Bangalore Stampede | ಜನಸಂದಣಿ ನಿಯಂತ್ರಣ ವಿಧೇಯಕ ಮಂಡನೆ; ಸದನದಲ್ಲಿ ಪ್ರತಿಪಕ್ಷಗಳಿಂದ ವಿರೋಧ
x

ವಿಧಾನ ಸಭೆಯಲ್ಲಿ ಗದ್ದಲ

Bangalore Stampede | ಜನಸಂದಣಿ ನಿಯಂತ್ರಣ ವಿಧೇಯಕ ಮಂಡನೆ; ಸದನದಲ್ಲಿ ಪ್ರತಿಪಕ್ಷಗಳಿಂದ ವಿರೋಧ

ಅರ್ಧಬಂರ್ಧವಾಗಿರುವ ಈ ಮಸೂದೆಯಲ್ಲಿ ಅನೇಕ ಲೋಪಗಳಿವೆ. ಲಾಠಿಚಾರ್ಜ್ ಆದಾಗ, ಅದಕ್ಕೆ ಅನುಮತಿ ಕೊಟ್ಟ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಇಲ್ಲ ಎಂದು ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹೊಸದಾಗಿ ಜಾರಿಯಾಗಲಿರುವ ಜನಸಂದಣಿ ನಿಯಂತ್ರಣಕ್ಕೆ ವಿಧೇಯಕವು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಬ್ರಿಟಿಷರ ಕಾಲದ ಕಠಿಣ ಕಾನೂನಿಗಿಂತಲೂ ಭೀಕರವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಡೆದ ಲಾಠಿಚಾರ್ಜ್ ಘಟನೆಯನ್ನು ಉದಾಹರಣೆಯಾಗಿ ನೀಡಿದ ಅವರು, ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಿದರು.

ಅರ್ಧಬಂರ್ಧವಾಗಿರುವ ಈ ಮಸೂದೆಯಲ್ಲಿ ಅನೇಕ ಲೋಪಗಳಿವೆ. ಲಾಠಿಚಾರ್ಜ್ ಆದಾಗ, ಅದಕ್ಕೆ ಅನುಮತಿ ಕೊಟ್ಟ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಇಲ್ಲ. ಹೀಗಾಗಿ ಅಧಿಕಾರಿಗಳು ಯಾವುದೇ ಭಯವಿಲ್ಲದೆ ಮನಬಂದಂತೆ ಲಾಠಿಚಾರ್ಜ್ ಮಾಡಿಸುತ್ತಾರೆ. ಈ ಕಾನೂನಿನಲ್ಲಿ ಪೊಲೀಸ್ ಮತ್ತು ಅಧಿಕಾರಿಗಳಿಗೂ ಶಿಕ್ಷೆ ಪ್ರಮಾಣ ಇರಬೇಕು. ಇದರಿಂದಾಗಿ, ಯಾವ ಕಾರಣಕ್ಕೆ ಲಾಠಿಚಾರ್ಜ್ ಮಾಡಲಾಗಿದೆ ಎಂದು ಪೊಲೀಸರನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ, ಯಾವುದೇ ಹೋರಾಟಗಳಿಗೆ ಅನುಮತಿ ನೀಡದೆ ಪೊಲೀಸರು ಸುಮ್ಮನೆ ಕೂರುತ್ತಾರೆ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಸಮಾವೇಶಗಳಿಗೂ ಕಾನೂನು ಅನ್ವಯ: ಅಶೋಕ್ ಸಲಹೆ

ಈ ಮಸೂದೆ ರಾಜಕೀಯ ಸಮಾವೇಶಗಳಿಗೂ ಅನ್ವಯವಾಗುತ್ತದೆ ಎಂದು ಶಾಸಕ ಅಶೋಕ್ ಅಭಿಪ್ರಾಯಪಟ್ಟರು. ಚುನಾವಣೆ ಸಮಯದಲ್ಲಿ ಅನೇಕ ರಾಜಕೀಯ ಸಮಾವೇಶಗಳು ನಡೆಯುತ್ತವೆ. ಆ ಸಮಯದಲ್ಲಿ ಏನಾದರೂ ಅನಾಹುತ ನಡೆದು ಯಾರಾದರೂ ಮೃತಪಟ್ಟರೆ ಅದರ ಹೊಣೆಯನ್ನು ಕಾರ್ಯಕ್ರಮದ ಆಯೋಜಕರೇ ಹೊರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಮಸೂದೆಯನ್ನು ರೂಪಿಸುವಾಗ ಸರ್ಕಾರ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅಶೋಕ್ ಸಲಹೆ ನೀಡಿದರು.

ಬಳ್ಳಾರಿಯಲ್ಲಿ ಕಾಂಗ್ರೆಸ್‌ನವರು ನಡೆಸಿದ ಸಾಧನಾ ಸಮಾವೇಶವನ್ನು ಉದಾಹರಣೆಯಾಗಿ ನೀಡಿದ ಅವರು, ಒಂದು ವೇಳೆ ಆ ಸಮಾವೇಶದಲ್ಲಿ ಏನಾದರೂ ದುರಂತ ಸಂಭವಿಸಿರುತ್ತಿದ್ದರೆ, ಅದರ ಹೊಣೆ ಯಾರು ಹೊರಬೇಕಿತ್ತು ಎಂದು ಪ್ರಶ್ನಿಸಿದರು. ಆದ್ದರಿಂದ, ಕಾನೂನು ಜಾರಿಗೊಳಿಸುವ ಮೊದಲು ರಾಜಕೀಯ ಸಮಾವೇಶಗಳು ಸೇರಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳನ್ನು ಪರಿಗಣಿಸಿ ಸೂಕ್ತ ನಿಯಮಗಳನ್ನು ರೂಪಿಸಬೇಕು ಎಂದು ಅಶೋಕ್ ಸರ್ಕಾರಕ್ಕೆ ಮನವಿ ಮಾಡಿದರು.

ಸ್ಪಷ್ಟನೆ ಕೇಳಿದ ಸುನೀಲ್‌ ಕುಮಾರ್‌

ಬಿಜೆಪಿ ಶಾಸಕ ಸುನೀಲ್ ಕುಮಾರ್, ಬಿಲ್‌ನಲ್ಲಿರುವ ಹಲವಾರು ಅಂಶಗಳ ಬಗ್ಗೆ ಪ್ರಶ್ನಿಸಿ ಸರ್ಕಾರದಿಂದ ಸ್ಪಷ್ಟೀಕರಣ ಕೇಳಿದ್ದಾರೆ. ಈ ಬಿಲ್ ಜಾತ್ರೆ ಹಾಗೂ ಹರಿದಿನಗಳಿಗೂ ಅನ್ವಯವಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಬಿಲ್‌ನಲ್ಲಿ ಜಾತ್ರೆ ಹಾಗೂ ಧಾರ್ಮಿಕ ಹರಿದಿನಗಳ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಒಂದು ವೇಳೆ ಈ ಬಿಲ್ ಅವುಗಳಿಗೂ ಅನ್ವಯವಾದರೆ, ಅದಕ್ಕೆ ಯಾವ ನಿಯಮಗಳನ್ನು ವಿಧಿಸಲಾಗುವುದು ಎಂಬುದನ್ನು ಸರ್ಕಾರ ತಿಳಿಸಬೇಕು.

ಜನಸಂದಣಿ ಕಾರ್ಯಕ್ರಮ ಆಯೋಜಿಸಲು 1 ಕೋಟಿ ಬಾಂಡ್ ನೀಡಬೇಕು ಎಂದು ಬಿಲ್ ಹೇಳುತ್ತದೆ. ಆದರೆ, ಸಣ್ಣ ದೇವಾಲಯಗಳು ಮತ್ತು ಜಾತ್ರೆ ಸಮಿತಿಗಳಿಗೆ ಇಷ್ಟು ದೊಡ್ಡ ಮೊತ್ತದ ಬಾಂಡ್ ನೀಡುವುದು ಸಾಧ್ಯವೇ? ಈ ಬಗ್ಗೆ ಸರ್ಕಾರ ರಿಯಾಯಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸುಳ್ಳು ಸುದ್ದಿ ಹರಡುವುದು ಮತ್ತು ಮಾನಹಾನಿ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಸಲಹೆ ನೀಡಿದರು. ಸರ್ಕಾರದ ಸಾಧನಾ ಸಮಾವೇಶಗಳು ಮತ್ತು ಇತರ ಅಧಿಕೃತ ಕಾರ್ಯಕ್ರಮಗಳಲ್ಲಿ ದೊಡ್ಡ ಸಂಖ್ಯೆಯ ಜನ ಸೇರುತ್ತಾರೆ. ಆಗ ಯಾರು ಹೊಣೆಗಾರರಾಗುತ್ತಾರೆ? ಸರ್ಕಾರವೇ ಆಯೋಜಿಸುವ ಕಾರ್ಯಕ್ರಮಗಳಿಗೆ ಯಾವ ಮಾನದಂಡ ಅನ್ವಯವಾಗುತ್ತದೆ ಎಂದು ಅವರು ಪ್ರಶ್ನಿಸಿದರು.

ಮದುವೆ ಸಮಾರಂಭಗಳಿಗೆ ಈ ಬಿಲ್ ಅನ್ವಯಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ರಾಜಕಾರಣಿಗಳು ಆಯೋಜಿಸುವ ಊಟದ ಕಾರ್ಯಕ್ರಮಗಳಲ್ಲಿ ದೊಡ್ಡ ಸಂಖ್ಯೆಯ ಜನ ಸೇರುತ್ತಾರೆ. ಇಂತಹ ಕಾರ್ಯಕ್ರಮಗಳಿಗೆ ಯಾವ ನಿಯಮಗಳು ಅನ್ವಯವಾಗುತ್ತವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಬಿಲ್ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಇದರಿಂದ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಇದನ್ನು ತಡೆಯಲು ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ಅವರು ಪ್ರಶ್ನಿಸಿದರು.

Read More
Next Story