ರಸೆಲ್ ಮಾರುಕಟ್ಟೆ ನವೀಕರಣಕ್ಕೆ ಚಾಲನೆ: ಕೂಡಲೇ ಟೆಂಡರ್ ಕರೆಯಲು ಬಿಬಿಎಂಪಿ ಆಯುಕ್ತರ ಸೂಚನೆ
x

 ಶಿವಾಜಿನಗರದ ಐತಿಹಾಸಿಕ ರಸೆಲ್ ಮಾರುಕಟ್ಟೆಗೆ ಅದರ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪುನರ್ ಅಭಿವೃದ್ಧಿಪಡಿಸಲು ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ರಸೆಲ್ ಮಾರುಕಟ್ಟೆ ನವೀಕರಣಕ್ಕೆ ಚಾಲನೆ: ಕೂಡಲೇ ಟೆಂಡರ್ ಕರೆಯಲು ಬಿಬಿಎಂಪಿ ಆಯುಕ್ತರ ಸೂಚನೆ

ಶಿವಾಜಿನಗರದ ಐತಿಹಾಸಿಕ ರಸೆಲ್ ಮಾರುಕಟ್ಟೆಗೆ ಅದರ ಪಾರಂಪರಿಕ ವಿನ್ಯಾಸ ಉಳಿಸಿಕೊಂಡೇ ಆಧುನಿಕ ಸೌಲಭ್ಯಗಳೊಂದಿಗೆ ಪುನರ್‌ಅಭಿವೃದ್ಧಿ ಮಾಡುವ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.


Click the Play button to hear this message in audio format

ಸಿಲಿಕಾನ್ ಸಿಟಿಯ ಪಾರಂಪರಿಕ ಹೆಗ್ಗುರುತಾಗಿರುವ ಶಿವಾಜಿನಗರದ ಐತಿಹಾಸಿಕ ರಸೆಲ್ ಮಾರುಕಟ್ಟೆಗೆ (Russell Market) ಕಾಯಕಲ್ಪ ನೀಡಲು ಬಿಬಿಎಂಪಿ ಮುಂದಾಗಿದೆ. ಈ ಮಾರುಕಟ್ಟೆಯನ್ನು ಅದರ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪುನರ್ ಅಭಿವೃದ್ಧಿಪಡಿಸಲು ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬುಧವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಸೆಲ್ ಮಾರುಕಟ್ಟೆಯ ಅಭಿವೃದ್ಧಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (DPR) ಈಗಾಗಲೇ ಸಿದ್ಧಗೊಂಡಿದ್ದು, ಅನುಷ್ಠಾನದಲ್ಲಿ ವಿಳಂಬ ಸಲ್ಲದು ಎಂದು ತಾಕೀತು ಮಾಡಿದರು. ಕಾಮಗಾರಿ ಆರಂಭಿಸುವ ಮುನ್ನ ಅಲ್ಲಿರುವ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ಸ್ಥಳದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಾರಂಪರಿಕ ವಿನ್ಯಾಸಕ್ಕೆ ಧಕ್ಕೆ ಇಲ್ಲ

ನವೀಕರಣ ಯೋಜನೆಯಲ್ಲಿ ಮಾರುಕಟ್ಟೆಯ ಪಾರಂಪರಿಕ ವಿನ್ಯಾಸವನ್ನು ಉಳಿಸಿಕೊಂಡೇ ಆಧುನಿಕ ಸ್ಪರ್ಶ ನೀಡಲು ಉದ್ದೇಶಿಸಲಾಗಿದೆ. ಮಾರುಕಟ್ಟೆಯ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸುವುದು, ಪಾರ್ಕಿಂಗ್ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ವೈಜ್ಞಾನಿಕ ಕ್ರಮ ಕೈಗೊಳ್ಳುವುದು, ಮತ್ತು ಮಾರುಕಟ್ಟೆಯನ್ನು ಸದಾ ಸ್ವಚ್ಛವಾಗಿಡಲು ತ್ಯಾಜ್ಯ ವಿಂಗಡಣೆ ಹಾಗೂ ಕಾಂಪೋಸ್ಟಿಂಗ್ ಘಟಕಗಳನ್ನು ಅಳವಡಿಸುವುದು ಈ ಯೋಜನೆಯ ಪ್ರಮುಖ ಭಾಗವಾಗಿದೆ. ಇದಲ್ಲದೆ, ಅಗ್ನಿ ಸುರಕ್ಷತಾ ವ್ಯವಸ್ಥೆ, ಹೈಟೆಕ್ ಶೌಚಾಲಯಗಳು, ಸಾರ್ವಜನಿಕರ ಓಡಾಟದ ಜಾಗದಲ್ಲಿ ಗ್ರಾನೈಟ್ ಅಳವಡಿಕೆ ಹಾಗೂ ಮಾರುಕಟ್ಟೆಯ ಪ್ರಮುಖ ಆಕರ್ಷಣೆಯಾದ ಕ್ಲಾಕ್ ಟವರ್ (ಗಡಿಯಾರ ಗೋಪುರ) ವಿನ್ಯಾಸಕ್ಕೂ ವಿಶೇಷ ಒತ್ತು ನೀಡಲಾಗುವುದು.

ಇದೇ ವೇಳೆ, ಮಾರುಕಟ್ಟೆ ಸುತ್ತಮುತ್ತಲಿನ ವಾಣಿಜ್ಯ ಪ್ರದೇಶಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವಂತೆ ಆಯುಕ್ತರು ಸೂಚಿಸಿದರು. ಕಂದಾಯ ವಸೂಲಾತಿಗಾಗಿ ವಿಶೇಷ ಅಭಿಯಾನ (Tax Drive) ನಡೆಸಿ, ಬಾಕಿ ಇರುವ ತೆರಿಗೆಯನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಲಸೂರು ಕೆರೆ ಅಭಿವೃದ್ಧಿ

ನಗರದ ಪ್ರಮುಖ ಜಲಮೂಲವಾದ ಹಲಸೂರು ಕೆರೆಯ ಅಭಿವೃದ್ಧಿಗೂ ಮಹತ್ವದ ಯೋಜನೆ ರೂಪಿಸಲಾಗಿದೆ. ಕೆರೆಗೆ ನೀರು ಹರಿದು ಬರುವ ಮೂರು ರಾಜಕಾಲುವೆಗಳನ್ನು ಪರಿಶೀಲಿಸಿದ ಆಯುಕ್ತರು, ನಗರದ ಪ್ರತಿಷ್ಠಿತ ಕೆ-100 ಯೋಜನೆಯ ಮಾದರಿಯಲ್ಲಿ ಇಲ್ಲಿಯೂ ‘ನಾಗರಿಕ ಜಲಮಾರ್ಗ’ (Citizens Waterway) ನಿರ್ಮಿಸಲು ಸೂಚಿಸಿದರು. ಕೆರೆಯ ಸೌಂದರ್ಯ ಹೆಚ್ಚಿಸಲು ದ್ವೀಪ ಅಭಿವೃದ್ಧಿ, ಕಲ್ಯಾಣಿ ಪುನರ್ ವಿನ್ಯಾಸ ಮತ್ತು ಹೂಳೆತ್ತುವ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಆದೇಶಿಸಿದರು. ಕೆರೆಯ ಸುತ್ತಲೂ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅನುಕೂಲವಾಗುವಂತೆ ವಾಕಿಂಗ್ ಟ್ರ್ಯಾಕ್ ನಿರ್ಮಿಸಲು ರಕ್ಷಣಾ ಇಲಾಖೆಯ (Defence) ಅಧಿಕಾರಿಗಳಿಗೆ ಪತ್ರ ಬರೆಯಲು ಸೂಚಿಸಲಾಯಿತು.

ಐತಿಹಾಸಿಕ ಸ್ಮಾರಕ

ಸ್ಥಳೀಯ ಶಾಸಕ ರಿಜ್ವಾನ್ ಹರ್ಷದ್ ಮಾತನಾಡಿ, ಶಿವಾಜಿನಗರದ ಹೃದಯಭಾಗದಲ್ಲಿರುವ ರಸೆಲ್ ಮಾರುಕಟ್ಟೆ ಕೇವಲ ವ್ಯಾಪಾರ ಕೇಂದ್ರವಲ್ಲ, ಅದೊಂದು ಐತಿಹಾಸಿಕ ಸ್ಮಾರಕವಾಗಿದೆ. ಅದರ ಪಾರಂಪರಿಕ ಮಹತ್ವಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಲಾಗುವುದು. ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರವೇಶ ದ್ವಾರಗಳು ಮತ್ತು ಒಳಾಂಗಣ ವಿನ್ಯಾಸವನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಭರವಸೆ ನೀಡಿದರು.

ಶಿವಾಜಿನಗರದ ಹಫೀಜಿಯ ಶಾಲಾ ಕಟ್ಟಡವನ್ನೂ ಪರಿಶೀಲಿಸಿದ ಆಯುಕ್ತರು, ನಿರ್ಮಾಣ ಹಂತದಲ್ಲಿರುವ ಹೊಸ ಕಟ್ಟಡದ ಮೇಲ್ಭಾಗದಲ್ಲಿ ಮಕ್ಕಳಿಗಾಗಿ ಕ್ರೀಡಾ ಸಂಕೀರ್ಣ ನಿರ್ಮಿಸಲು ಸೂಚಿಸಿದರು. ಟೆರೇಸ್ ಮೇಲೆ ಸುರಕ್ಷತಾ ಫೆನ್ಸಿಂಗ್ ಅಳವಡಿಸಿ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಮತ್ತು ಶೂಟಿಂಗ್ ಕ್ರೀಡೆಗಳಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಮೈದಾನದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಲು ಹೆಚ್ಚುವರಿ ಅನುದಾನ ಒದಗಿಸುವ ಭರವಸೆ ನೀಡಿದರು. ಪರಿಶೀಲನೆ ವೇಳೆ ಅಭಿವೃದ್ಧಿ ವಿಭಾಗದ ಅಪರ ಆಯುಕ್ತ ದಲ್ಜಿತ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಶರಣ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More
Next Story