ರಾಜ್ಯದಲ್ಲಿ ಈಗ ʼಪೇ ಡಬಲ್ ಸಿಎಂʼ ವ್ಯವಸ್ಥೆ; ಬಸವರಾಜ ಬೊಮ್ಮಾಯಿ ಆರೋಪ
x
ಸಂಸದ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಈಗ ʼಪೇ ಡಬಲ್ ಸಿಎಂʼ ವ್ಯವಸ್ಥೆ; ಬಸವರಾಜ ಬೊಮ್ಮಾಯಿ ಆರೋಪ

ಇಡೀ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಯಾವ ಇಲಾಖೆಯಲ್ಲಿ ಹೋದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಂದಲೂ ತಿಂಗಳಿಗೆ ಕಮಿಷನ್ ವಸೂಲಿ ಫಿಕ್ಸ್ ಮಾಡುವ ಹಂತಕ್ಕೆ ಹೋಗಿದ್ದಾರೆ ಎಂದರೆ, ಭ್ರಷ್ಟಾಚಾರ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ನೀವೇ ಊಹಿಸಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ರಾಜ್ಯದಲ್ಲಿ ಈಗ ʼಪೇ ಡಬಲ್ ಸಿಎಂʼ ಆಗಿದೆ‌. ಭ್ರಷ್ಟಾಚಾರದಲ್ಲಿ ಇಡೀ ಸರ್ಕಾರವೇ ಮುಳುಗಿದೆ. ಮಂತ್ರಿಗಳಿಗೆ ಒಂದು ಪಾಲು, ಸಿಎಂಗೆ ಒಂದು ಪಾಲು ಪೇಮೆಂಟ್ ಹೋಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ನಮ್ಮ ವಿರುದ್ದ ಯಾವುದೇ ದಾಖಲೆ ಇಲ್ಲದೇ ವಿನಾಕಾರಣ ಆರೋಪ ಮಾಡಿದ್ದರು. ಈಗ ಅಬಕಾರಿ ಇಲಾಖೆಯಲ್ಲಿ ಕಮಿಷನ್ ಆರೋಪ ಕೇಳಿ ಬಂದಿದೆ. ಹಣಕಾಸು ಇಲಾಖೆ ನೇರವಾಗಿ ಮುಖ್ಯಮಂತ್ರಿಗಳ ಕೈಯಲ್ಲಿಯೇ ಇದೆ. ಒಂದೊಂದು ಲೈಸೆನ್ಸ್ ನೀಡಲು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎನ್ನುವುದನ್ನು ಅವರೇ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಇಡೀ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಯಾವ ಇಲಾಖೆಯಲ್ಲಿ ಹೋದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಂದಲೂ ತಿಂಗಳಿಗೆ ಕಮಿಷನ್ ವಸೂಲಿಗೆ ಫಿಕ್ಸ್ ಮಾಡುವ ಹಂತಕ್ಕೆ ಹೋಗಿದ್ದಾರೆ ಎಂದರೆ, ಭ್ರಷ್ಟಾಚಾರ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ನೀವೇ ಊಹಿಸಿ ಎಂದರು.

ಅಭಿವೃದ್ಧಿ ಜನರಿಗೆ ಗೊತ್ತಿದೆ

ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಅಭಿವೃದ್ದಿಯೇ ಆಗಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿಗ್ಗಾವಿ ಕ್ಷೇತ್ರದ ಅಭಿವೃದ್ಧಿಯನ್ನು ಜನ ಅನುಭವಿಸಿದ್ದಾರೆ. ಕಾಂಗ್ರೆಸ್ ನವರ ಆಲೋಚನೆಗಳಿಗೂ ಶಿಗ್ಗಾವಿ ಜನರ ಆಲೋಚನೆಗಳಿಗೂ ಬಹಳ ವ್ಯತ್ಯಾಸ ಇದೆ. ಸರ್ಕಾರ ಅವರದೇ ಇದೆ. ಶಿಗ್ಗಾವಿಯಲ್ಲಿ ತಾಲೂಕು ಮಟ್ಟದಲ್ಲಿ 200 ಬೆಡ್ ಆಸ್ಪತ್ರೆ, ಟೆಕ್ಸ್ ಟೈಲ್ ಪಾರ್ಕ್, ಸವಣೂರಿನಲ್ಲಿ ಆಯುರ್ವೇದಿಕ್ ಕಾಲೇಜ್, ಐಟಿಐ ಕಾಲೇಜ್, ಪ್ರವಾಹ ಸಂದರ್ಭದಲ್ಲಿ 12000 ಕ್ಕಿಂತ ಹೆಚ್ಚು ಮನೆ ನಿರ್ಮಾಣ, ಬೆಂಗಳೂರಿಗಿಂತ ಒಳ್ಳೆಯ ರಸ್ತೆ ಶಿಗ್ಗಾವಿಯಲ್ಲಿವೆ. ಸಿಎಂ ಕಾರಲ್ಲಿ ಹೋಗುವಾಗ ನಿದ್ದೆ ಮಾಡುತ್ತಿರುತ್ತಾರಾ ಏನೋ ಗೊತ್ತಿಲ್ಲ ಎಂದು ಹೇಳಿದರು.

ಇಡೀ ಸರ್ಕಾರ ನನ್ನ ಮೇಲೆ ದಂಡೆತ್ತಿ ಬಂದಿದೆ‌. ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾನು ಹೇಳುತ್ತೇನೆ. ವರುಣಾ, ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಜನ ಏನು ಹೇಳುತ್ತಾರೆ, ಇಲ್ಲಿ ಬಂದಿರುವ ಕಾಂಗ್ರೆಸ್ ಮಂತ್ರಿಗಳು, ಶಾಸಕರ ಕ್ಷೇತ್ರಗಳು ಹೇಗಿವೆ ಎಂದು ಅವರು ಹೇಳಲಿ. ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಕ್ಕೆ ಹಣ ಬಿಡುಗಡೆ ಮಾಡಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರ ದರ್ಗಾ, ಮಸೀದಿ ಅಭಿವೃದ್ಧಿಗೆ 10 ಕೋಟಿ ರೂ. ಕೊಟ್ಟಿದ್ದೆ. ಇವರು ಬಂದು ಅದನ್ನು ವಾಪಸ್ ಪಡೆದುಕೊಂಡಿದ್ದಾರೆ. ಅಲ್ಪಸಂಖ್ಯಾತರ ವಿಷಯದಲ್ಲಿ ಇವರದ್ದು ದ್ವಂದ್ವ ನೀತಿ ಅಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಸ್ವಾಮೀಜಿಗೆ ಅವಮಾನ

ಕಾಗಿನೆಲೆ ಗುರು ಪೀಠದ ಸ್ವಾಮೀಜಿ ಬಗ್ಗೆ ಒಬ್ಬ ಮುಖ್ಯಮಂತ್ರಿಯಾಗಿ ಗುರುಗಳಿಗೆ ದಾಷ್ಟ್ರ್ಯದ ಮಾತು ಹೇಳುವುದು ಅವರಿಗೆ ಅವಮಾನ ಮಾಡಿದಂತೆ‌, ಅವರು ನಮ್ಮ ಗುರುಗಳು, ಅವರ ನಮ್ಮ ನಡುವೆ ಗುರುಭಕ್ತರ ಸಂಬಂಧ ಇದೆ. ಚುನಾವಣೆ ಸೋಲಿನ ಭಯದಲ್ಲಿ ಸಿಎಂ ಅವರು ಸ್ವಾಮೀಜಿ ಅವರನ್ನು ಎಳೆದು ತರುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಮುಡಾ ಪ್ರಕರಣದಲ್ಲಿ ಬಿಜೆಪಿಯವರು ತಮ್ಮ ವಿರುದ್ದ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂಬ ಸಿಎಂ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಡಾ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ಆದೇಶ ಇದೆ. ಒಬ್ಬ ಹಾಲಿ ಸಿಎಂ ತನಿಖೆಗೆ ಹಾಜರಾಗುತ್ತಿರುವುದು ಇದೇ ಮೊದಲು ಎಂದರು.

ಬೆಳಗಾವಿಯಲ್ಲಿ ಸರ್ಕಾರಿ ನೌಕರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕನ ವಿರುದ್ದ ಡೆತ್ ನೋಟ್ ಬರೆದಿಟ್ಟು ಸಾವಿಗೀಡಾಗಿರುವ ಪ್ರಕರಣದ ಕುರಿತು ತನಿಖೆಯಾಗಲಿ. ಸರ್ಕಾರಿ ನೌಕರರು ರಾಜಕೀಯ ಒತ್ತಡದಿಂದ ರೋಸಿ ಹೋಗಿದ್ದಾರೆ. ಶಿಗ್ಗಾವಿಯಲ್ಲಿಯೂ ಸರ್ಕಾರಿ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಹೇಳಿದರು.

Read More
Next Story