
ಪ್ರಾತಿನಿಧಿಕ ಚಿತ್ರ
ಯಲಹಂಕ ಬಳಿ ಕಬ್ಬನ್‌ಪಾರ್ಕ್, ಲಾಲ್‌ಬಾಗ್ ಮಾದರಿ ಉದ್ಯಾನ; ಜೀವವೈವಿದ್ಯ ತಾಣ ನಿರ್ಮಿಸಲು ಸಂಪುಟ ಅಸ್ತು
ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಆಗಲಿರುವ ಈ ಉದ್ಯಾನವು ರಾಜ್ಯ ರಾಜಧಾನಿಯ 3ನೇ ಅತಿದೊಡ್ಡ ಉದ್ಯಾನದ ಖ್ಯಾತಿಗೆ ಪಾತ್ರವಾಗಲಿದೆ.
ಉದ್ಯಾನನಗರಿ ಹಿರಿಮೆಯ ಬೆಂಗಳೂರಿಗೆ ಮತ್ತೊಂದು ಗರಿ ಮೂಡಿದೆ. ಅರಣ್ಯ ಇಲಾಖೆಯು 153 ಎಕರೆಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ.ಬಿ ಖಂಡ್ರೆ ಅವರು, ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣ ಮತ್ತು ಮನೋಲ್ಲಾಸ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಂಪುಟ 50 ಕೋಟಿ ರೂ. ಮಂಜೂರು ಮಾಡಿದೆ ಎಂದು ತಿಳಿಸಿದರು.
265 ವರ್ಷಗಳ ಹಿಂದೆ 1760ರಲ್ಲಿ 240 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ನಿರ್ಮಾಣವಾಗಿತ್ತು. 155 ವರ್ಷಗಳ ಹಿಂದೆ 1870ರಲ್ಲಿ 197 ಎಕರೆ ಪ್ರದೇಶದಲ್ಲಿ ಕಬ್ಬನ್ ಪಾರ್ಕ್ ನಿರ್ಮಾಣವಾಗಿ, ಜನಾಕರ್ಷಣೆಯ ತಾಣವಾಗಿದೆ. ಅಂದರೆ ಕಬ್ಬನ್ ಪಾರ್ಕ್ ನಿರ್ಮಾಣವಾಗಿ 155ವರ್ಷ ಆಗಿದೆ. ಆದಾದ ಬಳಿಕ ಬೆಂಗಳೂರಿನಲ್ಲಿ ಸಣ್ಣ ಉದ್ಯಾನಗಳು ನಿರ್ಮಾಣವಾಗಿವೆ. ಆದರೆ, ಬೃಹತ್ ಉದ್ಯಾನ ನಿರ್ಮಾಣ ಆಗಿರಲಿಲ್ಲ. ಈಗ ಅಂತಹ ಒಂದು ಬೃಹತ್ ಜೀವವೈವಿಧ್ಯ ಉದ್ಯಾನವನ್ನು ನಮ್ಮ ಸರ್ಕಾರ ಜನತೆಗೆ ಸಮರ್ಪಿಸುತ್ತಿದೆ ಎಂದರು.
ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಆಗಲಿರುವ ಈ ಉದ್ಯಾನವು ರಾಜ್ಯ ರಾಜಧಾನಿಯ 3ನೇ ಅತಿದೊಡ್ಡ ಉದ್ಯಾನದ ಖ್ಯಾತಿಗೆ ಪಾತ್ರವಾಗಲಿದೆ. ಇದು ಶತಮಾನದ ಸಾಧನೆ ಎಂದು ಬಣ್ಣಿಸಿದರು.
ಅರಣ್ಯ ಇಲಾಖೆ ಈ ಹಿಂದೆ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶವನ್ನು ನೆಡುತೋಪು ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿತ್ತು. ಈಗ ಈ ಜಾಗವನ್ನು ಮರಳಿ ಇಲಾಖೆಗೆ ಪಡೆದಿದ್ದು, ಇಲ್ಲಿರುವ ನೀಲಗಿರಿ ಮರಗಳನ್ನು ಹಂತ ಹಂತವಾಗಿ ತೆಗೆದು ಸ್ಥಳೀಯ ಪ್ರಭೇದದ ಗಿಡ ಮರ ಬೆಳೆಸಿ, ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ನಿರ್ಮಿಸಲಾಗುವುದು ಎಂದರು.
ದಿವ್ಯೌಷಧೀಯ ಸಸ್ಯ ವನ, ಪಕ್ಷಿ ಲೋಕ, ವೃಕ್ಷೋದ್ಯಾನ ಹಾಗೂ ಇಂಟರ್ ಪ್ರಿಟೇಷನ್ ಸೆಂಟರ್ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಅತಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿರುವ ಶಿವರಾಮ ಕಾರಂತ ಬಡಾವಣೆಗೂ ಇದು ಸಮೀಪದಲ್ಲಿದೆ ಎಂದು ತಿಳಿಸಿದರು.
ಈ ಪ್ರದೇಶದಲ್ಲಿ ಬೆಳೆಸಿರುವ ನೀಲಗಿರಿ ಮರಗಳನ್ನು ತೆಗೆದು ನಂದಿ, ಹೊನ್ನೆ, ಬಿಲ್ವ, ಮಹಾಬಿಲ್ವ ಮೊದಲಾದ ನೂರಾರು ಪ್ರಭೇದದ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಹೀಗೆ ಬೆಳೆಸುವ ಎಲ್ಲ ಮರಗಳ ಬಳಿ ವೃಕ್ಷದ ಹೆಸರು, ಪ್ರಭೇದ ಇತ್ಯಾದಿ ವೈಜ್ಞಾನಿಕ ವಿವರದ ಫಲಕ ಹಾಕುವ ಮೂಲಕ ಮುಂದಿನ ಪೀಳಿಗೆ ಕನಿಷ್ಠ 50 ಮರಗಳನ್ನು ಗುರುತಿಸುವಂತೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ. ಇದು ತಾವು ಸಚಿವರಾದ ತರುವಾಯ ಕೈಗೊಂಡ ಕನಸಿನ ಯೋಜನೆ. ದರ ಸಾಕಾರಕ್ಕೆ ಸಮ್ಮತಿಸಿದ ಸಚಿವ ಸಂಪುಟಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

