇಲೆ ಒಬ್ಬರು ಬೆರಳು ತೋರಿಸುತ್ತ ಕಳೆದ ನಾಲ್ಕೂವರೆ ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದಾರೆ.

ಬಿಬಿಎಂಪಿ ಚುನಾವಣೆಗೆ ಕ್ಷೇತ್ರ ಪುನರ್ವಿಂಗಡಣೆ ಕಾರಣದಿಂದ ಹಿಡಿದಿರುವ ಗ್ರಹಣ ಈಗ ಗ್ರೇಟರ್ ಬೆಂಗಳೂರು ಮಸೂದೆ ಮಂಡನೆ ಆಗುವವರೆಗೆ ಬಿಟ್ಟಿಲ್ಲ. ಹೀಗಾಗಿ ಬಿಬಿಎಂಪಿ ಚುನಾವಣೆ ಯಾವಾಗ ಆಗಲಿದೆ ಎಂಬುದು ಬೆಂಗಳೂರಿಗರಿಗೆ ಯಕ್ಷಪ್ರಶ್ನೆ ಆದಂತಾಗಿದೆ.

ಈ ಬಗ್ಗೆ ದ ಫೆಡರಲ್‌ ಕರ್ನಾಟಕ ನಡೆಸಿದ ಚರ್ಚೆಯಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡಿಕೆ ಆಗುತ್ತಿರುವುದಕ್ಕೆ ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮೇಯರ್ ಪಿ.ಆರ್. ರಮೇಶ್ ಆರೋಪಿಸಿದ್ದಾರೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂದೂಡುತ್ತಿದೆ ಎಂದು ಬಿಜೆಪಿ ನಾಯಕ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನ ಜನರ ಹಿತಕ್ಕಿಂತ ತಮ್ಮ ರಾಜಕೀಯ ಮಾಡಿಕೊಳ್ಳುವುದಕ್ಕಾಗಿ ಹಾಗೂ ರಿಯಲ್ ಎಸ್ಟೇಟ್ ದಂಧೆ ಮಾಡಲು ಎರಡೂ ರಾಷ್ಟ್ರೀಯ ಪಕ್ಷಗಳು ಬೆಂಗಳೂರಿನ ಜನರಿಗೆ ಮೋಸ ಮಾಡುತ್ತಿವೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಹಾನಗರಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಎರಡೂ ಪಕ್ಷಗಳನ್ನು ತಿವಿದಿದ್ದಾರೆ. ಈ ಮೂವರು ಗಣ್ಯರು ‘ದ ಫೆಡರಲ್ ಕರ್ನಾಟಕ’ದ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಯದಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಬಿಬಿಎಂಪಿ ಅವಧಿ ಮುಗಿದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಆಗ ಚುನಾವಣೆ ನಡೆಸದೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಮುಂದಾಗಿದ್ದರಿಂದ ಈ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾಂಗ್ರೆಸ್ ಕಾರಣವಲ್ಲ. ಆದರೆ ಬೆಂಗಳೂರಿನ ಜನರಿಗೆ ಚುನಾವಣೆ ಮುಂದೂಡಿಕೆಯಿಂದ ಸಮಸ್ಯೆ ಆಗುತ್ತಿರುವುದು ನಿಜ ಎಂದು ಮಾಜಿ ಮೇಯರ್ ಪಿ.ಆರ್. ರಮೇಶ್ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್ ಕಾರ್ಪೊರೇಟರ್​ಗಳಾದ ಅಬ್ದುಲ್ ವಾಜೀದ್ ಹಾಗೂ ಶಿವರಾಜ ಅವರು ಕೋರ್ಟ್​ಗೆ ಹೋಗಿದ್ದರಿಂದ ಚುನಾವಣೆ ಮುಂದೂಡಿಕೆ ಆಗುತ್ತಿದೆ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರ ಸರ್ಕಾರವಿದೆ. ಚುನಾವಣೆ ನಡೆಸಲು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಕಾಂಗ್ರೆಸ್ ನಿಲುವನ್ನು ವಿರೋಧಿಸಿದ್ದಾರೆ.

ಈ ಮಧ್ಯೆ ಬೆಂಗಳೂರಿನ ಎಲ್ಲ ಶಾಸಕರಿಗೂ ಬಿಬಿಎಂಪಿ ಚುನಾವಣೆ ಆಗುವುದು ಬೇಡವಾಗಿದೆ. ಹೀಗಾಗಿ ಚುನಾವಣೆ ಮುಂದೂಡಿಕೆಗೆ ಎಲ್ಲರೂ ಒಂದಾಗಿದ್ದಾರೆ. ಇದನ್ನು ಆಮ್ ಆದ್ಮಿ ಪಾರ್ಟಿ ಖಂಡಿಸುತ್ತದೆ. ಜೊತೆಗೆ ಬಿಬಿಎಂಪಿ ಚುನಾವನೆಯನ್ನು ತಕ್ಷಣ ನಡೆಸಬೇಕು ಎಂದು ಆಪ್ನ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಆಗ್ರಹಿಸಿದ್ದಾರೆ. ಈ ಮಧ್ಯೆ ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿ ವರದಿಯೂ ಸಲ್ಲಿಕೆಯಾಗಿದೆ.

ಜುಲೈನಲ್ಲಿ ಬಿಬಿಎಂಪಿ ಚುನಾವಣೆ?

ಬೃಹತ್ ಬೆಂಗಳೂರು ಮಹಾನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ಕಾರ್ಪೊರೇಷನ್ ವಿಭಾಗಗಳನ್ನಾಗಿ ಮಾಡಲು ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿ ಸರ್ಕಾರಕ್ಕೆ ಸಲಹೆ ಕೊಟ್ಟಿದೆ. ಈ ಕುರಿತು ಫೆ. 25 ರಂದು ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ಸಮಿತಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ವರದಿ ಸಲ್ಲಿಸಿದೆ.

ಬೆಂಗಳೂರು ಕುರಿತು ಸತತ 5 ತಿಂಗಳ ಪ್ರಯತ್ನದಿಂದ ಸಮಿತಿಯ 20 ಸದಸ್ಯರ ನಡುವೆ ಅಧಿಕೃತ ಸಭೆ, ಸಮಾಲೋಚನೆಗಳನ್ನು ನಡೆಸಿ, ಸಂಘ ಸಂಸ್ಥೆಗಳು, ಸಾರ್ವಜನಿಕರು, ಆನ್ಲೈನ್, ಬ್ರ್ಯಾಂಡ್ ಬೆಂಗಳೂರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನು ತಯಾರಿಸಲಾಗಿದೆ. ವರದಿಯು ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಚರ್ಚೆಗೆ ಬರಲಿದ್ದು, ಮಸೂದೆ ಮಂಡನೆಯಾದ ನಂತರ ಅನುಷ್ಠಾನಗೊಳ್ಳಲಿದೆ ಎಂದು ವರದಿ ಸಲ್ಲಿಸಿದ ಬಳಿಕ ಶಾಸಕ ರಿಜ್ವಾನ್ ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಬೆಂಗಳೂರು ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. 3 ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸಲಹೆ ಮಾಡಲಾಗಿದೆ.

ಜೂನ್ 30 ರೊಳಗೆ ವಾರ್ಡ್​ಗಳ ಗಡಿ ಗುರುತಿಸಬೇಕಿದೆ. ಅಷ್ಟರೊಳಗೆ ಹೊಸ ಪಾಲಿಕೆ, ವಾರ್ಡ್​ಗಳ ರಚನೆ ಆಗಬೇಕು. ಬಳಿಕ ಮೀಸಲಾತಿ ನಿಗದಿಯಾಗಬೇಕು. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡರೆ ಬರುವ ಜುಲೈ ತಿಂಗಳಿನಲ್ಲಿಯೇ ಪಾಲಿಕೆ ಚುನಾವಣೆ ನಡೆಸಬಹುದು ಎಂದು ರಿಜ್ವಾನ್ ಅರ್ಷದ್ ವಿವರಿಸಿದ್ದಾರೆ.

ಆದರೆ ಇದಕ್ಕೆಲ್ಲ ಸರ್ಕಾರ ಸಮ್ಮಿತಿಯೂ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಜುಲೈನಲ್ಲಿ ಚುನಾವಣೆ ನಡೆಯಲಿದೆಯಾ? ಪ್ರಶ್ನೆ ಬೆಂಗಳೂರಿನ ಜನರದ್ದು.

ದ ಫೆಡರಲ್‌ ಕರ್ನಾಟಕ ನಡೆಸಿದ ಚರ್ಚೆಯ ವಿಡಿಯೋ ಇಲ್ಲಿದೆ..

Read More
Next Story