ಬಿಬಿಎಂಪಿ ಗುತ್ತಿಗೆ ಕಾಮಗಾರಿ ಹಂಚಿಕೆಯಲ್ಲಿ ಅಕ್ರಮ; ಡಿಸಿಎಂ ವಿರುದ್ಧ ರಾಜ್ಯಪಾಲರಿಗೆ ಶಾಸಕ ಮುನಿರತ್ನ ದೂರು
x

ಬಿಬಿಎಂಪಿ ಗುತ್ತಿಗೆ ಕಾಮಗಾರಿ ಹಂಚಿಕೆಯಲ್ಲಿ ಅಕ್ರಮ; ಡಿಸಿಎಂ ವಿರುದ್ಧ ರಾಜ್ಯಪಾಲರಿಗೆ ಶಾಸಕ ಮುನಿರತ್ನ ದೂರು

ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಶಾಸಕರಾಗಿರುವ ಮತ್ತು ಸಂಬಂಧಿಯೊಬ್ಬರ ಜೆ.ಎಂ.ಸಿ ಕನ್‌ಷ್ಟಕ್ಷನ್ಸ್ ಹೆಸರಿಗೆ ಹಾಗೂ ಇವರ ಜೊತೆಯಲ್ಲಿರುವ ಆಂಧ್ರ ಪ್ರದೇಶದ ಗುತ್ತಿಗೆದಾರರಿಗೆ 1768 ಕೋಟಿ ರೂಪಾಯಿಗಳ ಪ್ಯಾಕೆಜ್‌ನ ಕಾರ್ಯಾದೇಶವನ್ನು ನೀಡಲು ಡಿ. ಕೆ. ಶಿವಕುಮಾರ್ ಉದ್ದೇಶಿಸಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ.


ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ 2,000 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೇ 15ರಷ್ಟು ಕಮಿಷನ್‌ ಪಡೆದಿದ್ದಾರೆ’ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ

ದೂರು ಸಲ್ಲಿಸಿದ್ದಾರೆ.

ಭಾನುವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಖುದ್ದು ಭೇಟಿ ಮಾಡಿದ ಮುನಿರತ್ನ ಅವರು, ಬೆಂಗಳೂರು ನಗರಾ ಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ವಿರುದ್ದ ಕೆಲವು ದಾಖಲೆಗಳನ್ನು ಸಲ್ಲಿಸಿ ವಿಚಾರಣೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಿ ಅವರನ್ನು ತನಿಖೆಗೆ ಒಳಪಡಿಸಬೇಕು. ಬೃಹತ್ ಭ್ರಷ್ಟಾಚಾರದ ಪ್ರಕರಣವಾಗಿರುವುದರಿಂದ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ವಿವಿಧ ಕಾಮಗಾರಿಗಳ ಗುತ್ತಿಗೆ ನೀಡಲು ಟೆಂಡರ್‌ ಕರೆಯದೆ, ಪ್ರಕ್ರಿಯೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರ ಸಂಬಂಧಿಗಳಿಗೆ ಗುತ್ತಿಗೆ ನೀಡಲು ಮುಂದಾಗಿದ್ದು, ಡಿ.ಕೆ.ಶಿವಕುಮಾರ್‌ ಅವರ ಪರವಾಗಿ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್ ಗೌಡ ಗುತ್ತಿಗೆದಾರರಿಂದ ಶೇ 15ರಷ್ಟು ಕಮಿಷನ್‌ ಪಡೆದಿದ್ದಾರೆ ಎಂದು ದೂರಿದ್ದಾರೆ.

‘ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಗುತ್ತಿಗೆದಾರರ ಬಿಡ್‌ಗಳನ್ನು ಅನಗತ್ಯವಾಗಿ ತಿರಸ್ಕರಿಸುತ್ತಿದ್ದಾರೆ. ಕೆಲವು ಕಾಮಗಾರಿಗಳಲ್ಲಿ ತಮ್ಮದೇ ಬೇನಾಮಿ ಕಂಪನಿಗಳ ಮೂಲಕ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಗುತ್ತಿಗೆ ಪಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸ್ಟಾರ್‌ ಚಂದ್ರು ಅವರ ಸ್ಟಾರ್‌ ಬಿಲ್ಡರ್ಸ್‌ಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 232 ಕೋಟಿ ರೂ. ಮೊತ್ತದ ಕಾಮಗಾರಿಗಳ ಗುತ್ತಿಗೆ ನೀಡಿದ್ದಾರೆ. ಈ ಎಲ್ಲ ಅಕ್ರಮಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಬೇಕು’ ಎಂದು ಕೋರಿದ್ದಾರೆ.

ಶಿವಕುಮಾರ್ ಭ್ರಷ್ಟಾಚಾರದ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ಬೆಂಗಳೂರು ನಗರಕ್ಕೆ ಎರಡು ಸಾವಿರ ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ವಿಶ್ವಬ್ಯಾಂಕ್‌ನಿಂದ ಸಾಲ ರೂಪದಲ್ಲಿ 1700 ಕೋಟಿ ರೂ. ಪಡೆಯಲಾಗಿದೆ ಮತ್ತು ಸಾರ್ವಜನಿಕಯ 300 ಕೋಟಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಾಸಕ ಎಸ್‌.ಟಿ.ಸೋಮಶೇಖರ್‌ ಬಿಜೆಪಿಯ ಶಾಸಕರಾಗಿದ್ದರೂ ಕಾಂಗ್ರೆಸ್‌ನ ಶಾಸಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕ್ಷೇತ್ರದ ವ್ಯಾಪ್ತಿಗೆ ಬಿಬಿಎಂಪಿಯ ಕೇವಲ ಐದು ವಾರ್ಡ್‌ಗಳಿದ್ದರೂ ಸುಮಾರು 232 ಕೋಟಿ ರೂ.ಹಂಚಿಕೆ ಮಾಡಲಾಗಿದೆ. ಇನ್ನು, ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ ಕಾಂಗ್ರೆಸ್‌ನ ಸ್ಟಾರ್‌ ಚಂದ್ರು ಮಾಲೀಕತ್ವದ ಸ್ಟಾರ್‌ ಬಿಲ್ಡರ್ಸ್‌ ಕಂಪನಿಗೆ ಯಶವಂತಪುರ ಕ್ಷೇತ್ರಕ್ಕೆ ಹಂಚಿಕೆಯಾಗಿರುವ ಅನುದಾನದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದು ದೂರಿದ್ದಾರೆ.

ಹಿಂದಿನ ಸರ್ಕಾರಗಳು ರಾಜ್ಯದ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಹೊರರಾಜ್ಯದ ಆಂಧ್ರಪ್ರದೇಶದ ಬಲಿಷ್ಠ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 200 ಕೋಟಿ ರೂ. ಪ್ಯಾಕೇಜ್‌ ಅನುದಾನಗಳಿಗೆ ಟೆಂಡರ್‌ ಪ್ರಕ್ರಿಯೆಯನ್ನು ಮಾಡಲಾಗಿದ್ದು, ಇದರಿಂದ ರಾಜ್ಯದ ಗುತ್ತಿಗೆದಾರರು ಬೇರೆ ರಾಜ್ಯದ ಶ್ರೀಮಂತ ಗುತ್ತಿಗೆದಾರರಿಗೆ ಗುಲಾಮರಾಗುತ್ತಿದ್ದಾರೆ. ಈ ಭ್ರಷ್ಟಾಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಂದು ಭಾಗವಾದರೆ, ಮತ್ತೊಂದು ಭಾಗಕ್ಕೆ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ಕಾರಣಕರ್ತರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಶಾಸಕರಾಗಿರುವ ಮತ್ತು ಸಂಬಂಧಿಯೊಬ್ಬರ ಜೆ.ಎಂ.ಸಿ ಕನ್‌ಷ್ಟಕ್ಷನ್ಸ್ ಹೆಸರಿಗೆ ಹಾಗೂ ಇವರ ಜೊತೆಯಲ್ಲಿರುವ ಆಂಧ್ರ ಪ್ರದೇಶದ ಗುತ್ತಿಗೆದಾರರಿಗೆ 1768 ಕೋಟಿ ರೂಪಾಯಿಗಳ ಪ್ಯಾಕೆಜ್‌ನ ಕಾರ್ಯಾದೇಶವನ್ನು ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ಗುತ್ತಿಗೆದಾರ ಆರ್.ಎನ್.ಶೆಟ್ಟಿ ಜೊತೆಯಲ್ಲಿ ಸಹ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸುಮಾರು ಶೇ 15 ರಷ್ಟು ಕಮಿಷನ್ ಹಣದ ಮುಂಗಡವನ್ನು ತಲುಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಗುತ್ತಿಗೆದಾರರಿಗೆ ನೇರವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಬಾಹ್ಯ ಒತ್ತಡ ಹಾಕಿ ಮೌಖಿಕವಾಗಿ ಸೂಚಿಸಿದ್ದಾರೆ. ನಮ್ಮ ರಾಜ್ಯದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಇವರಿಗೆ ಲಂಚ ಕೇಳಲು ಹಾಗೂ ಪಡೆಯಲು ಆಗುವುದಿಲ್ಲ ಹಾಗಾಗಿ ತಾಂತ್ರಿಕ ದೋಷದ ಕಾರಣ ಒಡ್ಡಿ ಟೆಂಡರ್ ಪ್ರಕ್ರಿಯೆಯಲ್ಲಿ ಅನರ್ಹ ಆಗುವಂತೆ ನೋಡಿಕೊಳ್ಳುತ್ತಾರೆ. ಅಲ್ಲದೇ ಇವರು ಸಹ ಇಂತಹ ಕೆಲವು ಅಕ್ರಮ ಟೆಂಡರ್ ಪ್ರಕ್ರಿಯೆಯಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲವು ಅಧಿಕಾರಿ ವರ್ಗದವರನ್ನು ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಂಡು ತಾವೇ ಕೆಲವು ನಕಲಿ ಗುತ್ತಿಗೆದಾರರನ್ನು ಟೆಂಡರ್‌ನಲ್ಲಿ ಭಾಗವಹಿಸುವಂತೆ ಸೂಚಿಸಿ, ತಮಗೆ ಬೇಕಾದ ಹೊರರಾಜ್ಯದ ಗುತ್ತಿಗೆದಾರರಿಗೆ ಕಾರ್ಯದೇಶವನ್ನು ನೀಡಲು ಸಂಚು ಮಾಡಿದ್ದು, ಈ ಎಲ್ಲಾ ಅವ್ಯವಹಾರಗಳು ಮುಖ್ಯಮಂತ್ರಿಗಳ ಗಮನಕ್ಕೆ ಬರದಂತೆ ನೋಡಿಕೊಂಡಿದ್ದಾರೆ. ಈ ಅಕ್ರಮದಲ್ಲಿ ಯಾವುದೇ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ಪಾತ್ರ ಇರುವುದಿಲ್ಲ. ಇದನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ನೇರವಾಗಿ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಕೂಡಲೇ LOC ಪಡೆಯಲು ಶೇ.15ರಷ್ಟು ಹಣವನ್ನು ಸಂದಾಯ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸುಮಾರು 20 ನಿಮಿಷಗಳ ಕಾಲ ದೂರು ಆಲಿಸಿರುವ ರಾಜ್ಯಪಾಲರು ಕಾನೂನು ತಜ್ಞರು ಹಾಗೂ ಸಂಬಂಧಪಟ್ಡವರಿಂದ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದಾರೆ.

ನಂತರ ರಾಜಭವನದ ಹೊರಗಡೆ ಸುದ್ದಿಗಾರರ ಜೊತೆ ಮಾತನಾಡಿದ ಮುನಿರತ್ನ ಅವರು, ಬೆಂಗಳೂರಿನಲ್ಲಿ ಒಟ್ಟು 16 ವರ್ಕ್ ಆರ್ಡರ್ ಕೊಟ್ಟಿದ್ದಾರೆ.ನಮ್ಮ ಕ್ಷೇತ್ರದಲ್ಲಿ 216 ಕೋಟಿ ಮೊತ್ತದ ಕಾಮಗಾರಿಗಳನ್ನು ಬಿಎಸ್‌ಆರ್ ಕಂಪೆನಿಗೆ ಟೆಂಡರ್ ನೀಡಿದ್ದಾರೆ.ವರ್ಲ್ಡ್ ಬ್ಯಾಂಕ್ ನಿಂದ ರಾಜಕಾಲುವೆ ಕಾಮಗಾರಿಗಳಿಗೆ 2 ಸಾವಿರ ಕೋಟಿ ಸಾಲ ತಂದಿದ್ದಾರೆ ಎಂದು ಹೇಳಿದರು.

ಇದರ ಟೆಂಡರ್ ಅನ್ನು ಅನರ್ಹ ಕಂಪೆನಿಗಳಿಗೆ ಕೊಡುತ್ತಿದ್ದಾರೆ.ಇದರಲ್ಲಿ 400 ಕೋಟಿ ರೂ ಕಮೀಷನ್ ಹೊಡೆಯಲಾಗಿದೆ.ಟೆಂಡರ್ ನಿಯಮಗಳನ್ನು ಬದಲಾಯಿಸಿದ್ದಾರೆ, ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿದ್ದಾರೆ. ಮುಕ್ತವಾಗಿ ಟೆಂಡರ್ ಕರೆದು ಕಾಮಗಾರಿಗಳನ್ನು ಕೊಡುತ್ತಿಲ್ಲ‌ ಎಂದು

ಆಪಾದಿಸಿದರು.

ನಿರ್ದಿಷ್ಟ ಗುತ್ತಿಗೆದಾರ ಕಂಪೆನಿಗಳಿಗೆ ಮಾತ್ರ ಕಮೀಷನ್ ಹೊಡೆಯಲು ಟೆಂಡರ್ ಕೊಡುತ್ತಿದ್ದಾರೆ.ಇದರಲ್ಲಿ ಕೆಟಿಪಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ರಾಜಕಾಲುವೆಗಳ ಟೆಂಡರ್ ಕೊಟ್ಟಿದ್ದಾರೆ.ಗ್ಲೋಬಲ್ ಟೆಂಡರ್ ಕರೆಯದೇ ಅಕ್ರಮ ಎಸಗಲಾಗಿದೆ.ಇದನ್ನು ತಡೆಗಟ್ಟಿದರೆ ಸರ್ಕಾರಕ್ಕೆ 400 ಕೋಟಿ ಉಳಿಯಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಇದೇ ಮೊದಲು ಇಂತಿಂಥ ಗುತ್ತಿಗೆದಾರರಿಗೇ ಇಂತಿಥ ಕಾಮಗಾರಿ ಎಂದು ನಿಗಧಿ ಮಾಡಿಕೊಂಡು ಟೆಂಡರ್ ಕೊಡುತ್ತಿದ್ದಾರೆ.

ಮಂಗಳವಾರ ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ಹಾಕಲಾಗುವುದು.ಈ ಹಗರಣದ ನೇರ ಹೊಣೆ ಡಿಕೆಶಿ, ಡಿ ಕೆ ಸುರೇಶ್ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದರು.

Read More
Next Story