2024-25ರಲ್ಲಿ ದಾಖಲೆಯ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ
ಪ್ರಸಕ್ತ ಆರ್ಥಿಕ ವರ್ಷದಲ್ಲಿ 20.57 ಲಕ್ಷ ಆಸ್ತಿಗಳಿಗೆ ₹3,828.64 ಕೋಟಿ ಆಸ್ತಿ ತೆರಿಗೆಯನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ 15,84,107 ಆಸ್ತಿಗಳಿಂದ ₹3,432.02 ಕೋಟಿ ಸಂಗ್ರಹವಾಗಿದೆ. ಇನ್ನೂ 4 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಂದ ₹396.62 ಕೋಟಿ ಸಂಗ್ರಹವಾಗಬೇಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2024-25ನೇ ಸಾಲಿಗೆ 4,284 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. 2022-23ರಲ್ಲಿ 2,300 ಕೋಟಿ ರೂಪಾಯಿ ಮತ್ತು 2023-24ರಲ್ಲಿ 2293.81 ಕೋಟಿ ರೂ ತೆರಿಗೆ ಸಂಗ್ರಹವಾಗಿತ್ತು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ತೆರಿಗೆ ಸಂಗ್ರಹ ಗಮನಾರ್ಹ ಏರಿಕೆಯಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 20.57 ಲಕ್ಷ ಆಸ್ತಿಗಳಿಗೆ ₹3,828.64 ಕೋಟಿ ಆಸ್ತಿ ತೆರಿಗೆಯನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ 15,84,107 ಆಸ್ತಿಗಳಿಂದ ₹3,432.02 ಕೋಟಿ ಸಂಗ್ರಹವಾಗಿದೆ. ಇನ್ನೂ 4 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಂದ ₹396.62 ಕೋಟಿ ಸಂಗ್ರಹವಾಗಬೇಕಿದೆ.
2024ರ ಬಜೆಟ್ ಮಂಡನೆ ವೇಳೆ ಬಿಬಿಎಂಪಿ 6,000 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿತ್ತು. ಆದರೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಗುರಿಯನ್ನು 5,200 ಕೋಟಿ ರೂ.ಗೆ ಪರಿಷ್ಕರಿಸಿದ್ದಾರೆ. ಮಾರ್ಚ್ 2025 ರ ಅಂತ್ಯದ ವೇಳೆಗೆ ಗುರಿಯನ್ನು ತಲುಪಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಬಿಎಂಪಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಏಪ್ರಿಲ್ 1 ರಿಂದ ನವೆಂಬರ್ 30 ರವರೆಗೆ 4,284.16 ಕೋಟಿ ರೂಪಾಯಿ ಸಂಗ್ರಹಿಸಿದೆ. ಮಹದೇವಪುರ ವಲಯವು 1,148 ಕೋಟಿ ರೂಪಾಯಿಗಳೊಂದಿಗೆ ಅಗ್ರಸ್ಥಾನದಲ್ಲಿದೆ, ಪೂರ್ವ ವಲಯವು 710 ಕೋಟಿ ರೂಪಾಯಿಗಳೊಂದಿಗೆ ಮತ್ತು ದಕ್ಷಿಣ ವಲಯವು 606 ಕೋಟಿ ರೂಪಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಿಬಿಎಂಪಿ ಪಶ್ಚಿಮ ವಲಯ 483 ಕೋಟಿ, ಬೊಮ್ಮನಹಳ್ಳಿ ವಲಯ 418 ಕೋಟಿ, ಯಲಹಂಕ ವಲಯ 408 ಕೋಟಿ, ರಾಜರಾಜೇಶ್ವರಿ ನಗರ ವಲಯ 335 ಕೋಟಿ, ದಾಸರಹಳ್ಳಿ ವಲಯ 136 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆಗೆ ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಕೂಡ ಕಾರಣವಾಗಿದೆ. ಈ ಯೋಜನೆ ದೀರ್ಘಾವಧಿಯ ಬಾಕಿಗಳನ್ನು ತೆರವುಗೊಳಿಸಲು ಮತ್ತು ಆಸ್ತಿಗಳ ಸ್ವಯಂ-ಮೌಲ್ಯಮಾಪನವನ್ನು ಪರಿಷ್ಕರಿಸಲು ಸಹಾಯ ಮಾಡಿದೆ. ಮುನೀಶ್ ಮೌನ್ಸಿಲ್ ಅವರು ಕಂದಾಯ ವಿಭಾಗದ ವಿಶೇಷ ಆಯುಕ್ತರಾಗಿ ಬಂದಮೇಲೆ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ತೆರಿಗೆ ಬಾಕಿದಾರರಿಗೆ ಎಸ್‌ಎಂಸ್ ಕಳುಹಿಸುವುದು, ಕರೆ ಮಾಡುವುದು, ನೋಟಿಸ್ ನೀಡುವುದು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡ ವಾಣಿಜ್ಯ ಕಟ್ಟಡಗಳಿಗೆ ಬೀಗ, ಜಪ್ತಿಯಂತಹ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.