
BBMP Election: ಬಿಬಿಎಂಪಿ ಚುನಾವಣೆ: ಬಿಜೆಪಿಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ
BBMP Election: ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಮಾಜಿ ಮೇಯರ್‌ಗಳಾದ ಎಂ. ಗೌತಮ್, ಆರ್. ನಾರಾಯಣಸ್ವಾಮಿ, ಮಾಜಿ ಉಪ ಮೇಯರ್ ಎಸ್. ಹರೀಶ್ ಅವರ ಸಹಿಗಳಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಕೂಡಲೇ ಚುನಾವಣೆ ನಡೆಸಬೇಕೆಂದು ನಿರ್ದೇಶಿಸಲು ಕೋರಿ ರಾಜ್ಯ ಬಿಜೆಪಿ ಸುಪ್ರೀಂ ಕೋರ್ಟಿಗೆ ಸೋಮವಾರ ಅರ್ಜಿ ಸಲ್ಲಿಸಿದೆ.
ಬಿಬಿಎಂಪಿ ಚುನಾವಣೆ ನಡೆಸಲು ಕಾನೂನು ಹೋರಾಟ ನಡೆಸುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿಯು ಹಿರಿಯ ವಕೀಲ ಸಂದೀಪ್ ಪಾಟೀಲ ಮೂಲಕ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದೆ. ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಮಾಜಿ ಮೇಯರ್‌ಗಳಾದ ಎಂ. ಗೌತಮ್, ಆರ್. ನಾರಾಯಣಸ್ವಾಮಿ, ಮಾಜಿ ಉಪ ಮೇಯರ್ ಎಸ್. ಹರೀಶ್ ಅವರ ಸಹಿಗಳಿವೆ.
ಬಿಬಿಎಂಪಿ ಅಧಿಕಾರವಧಿ 2019ರ ಸೆಪ್ಟೆಂಬರ್ 10ರಂದು ಪೂರ್ಣಗೊಂಡಿತ್ತು. ಬಳಿಕ ಆರು ವಾರಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ 2020ರ ಡಿಸೆಂಬರ್ 18ರಂದು ಅಮಾನತಿನಲ್ಲಿ ಇರಿಸಿತ್ತು. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ– 2020ರಂತೆ 243 ವಾರ್ಡ್‌ಗಳ ಬದಲಿಗೆ, ಮೊದಲಿದ್ದ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.
ಅಭಿವೃದ್ಧಿ ಪಥದಲ್ಲಿರುವ ಬೆಂಗಳೂರು ನಗರದ ಸ್ಥಳೀಯ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಸಂಬಂಧ, ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲೆಂದೇ ನೂತನ ಕಾನೂನನ್ನು ಅಂಗೀಕರಿಸಲಾಗಿದೆ ಎಂದು ಹೇಳಲಾಗಿದೆ. ಕಾಯ್ದೆಯನ್ನು ರಿಟ್ ಅರ್ಜಿ ಮೂಲಕ ಪ್ರಶ್ನಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಯಾವುದೇ ರೀತಿಯ ಅಧಿಕಾರವಿಲ್ಲ ಎಂದೂ ಸರ್ಕಾರ ಹೇಳಿತ್ತು.
ವಾರ್ಡ್‌ಗಳ ಪುನರ್ ವಿಂಗಡಣೆ ಹಾಗೂ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಅಂತಿಮಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸುವಂತೆ ಕರ್ನಾಟಕ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮೇ 20ರಂದು ಸೂಚಿಸಿತ್ತು.