
ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್
ದಸರಾ ವಿವಾದಕ್ಕೆ ಬಾನು ಮುಷ್ತಾಕ್ ಉತ್ತರ: 'ಗೌರಿ ಬಾಗಿನ ಸ್ವೀಕರಿಸಿ, ಪ್ರೀತಿಯಿಂದ ಉದ್ಘಾಟಿಸುತ್ತೇನೆ'
ನಾಡಹಬ್ಬವನ್ನು ಚಾಮುಂಡೇಶ್ವರಿ ಹಬ್ಬವೆಂದು ಕರೆಯುವುದು ನಮ್ಮ ಸಂಸ್ಕೃತಿಯ ಒಂದು ಭಾಗ. ಹಾಗಾಗಿ ನಾನೂ ಕೂಡ ಪ್ರೀತಿಯಿಂದ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಆಯ್ಕೆಗೆ ಸಂಬಂಧಿಸಿದಂತೆ ಎದ್ದಿರುವ ಪರ-ವಿರೋಧದ ಬಿರುಗಾಳಿಯ ನಡುವೆಯೇ, ಸಾಹಿತಿ ಬಾನು ಮುಷ್ತಾಕ್ ಅವರು ತಮ್ಮ ಮೌನ ಮುರಿದಿದ್ದಾರೆ. "ಎಲ್ಲರ ಪ್ರೀತಿ, ಗೌರವವನ್ನು ಸ್ವೀಕರಿಸಿ, ಈ ಬಾರಿಯ ದಸರಾವನ್ನು ಅತ್ಯಂತ ಪ್ರೀತಿಯಿಂದ ಉದ್ಘಾಟಿಸುತ್ತೇನೆ," ಎಂದು ಸ್ಪಷ್ಟಪಡಿಸುವ ಮೂಲಕ ಎಲ್ಲಾ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.
ವಿವಾದದ ಕೇಂದ್ರಬಿಂದುವಾಗಿದ್ದ, 'ಹಿಂದೂ ಸಂಪ್ರದಾಯಗಳಿಗೆ ಅವರು ಗೌರವ ನೀಡುತ್ತಾರೆಯೇ?' ಎಂಬ ಪ್ರಶ್ನೆಗೆ ಉತ್ತರ ನೀಡುವಂತೆ, ಬೆಂಗಳೂರಿನ 'ಅಮ್ಮನ ಮಡಿಲು' ಸಂಸ್ಥೆಯ ಸಂಸ್ಥಾಪಕಿ ಶಶಿಕಲಾ ಅವರು ಸೋಮವಾರ ಹಾಸನದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಭೇಟಿ ನೀಡಿ, ಹಿಂದೂ ಸಂಪ್ರದಾಯದಂತೆ ಹೂವು, ಹಣ್ಣು, ಬಳೆ, ಸೀರೆ, ಅರಿಶಿನ-ಕುಂಕುಮವಿದ್ದ 'ಗೌರಿ ಬಾಗಿನ'ವನ್ನು ಅರ್ಪಿಸಿ ಶುಭ ಹಾರೈಸಿದ್ದು ವಿಶೇಷವಾಗಿತ್ತು.
"ಪ್ರೀತಿ, ವಾತ್ಸಲ್ಯವೇ ನನ್ನ ಸಾಹಿತ್ಯಕ್ಕೆ ಪ್ರೇರಣೆ"
ಬಾಗಿನವನ್ನು ಪ್ರೀತಿಯಿಂದ ಸ್ವೀಕರಿಸಿ ಮಾತನಾಡಿದ ಬಾನು ಮುಷ್ತಾಕ್, "ದಸರಾ ಉದ್ಘಾಟನೆಗೆ ದೊರೆತ ಅವಕಾಶ ನನಗೆ ಬಹಳ ಖುಷಿ ಕೊಟ್ಟಿದೆ. ಬಾಲ್ಯದಲ್ಲಿ ಅಪ್ಪ-ಅಮ್ಮನ ಜೊತೆ ಜಂಬೂಸವಾರಿ ನೋಡಲು ಹೋಗುತ್ತಿದ್ದೆ. ಇಂದು ಅದೇ ಹಬ್ಬವನ್ನು ಉದ್ಘಾಟಿಸುವ ಗೌರವ ಸಿಕ್ಕಿರುವುದು ಸಂತಸದ ವಿಷಯ," ಎಂದರು.
ತಮ್ಮ ಬಾಲ್ಯದ ಸೌಹಾರ್ದಯುತ ನೆನಪುಗಳನ್ನು ಮೆಲುಕು ಹಾಕಿದ ಅವರು, "ನಾವು ರಂಜಾನ್, ಬಕ್ರೀದ್ ಹಬ್ಬಗಳಲ್ಲಿ ನಮ್ಮ ನೆರೆಹೊರೆಯ ಬೇರೆ ಸಂಪ್ರದಾಯದವರ ಮನೆಗಳಿಗೆ ಹಬ್ಬದ ಅಡುಗೆಯನ್ನು ಕೊಟ್ಟು ಬರುತ್ತಿದ್ದೆವು. ಅವರ ಮನೆಯ ಹೋಳಿಗೆಯಲ್ಲಿ ಒಂದು ಪಾಲು ನನಗಾಗಿ ಮೀಸಲಿರುತ್ತಿತ್ತು. ಈ ಪ್ರೀತಿ, ವಾತ್ಸಲ್ಯ ಇಂದಿಗೂ ಮುಂದುವರಿದಿದೆ. ಇಂದು ನೀವು ತಂದಿರುವ ಈ ಬಾಗಿನ ಅದೇ ಪ್ರೀತಿಯ ಸಂಕೇತ. ಇಂತಹ ಅಭಿಮಾನ ಮತ್ತು ಪ್ರೀತಿಯೇ ನನ್ನ ಜೀವನದ ಶಕ್ತಿ ಮತ್ತು ನನ್ನ ಸಾಹಿತ್ಯಕ್ಕೆ ನಿಜವಾದ ಪ್ರೇರಣೆ," ಎಂದು ಭಾವನಾತ್ಮಕವಾಗಿ ನುಡಿದರು.
ವಿವಾದಕ್ಕೆ ಸ್ಪಷ್ಟನೆ
ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ ಅವರು, "ಚಾಮುಂಡೇಶ್ವರಿ ತಾಯಿ ಎನ್ನುವ ನಿಮ್ಮ ಭಾವನೆಯನ್ನು ನಾನು ಗೌರವಿಸುತ್ತೇನೆ. ಅನೇಕರು ದಸರೆಯನ್ನು ನಾಡಹಬ್ಬ ಎನ್ನುತ್ತಾರೆ, ಅದನ್ನೂ ಗೌರವಿಸುತ್ತೇನೆ. ನಾಡಹಬ್ಬವನ್ನು ಚಾಮುಂಡೇಶ್ವರಿ ಹಬ್ಬವೆಂದು ಕರೆಯುವುದು ನಮ್ಮ ಸಂಸ್ಕೃತಿಯ ಒಂದು ಭಾಗ. ಹಾಗಾಗಿ ನಾನೂ ಕೂಡ ಪ್ರೀತಿಯಿಂದ ಪಾಲ್ಗೊಳ್ಳುತ್ತೇನೆ," ಎಂದು ಹೇಳಿದರು.
ಹಿಂದಿನ ಭಾಷಣವೊಂದರ ವೈರಲ್ ಆಗಿದ್ದ ವಿಡಿಯೋ ತುಣುಕಿನ ಬಗ್ಗೆ ಸ್ಪಷ್ಟನೆ ನೀಡಿದ ಅವರು, "2023ರಲ್ಲಿ ನಡೆದಿದ್ದ ಜನ ಸಾಹಿತ್ಯ ಪ್ರತಿರೋಧ ಸಮಾವೇಶದಲ್ಲಿ ನಾನು ಮಾಡಿದ ಭಾಷಣದ ಒಂದು ಸಣ್ಣ ಭಾಗವನ್ನಷ್ಟೇ ಹರಿಯಬಿಡಲಾಗಿದೆ. ಆ ಸಮಾವೇಶದ ಪ್ರಮುಖ ಚರ್ಚಾ ವಿಷಯವೇ 'ಕನ್ನಡ ಭಾಷೆ, ಸಾಹಿತ್ಯ ಮತ್ತು ಅಲ್ಪಸಂಖ್ಯಾತ ಮುಸ್ಲಿಮರ ಕನ್ನಡದ ನಂಟು ಹಾಗೂ ಪರಕೀಯತೆ' ಎಂಬುದಾಗಿತ್ತು. ನಾನು ಆ ವಿಷಯದ ಕುರಿತಾಗಿಯೇ ಚರ್ಚಿಸಿದ್ದೇನೆಯೇ ಹೊರತು, ಯಾವುದೇ ಧರ್ಮದ ನಂಬಿಕೆಗೆ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ," ಎಂದು ವಿವರಿಸಿದರು.